ADVERTISEMENT

ಗೋಕರ್ಣ | ಹಳಿಗೆ ಬಾರದ ಕಡಲ ಮೀನುಗಾರಿಕೆ

ನಿರೀಕ್ಷಿತ ಪ್ರಮಾಣದಲ್ಲಿ ಸಿಗದ ಮೀನು:ಅತಂತ್ರ ಸ್ಥಿತಿಯಲ್ಲಿ ಮೀನುಗಾರ

ರವಿ ಸೂರಿ
Published 9 ಆಗಸ್ಟ್ 2023, 6:11 IST
Last Updated 9 ಆಗಸ್ಟ್ 2023, 6:11 IST
ಗೋಕರ್ಣ ಸಮೀಪದ ತದಡಿ ಬಂದರಿನಲ್ಲಿ ಬೋಟಿನಿಂದ ಪಿಕಪ್ ವಾಹನಕ್ಕೆ ಮೀನು ತುಂಬುತ್ತಿರುವುದು.
ಗೋಕರ್ಣ ಸಮೀಪದ ತದಡಿ ಬಂದರಿನಲ್ಲಿ ಬೋಟಿನಿಂದ ಪಿಕಪ್ ವಾಹನಕ್ಕೆ ಮೀನು ತುಂಬುತ್ತಿರುವುದು.   

ಗೋಕರ್ಣ: ಮೀನುಗಾರಿಕೆ ಪ್ರಾರಂಭವಾಗಿ ವಾರ ಕಳೆದರೂ ನಿರೀಕ್ಷಿತ ಪ್ರಮಾಣದ ಮೀನು ಸಿಗದಿರುವುದು ಮೀನುಗಾರರನ್ನು ನಿರಾಸೆಗೆ ತಳ್ಳಿದೆ. ಮೀನುಗಳ ಲಭ್ಯತೆ ಕಡಿಮೆ ಆಗುತ್ತಿರುವ ಪರಿಣಾಮ ನೀರಿಗೆ ಇಳಿಯುವ ಬೋಟುಗಳ ಸಂಖ್ಯೆಯೂ ಇಳಿಕೆಯಾಗಿದೆ.

ಕಳೆದೆರಡು ದಿನದಿಂದ ಪರ್ಸಿನ್ ಬೋಟ್‍ಗೆ ತಕ್ಕ ಮಟ್ಟದಲ್ಲಿ ಮೀನು ಸಿಕ್ಕಿದೆ. ಅವರೂ ಸಹ ಮೊದಲು ಬಂಗಡೆ ಬಲೆಯೊಂದಿಗೆ ಸಮುದ್ರಕ್ಕೆ ಇಳಿದಿದ್ದರು. ಆದರೆ ಮೀನು ಸಿಗದೇ, ತೋರಿ ಬಲೆ ಉಪಯೋಗಿಸುತ್ತಿದ್ದಾರೆ. ಆ ಬಲೆಯಲ್ಲಿ ಮೀನು ಸಿಗುತ್ತಿದ್ದು ಕೆಲವರಿಗೆ ಮಾತ್ರ ಲಾಭವಾಗಿದೆ.

ಫಿಶಿಂಗ್ ಬೋಟ್‍ನವರ (ಚಿಕ್ಕ ಬೋಟ್) ಸ್ಥಿತಿ ಮಾತ್ರ ಹೇಳತೀರದಾಗಿದೆ. ರಭಸದ ಗಾಳಿ, ಇನ್ನಿತರ ಕಾರಣಗಳಿಂದ ನೀರಿಗೆ ಇಳಿದಿದ್ದೇ ತಡವಾಗಿದೆ. ನೀರಿಗೆ ಇಳಿದ ಬೋಟಿಗೂ ಸಹ ಮೀನು ಸಿಗದೇ ಸಂಪೂರ್ಣ ನಷ್ಟ ಅನುಭವಿಸುತ್ತಿದ್ದಾರೆ. ಕಾರ್ಮಿಕರಿಗೆ ಸಂಬಳ ಕೊಡಲು, ಬೋಟ್‍ಗೆ ಉಪಯೋಗಿಸಿದ ಡೀಸೆಲ್ ಖರ್ಚು ಹುಟ್ಟದೇ ಪರದಾಡುತ್ತಿದ್ದಾರೆ.‌

