ADVERTISEMENT

ಅಕ್ರಮ ಮಾರಾಟ: 1,012 ಕ್ವಿಂಟಲ್ ಪಡಿತರ ಜಪ್ತಿ

ಆಹಾರ ಇಲಾಖೆಯಿಂದ ಒಂದೂವರೆ ವರ್ಷದ ಕಾರ್ಯಾಚರಣೆ: 11 ಪ್ರಕರಣ ದಾಖಲು

ಸದಾಶಿವ ಎಂ.ಎಸ್‌.
Published 8 ಜೂನ್ 2022, 19:30 IST
Last Updated 8 ಜೂನ್ 2022, 19:30 IST
ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಪಡಿತರ ಸಾಮಗ್ರಿಯನ್ನು ಆಹಾರ ಇಲಾಖೆಯ ಅಧಿಕಾರಿಗಳು ಜಪ್ತಿ ಮಾಡಿರುವುದು (ಸಂಗ್ರಹ ಚಿತ್ರ)
ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಪಡಿತರ ಸಾಮಗ್ರಿಯನ್ನು ಆಹಾರ ಇಲಾಖೆಯ ಅಧಿಕಾರಿಗಳು ಜಪ್ತಿ ಮಾಡಿರುವುದು (ಸಂಗ್ರಹ ಚಿತ್ರ)   

ಕಾರವಾರ: ಬಡವರ ಊಟಕ್ಕಾಗಿ ವಿತರಿಸುವ ಪಡಿತರ ಸಾಮಗ್ರಿ ಮಾರಾಟ, ಕೆಲವರ ಪಾಲಿಗೆ ಹಣ ಮಾಡುವ ದಂಧೆ. ಇಂಥವರ ಮೇಲೆ ದಾಳಿ ಮಾಡುತ್ತಿರುವ ಆಹಾರ ಇಲಾಖೆ ಅಧಿಕಾರಿಗಳು, ಒಂದೂವರೆ ವರ್ಷದಲ್ಲಿ 11 ಪ್ರಕರಣಗಳನ್ನು ದಾಖಲಿಸಿದ್ದಾರೆ. ₹ 24.62 ಲಕ್ಷ ಮೌಲ್ಯದ 1,012 ಕ್ವಿಂಟಲ್ ಸಾಮಗ್ರಿಯನ್ನು ಜಪ್ತಿ ಮಾಡಿದ್ದಾರೆ.

ಜಿಲ್ಲೆಯ ಪಡಿತರ ಕೇಂದ್ರಗಳಿಗೆ ಹಂಚಿಕೆಯಾಗಬೇಕಿದ್ದ ಆಹಾರ ಧಾನ್ಯಗಳನ್ನು ಕದ್ದು ಬೇರೆಡೆಗೆ ಸಾಗಿಸುವುದು ವಂಚನೆಯ ಒಂದು ವಿಧಾನ. ಅದೇರೀತಿ, ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಕದ್ದು ಸಾಗಿಸುವುದು ಮತ್ತೊಂದು ರೀತಿಯ ಅಕ್ರಮವಾಗಿದೆ.

ಉತ್ತರ ಕನ್ನಡದಲ್ಲಿ ದಾಖಲಾಗಿರುವ 11 ಪ್ರಕರಣಗಳಲ್ಲಿ, ಬೇರೆ ಜಿಲ್ಲೆಗಳಿಗೆ ನಿಯಮ ಬಾಹಿರವಾಗಿ ಪಡಿತರ ಸಾಗಿಸುತ್ತಿದ್ದ ಮೂರು ಪ್ರಕರಣಗಳಿವೆ. ಹೊನ್ನಾವರದ ಗೇರುಸೊಪ್ಪ ವೃತ್ತದಲ್ಲಿ ಒಂದು ಹಾಗೂ ಶಿರಸಿಯ ಚಿಪಗಿ ಚೆಕ್‌ಪೋಸ್ಟ್‌ನಲ್ಲಿ ಎರಡು ಪ್ರಕರಣಗಳು ಪತ್ತೆ ಆಗಿದ್ದವು.

ADVERTISEMENT

ಜಿಲ್ಲೆಯೊಳಗಿನ ದಾಳಿಗಳಲ್ಲಿ, ಹಳಿಯಾಳದ ಕಿಲ್ಲಾ ವೃತ್ತದ ಬಳಿ, ಅಂಕೋಲಾದ ಖಾರ್ವಿವಾಡ ಹಾಗೂ ಕೇಣಿ ಮಜಿರೆಯ ಮನೆಯೊಂದರಲ್ಲಿ, ಹೊನ್ನಾವರದ ಕಾಸರಕೋಡು ಹಿರೇಮಠ, ಸಿದ್ದಾಪುರದ ಅಮಿನಾ ವೃತ್ತ, ಕಾರವಾರದ ಬಿಣಗಾ, ತೋಡೂರು, ಮುಂಡಗೋಡದ ಕಿಲ್ಲಿ ಓಣಿಯ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಪಡಿತರ ಸಾಮಗ್ರಿಯನ್ನು ಅಧಿಕಾರಿಗಳು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

