ADVERTISEMENT

ಶಿರಸಿ | ಹಾನಿ ಬೆಟ್ಟದಷ್ಟು; ಸಿಕ್ಕಿದ್ದು ಬಿಡಿಗಾಸು

ಪುಷ್ಪ ಕೃಷಿ ಅಂದಾಜು ನಷ್ಟ 16 ಕೋಟಿ; ಪರಿಹಾರ ಬಂದಿದ್ದು ₹ 5.87 ಲಕ್ಷ

ಸಂಧ್ಯಾ ಹೆಗಡೆ
Published 23 ಜುಲೈ 2020, 19:30 IST
Last Updated 23 ಜುಲೈ 2020, 19:30 IST
ಸೇವಂತಿಗೆ ಕೃಷಿ (ಸಾಂದರ್ಭಿಕ ಚಿತ್ರ)
ಸೇವಂತಿಗೆ ಕೃಷಿ (ಸಾಂದರ್ಭಿಕ ಚಿತ್ರ)   

ಶಿರಸಿ: ಲಾಕ್‌ಡೌನ್ ಅವಧಿಯಲ್ಲಿ ಪುಷ್ಪ ಕೃಷಿಯಿಂದ ನಷ್ಟಕ್ಕೊಳಗಾದ ಬೆಳೆಗಾರರಲ್ಲಿ ಬಹಳಷ್ಟು ಮಂದಿ ಸರ್ಕಾರದ ಪರಿಹಾರ ಮೊತ್ತದಿಂದ ವಂಚಿತರಾಗಿದ್ದಾರೆ. ಅರ್ಜಿ ಸಲ್ಲಿಸಿದ್ದ ಅರ್ಧಕ್ಕಿಂತ ಹೆಚ್ಚು ಜನರಿಗೆ ಪರಿಹಾರ ಮೊತ್ತ ಕೈ ಸೇರಿಲ್ಲ.

ಕೋವಿಡ್ 19 ನಿಯಂತ್ರಣಕ್ಕೆ ಲಾಕ್‌ಡೌನ್ ಇದ್ದ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಸುಮಾರು ₹ 16.37 ಕೋಟಿ ಮೌಲ್ಯದ ಹೂಗಳು ನಷ್ಟವಾಗಿರುವ ಬಗ್ಗೆ ತೋಟಗಾರಿಕಾ ಇಲಾಖೆ, ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಅಂದಾಜು ಪಟ್ಟಿಯಲ್ಲಿ ತಿಳಿಸಿತ್ತು. ಆದರೆ, ಜಿಲ್ಲೆಯ ಬೆಳೆಗಾರರಿಗೆ ಈವರೆಗೆ ಸಿಕ್ಕಿರುವ ಪರಿಹಾರ ಮೊತ್ತ ₹ 5.87 ಲಕ್ಷ ಮಾತ್ರ ! 1297ಕ್ಕೂ ಹೆಚ್ಚು ರೈತರಿಗೆ ಒಟ್ಟು ₹ 13.52 ಲಕ್ಷದಷ್ಟು ಪರಿಹಾರ ಬರಬೇಕಾಗಿರುವುದು ಇನ್ನೂ ಬಾಕಿಯಿದೆ.

ಜಿಲ್ಲೆಯಲ್ಲಿ ಮುಕ್ತ ಬೇಸಾಯದ ಅಡಿಯಲ್ಲಿ 101 ಹೆಕ್ಟೇರ್ ಹಾಗೂ ಸಂರಕ್ಷಿತ ಬೇಸಾಯದ ಅಡಿಯಲ್ಲಿ 0.65 ಹೆಕ್ಟೇರ್‌ನಲ್ಲಿ ಭಟ್ಕಳ ಮಲ್ಲಿಗೆ, ಲಿಮೊನಿಯಂ, ಸೇವಂತಿಗೆ ಮೊದಲಾದ ಹೂಗಳನ್ನು ರೈತರು ಬೆಳೆದಿದ್ದರು. ಶುಭ ಸಮಾರಂಭ ನಡೆಯುವ ಅವಧಿಯಲ್ಲೇ, ಲಾಕ್‌ಡೌನ್ ಇದ್ದ ಕಾರಣ, ಇವುಗಳ ವ್ಯಾಪಾರ ಸಾಧ್ಯವಾಗದೇ, ಬೆಳೆಗಾರರು ಹಾನಿ ಅನುಭವಿಸಿದ್ದರು. ಅದಕ್ಕಾಗಿ, ಪುಷ್ಪ ಬೆಳೆ ನಷ್ಟಕ್ಕೆ ಸರ್ಕಾರ ಹೆಕ್ಟೇರ್‌ಗೆ ₹ 25ಸಾವಿರ ಪರಿಹಾರ ಧನ ಘೋಷಿಸಿದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.