ADVERTISEMENT

‘ಮೀನುಗಾರರಿಗೆ ಕಾಲ ಕಾಲಕ್ಕೆ ಎಲ್ಲ ಸೌಲಭ್ಯವನ್ನೂ ನೀಡಲಾಗುತ್ತಿದೆ. ಮೀನುಗಾರಿಕೆ ಇನ್ನೂ ವೇಗ ಪಡೆದಿಲ್ಲ. ಕಳೆದ ವರ್ಷವೂ ಸಹ ಹೀಗೆಯೇ ಆಗಿತ್ತು. ಪ್ರಾರಂಭದಲ್ಲಿ ಮೀನುಗಾರಿಕೆ ಇದೇ ರೀತಿ ಇತ್ತು. ಆಮೇಲೆ ಚೆನ್ನಾಗಿ ಆಗಿದೆ. ಈ ವರ್ಷವೂ ಸಹ ಅದೇ ನಿರೀಕ್ಷೆಯಲ್ಲಿ ಇದ್ದೇವೆ’ ಎಂದು ಮೀನುಗಾರಿಕಾ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.

‘ತದಡಿ ಬಂದರಿನ ಅಳಿವೆ ಹೂಳಿನಿಂದ ತುಂಬಿದ್ದೂ ಮೀನುಗಾರರಿಗೆ ತೊಂದರೆಯಾಗಿದೆ. ಹವಾಮಾನ ವೈಪರಿತ್ಯದಿಂದ ಮೀನುಗಾರಿಕೆ ನಡೆಸಲು ಸಮುದ್ರಕ್ಕೆ ಹೋಗುವುದೇ ದೊಡ್ಡ ಸವಾಲಾಗುತ್ತಿದೆ. ಬಂದರಿನ ಮತ್ತು ಅಳಿವೆಯ ಹೂಳೆತ್ತುವಂತೆ ಅನೇಕ ವರ್ಷದಿಂದ ಮನವಿ ಸಲ್ಲಿಸುತ್ತಾ ಬಂದಿದ್ದೇವೆ. ಆದರೂ ಏನೂ ಪ್ರಯೋಜನವಾಗಿಲ್ಲ’ ಎಂದು ಮೀನುಗಾರರ ಮುಖಂಡ ಉಮಾಕಾಂತ ಹೊಸ್ಕಟ್ಟ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗೋಕರ್ಣ ಸಮೀಪದ ತದಡಿ ಬಂದರಿನಲ್ಲಿ ಮೀನುಗಾರಿಕೆಗೆ ತೆರಳಲು ಸಜ್ಜಾಗಿ ನಿಂತ ಬೋಟುಗಳು. 
ಗೋಕರ್ಣ ಸಮೀಪದ ತದಡಿ ಬಂದರಿನಲ್ಲಿ ಮೀನು ತುಂಬಲು ಸಜ್ಜಾಗಿ ನಿಂತ ಕಂಟೇನರ್ ಮತ್ತು ವಾಹನಗಳು.  
ಮೀನುಗಾರಿಕೆ ತೆವಳುತ್ತಾ ಸಾಗುತ್ತಿದೆ. ನಿರೀಕ್ಷಸಿದ ಮಟ್ಟದಲ್ಲಿ ಮೀನು ಸಿಗುತ್ತಿಲ್ಲ.
ಅನಿತಾ ನಾಯ್ಕ ಮೀನುಗಾರಿಕೆ ಇಲಾಖೆ ಅಧಿಕಾರಿ

ಕಂಬಗಳಿಗೆ ಹಾನಿ ಮಂಜುಗಡ್ಡೆ ತುಂಬಿದ ವಾಹನ ಬಂದರಿನ ಒಳಗೆ ತರಲು ತದಡಿಯ ಮೀನುಗಾರಿಕಾ ಬಂದರಿನ ಮೂರು ಕಂಬಗಳಿಗೆ ಹಾನಿ ಮಾಡಲಾಗಿದೆ. ಈ ಬಗ್ಗೆ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ. ‘ಬೋಟ್‍ಗಳ ನಿಲುಗಡೆಗೆ ಅನುಕೂಲವಾಗಲು ನಿರ್ಮಿಸಲಾದ ಕಂಬಗಳಿಗಾಗಲಿ ಅಥವಾ ಇನ್ನಿತರ ಸೌಕರ್ಯಕ್ಕೆ ಹಾನಿ ಮಾಡುತ್ತಿರುವುದು ಸರಿಯಲ್ಲ. ಗಮನಕ್ಕೆ ಬಂದ ತಕ್ಷಣವೇ ದೂರು ಕೊಡಲಾಗಿದೆ’ ಎಂದು ಮೀನುಗಾರಿಕಾ ಇಲಾಖೆಯ ಅಧಿಕಾರಿ ಅನಿತಾ ನಾಯ್ಕ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.