ADVERTISEMENT

ಟಿಎಸ್‌ಎಸ್‌ನಲ್ಲಿ ಡೇರೆ ಹೂಗಳ ಸಂತೆ

ಗ್ರಾಮೀಣ ಮಹಿಳೆಯರ ಆರ್ಥಿಕ ಸ್ವಾವಲಂಬನೆಯ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 6 ಜುಲೈ 2018, 13:29 IST
Last Updated 6 ಜುಲೈ 2018, 13:29 IST
ಶಿರಸಿಯಲ್ಲಿ ನಡೆಯುತ್ತಿರುವ ಡೇರೆ ಮೇಳದಲ್ಲಿ ಗಿಡ ಖರೀದಿಸುವ ಭರಾಟೆ
ಶಿರಸಿಯಲ್ಲಿ ನಡೆಯುತ್ತಿರುವ ಡೇರೆ ಮೇಳದಲ್ಲಿ ಗಿಡ ಖರೀದಿಸುವ ಭರಾಟೆ   

ಶಿರಸಿ: ಮುಂಗಾರಿನ ಹನಿಗೆ ಮುಖವರಳಿಸಿ ನಗುವ ಡೇರೆ ಹೂಗಳಿಗೆ ಮನಸೋಲದವರೇ ಇಲ್ಲ. ನೋಡುಗನ ಮನಸ್ಸನ್ನು ಆರ್ದ್ರಗೊಳಿಸುವ ಡೇರೆ ಹೂಗಳು ಇತ್ತೀಚಿನ ವರ್ಷಗಳಲ್ಲಿ ಸಣ್ಣ ಪ್ರಮಾಣದಆದಾಯ ಗಳಿಕೆಗೆ ದಾರಿಮಾಡಿಕೊಟ್ಟಿವೆ. ಗ್ರಾಮೀಣ ಮಹಿಳೆಯರ ಆರ್ಥಿಕ ಸ್ವಾವಲಂಬನೆಯ ಜತೆಗೆ, ತಳಿ ವೈವಿಧ್ಯ ಉಳಿಸಿಕೊಳ್ಳುವ ಪ್ರಯತ್ನವಾಗಿ ಎರಡು ದಿನಗಳ ಡೇರೆ ಮೇಳ ಶುಕ್ರವಾರದಿಂದ ಇಲ್ಲಿ ಆರಂಭವಾಗಿದೆ.

ಸ್ವರ್ಣವಲ್ಲಿ ಮಾತೃಮಂಡಳಿಯ ನೇತೃತ್ವದಲ್ಲಿ ಟಿಎಸ್‌ಎಸ್ ಆವರಣದಲ್ಲಿ ನಡೆಯುತ್ತಿರುವ ಮೇಳದಲ್ಲಿ ಕಲಗದ್ದೆ, ಗುಂಡಿಗದ್ದೆ, ಹೂಡ್ಲಮನೆ, ಇಸಳೂರು, ಗೊಣ್ಸರಮನೆ, ನೀರ್ನಳ್ಳಿ, ಕಡಬಾಳ,ಗುಬ್ಬಿಗದ್ದೆ, ಶಿರಗೋಡಬೈಲ್ ಮೊದಲಾದ ಊರುಗಳಿಂದ ಮಹಿಳೆಯರು ಗಿಡಗಳನ್ನು ಮಾರಾಟಕ್ಕೆ ತಂದಿದ್ದರು. ಡೇರೆ ಗಡ್ಡೆ, ಸೇವಂತಿಗೆ ಸಸಿಗಳು, ಆಲಂಕಾರಿಕ ಗಿಡಗಳು ಅಲ್ಲಿದ್ದವು.

ಕೆಂಪು ಲಿಲ್ಲಿಪುಟ್, ಕೇಸರಿ ಲಿಲ್ಲಿಪುಟ್ ಜಾತಿಯ ಡೇರೆ ಹೂಗಳು ಮತ್ತು ಅವುಗಳ ಗಿಡಗಳು ಪ್ರಮುಖ ಆಕರ್ಷಣೆಯಾಗಿದ್ದವು. ಸಂಡಿಗೆಕಡ್ಡಿ, ಕಮಲಡೇರೆ, ಬಂಗಾರಬಣ್ಣ, ಕಡ್ಡಿಡೇರೆ ಹೀಗೆ, ಅದನ್ನು ಬೆಳೆಸಿದ ಮಹಿಳೆಯರೇ ಗಿಡಕ್ಕೊಂದು ನಾಮಕರಣ ಮಾಡಿದ್ದರು. ಡೇರೆ ಹೂಗಳ ಹೆಸರೇ ಎಲ್ಲರನ್ನೂ ಸೆಳೆಯುವಂತಿತ್ತು. ಒಬ್ಬೊಬ್ಬ ಮಹಿಳೆ 50ರಿಂದ 150ರಷ್ಟು ಗಿಡಗಳನ್ನು ತಂದಿದ್ದರು. ಮಾರಾಟಕ್ಕೆ ತಂದಿದ್ದ ಮಹಿಳೆಯರೇ ಗಿಡಗಳ ವಿನಿಮಯ ಮಾಡಿಕೊಳ್ಳುತ್ತಿದ್ದರು. ನಗರವಾಸಿಗಳು ಕುತೂಹಲದಿಂದ ಹೂಗಳನ್ನು ನೋಡಿ, ಗಿಡಗಳನ್ನು ಖರೀದಿಸಿದರು.

ADVERTISEMENT

ಮೇಳಕ್ಕೆಂದೇ ಮಹಿಳೆಯರು ಗಿಡಗಳನ್ನು ಬೆಳೆಸುತ್ತಿರುವುದರಿಂದ ಪ್ರತಿವರ್ಷ ಎರಡು ಬಾರಿ ಡೇರೆ ಮೇಳ ಆಯೋಜಿಸಿ ಗಿಡಗಳ ಪ್ರದರ್ಶನ, ಮಾರಾಟಕ್ಕೆಅವಕಾಶ ಕಲ್ಪಿಸಲಾಗುತ್ತಿದೆ. ವೈವಿಧ್ಯ ತಳಿಯ ಡೇರೆ ಗಿಡಗಳು ಎಲ್ಲರ ಮನೆಯಲ್ಲಿ ಅರಳಲಿ ಎಂಬುದು ಮೇಳದ ಉದ್ದೇಶವಾಗಿದೆ ಎಂದು ಸಂಘಟಕರ ಪರವಾಗಿ ಅಂಜನಾ ಭಟ್ ಹೇಳಿದರು. ಟಿಎಸ್‌ಎಸ್ ಅಧ್ಯಕ್ಷ ಶಾಂತಾರಾಮ ಹೆಗಡೆ ಮೇಳಕ್ಕೆ ಚಾಲನೆ ನೀಡಿದರು. ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ, ಸ್ವರ್ಣವಲ್ಲಿ ಮಾತೃಮಂಡಳಿ ಅಧ್ಯಕ್ಷೆ ವೇದಾ ಹೆಗಡೆ ನೀರ್ನಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.