ಈ ದಂಧೆ ಮಾಡುವವರು, ನೆರೆಯ ಜಿಲ್ಲೆಗಳಿಂದ ಹೊರಟ ಪಡಿತರ ಸಾಗಣೆಯ ಲಾರಿಯ ಮಾರ್ಗ ಬದಲಾವಣೆ ಮಾಡಿಸುತ್ತಾರೆ. ಕರಾವಳಿಯ ಇತರ ಜಿಲ್ಲೆಗಳಿಗೆ ಅಕ್ರಮವಾಗಿ ಕಳುಹಿಸುತ್ತಾರೆ. ಅಲ್ಲಿ ಖಾಸಗಿ ವರ್ತಕರಿಗೆ ಕಡಿಮೆ ದರಕ್ಕೆ ಮಾರಾಟ ಮಾಡಿ ಸಿಕ್ಕಿದಷ್ಟು ಹಣವನ್ನು ಜೇಬಿಗಿಳಿಸುತ್ತಾರೆ.

ಕೋವಿಡ್ ಸಂದರ್ಭದಲ್ಲಿ ಬಡವರಿಗೆ ಸರಿಯಾಗಿ ಆದಾಯವಿಲ್ಲದೇ ಸಂಕಷ್ಟಕ್ಕೆ ಒಳಗಾಗಿದ್ದರು. ಆಗ ಯಾರೂ ಆಹಾರಕ್ಕಾಗಿ ಪರದಾಡಬಾರದು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರವು ಪಡಿತರ ‍ಪೂರೈಕೆಯ ಪ್ರಮಾಣವನ್ನು ಹೆಚ್ಚಿಸಿತ್ತು. ‘ಅಂತ್ಯೋದಯ ಯೋಜನೆ’ಯಡಿ 35 ಕೆ.ಜಿ, ಇತರ ಫಲಾನುಭವಿಗಳಿಗೆ ತಲಾ 10 ಕೆ.ಜಿ.ಗಳಷ್ಟು ಅಕ್ಕಿಯನ್ನು ಹೆಚ್ಚುವರಿಯಾಗಿ ವಿತರಿಸಲಾಗುತ್ತಿದೆ. ಈ ವರ್ಷ ಸೆಪ್ಟೆಂಬರ್‌ವರೆಗೂ ಹೆಚ್ಚುವರಿ ಪೂರೈಕೆಯಾಗಲಿದೆ.

ಮನೆಯಲ್ಲಿ ಹೆಚ್ಚುವರಿಯಾಗಿ ಉಳಿಯುವ ಅಕ್ಕಿ, ಗೋಧಿ ಮುಂತಾದವುಗಳನ್ನು ಮಾರಾಟ ಮಾಡುವವರೂ ಈ ಅಕ್ರಮದಲ್ಲಿ ಪಾಲುದಾರರಾಗುತ್ತಾರೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ವಿವರಿಸುತ್ತಾರೆ.

‘ನಿರ್ದಾಕ್ಷಿಣ್ಯ ಕ್ರಮ’

‘ಪಡಿತರ ಸಾಮಗ್ರಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವುದು ಅವಶ್ಯಕ ವಸ್ತು 1955ರ ಕಾಯ್ದೆಯಡಿ ಶಿಕ್ಷಾರ್ಹ ಅಪರಾಧ. ನಿಯಮ ಬಾಹಿರವಾಗಿ ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಆ ಕುಟುಂಬಗಳ ಪಡಿತರ ಚೀಟಿಯನ್ನೂ ರದ್ದು ಮಾಡಲಾಗುತ್ತದೆ. ಈ ಬಗ್ಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಫಲಕಗಳನ್ನೂ ಅಳವಡಿಸಲಾಗಿದೆ’ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಮಂಜುನಾಥ ರೇವಣಕರ್‌ ಹೇಳುತ್ತಾರೆ.

‘ಇಲಾಖೆ ಸಿಬ್ಬಂದಿ ಕಿರಾಣಿ ಅಂಗಡಿಗಳಿಗೆ, ನ್ಯಾಯಬೆಲೆ ಅಂಗಡಿಗಳಿಗೆ ಆಗಾಗ್ಗೆ ಅನಿರೀಕ್ಷಿತವಾಗಿ ಭೇಟಿ ನೀಡುತ್ತಾರೆ. ಪಡಿತರ ವಿತರಣೆ ಅಕ್ಕಿ, ದವಸ ಧಾನ್ಯಗಳನ್ನು ಅಕ್ರಮವಾಗಿ ಸಂಗ್ರಹಿಸಿ ಮಾರಾಟ ಮಾಡಿದ್ದು ಸಾಬೀತಾದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುತ್ತದೆ’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.