ADVERTISEMENT

ತಾಂತ್ರಿಕ ಸಮಸ್ಯೆ:ಬೆಳೆ ಸರ್ವೆಯಲ್ಲಿ ಸೇರಿರುವ ಬೆಳೆಗಳನ್ನು ಮಾತ್ರ ಪರಿಹಾರ ಧನ ವಿತರಣೆಗೆ ಪರಿಗಣಿಸಲಾಗಿದೆ. ಜಿಲ್ಲೆಯ ಪುಷ್ಪ ಕೃಷಿಕರಲ್ಲಿ ಶೇ 90ರಷ್ಟು ಜನರು ಅತಿ ಚಿಕ್ಕ ಹಿಡುವಳಿದಾರರು. ಭಟ್ಕಳ ಮಲ್ಲಿಗೆ ಬೆಳೆಗಾರರಂತೂ, ಹಿತ್ತಲಿನಲ್ಲಿ 50,100 ಗಿಡಗಳನ್ನು ಬೆಳೆಸಿಕೊಂಡು ಅಷ್ಟಿಷ್ಟು ಆದಾಯ ಪಡೆಯುವವರು. ಇಂತಹ ಸಣ್ಣ ಬೆಳೆಗಳು, ಬೆಳೆ ಸರ್ವೆಯಲ್ಲಿ ಬಿಟ್ಟು ಹೋಗಿವೆ. ಹೀಗೆ ಬಿಟ್ಟು ಹೋಗಿರುವ ಫಲಾನುಭವಿಗಳಿಗೆ ತಾಂತ್ರಿಕ ಕಾರಣದಿಂದಾಗಿ, ಪರಿಹಾರ ಧನ ದೊರೆತಿಲ್ಲ ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

‘ಭಟ್ಕಳ ಮಲ್ಲಿಗೆ ಬೆಳೆಗಾರರು ಅತಿ ಹೆಚ್ಚು ಹಾನಿ ಅನುಭವಿಸಿದ್ದಾರೆ. ಕೆಲವರಿಗೆ ಪರಿಹಾರ ಧನ ಸಿಕ್ಕಿದ್ದರೂ, ₹ 500, ₹ 1000 ಮೊತ್ತ ಸಿಕ್ಕಿದೆ. ಆದರೆ, ವಾಸ್ತವದಲ್ಲಿ ಅವರು ₹ 50ಸಾವಿರಕ್ಕಿಂತ ಹೆಚ್ಚು ನಷ್ಟ ಅನುಭವಿಸಿದ್ದಾರೆ. ಹೂ ಬೆಳೆಯನ್ನೇ ನಂಬಿ ಜೀವನ ನಡೆಸಿದವರ ಆರ್ಥಿಕ ಸ್ಥಿತಿ ಶೋಚನೀಯವಾಗಿದೆ. ಸ್ವಲ್ಪ ಸುಧಾರಿಸಿಕೊಳ್ಳುವ ವೇಳೆಗೆ, ಮತ್ತೆ ಕಳೆದ ವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್‌ಡೌನ್ ಹೇರಿದ್ದರಿಂದ ಮಲ್ಲಿಗೆ ಮೊಳವೊಂದರ ದರ ₹ 6–7ಕ್ಕೆ ಕುಸಿಯಿತು’ ಎಂದು ಬೇಸರಿಸಿಕೊಂಡರು ಬೆಳೆಗಾರ ಮಹಿಳೆ ಮೇಘನಾ ಶಿರಾಲಿ.

*
ಜಿಲ್ಲೆಯಲ್ಲಿ ಸಣ್ಣ ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬೆಳೆ ಸಮೀಕ್ಷೆಯಿಂದ ಹೊರಗುಳಿದಿರುವವರಿಗೂ ಪರಿಹಾರ ಧನ ನೀಡಬೇಕೆಂಬ ಬೆಳೆಗಾರರ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರಲಾಗಿದೆ.
–ಬಿ.ಪಿ.ಸತೀಶ, ತೋಟಗಾರಿಕಾ ಇಲಾಖೆ ಉಪನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.