ಶಿರಸಿ: ‘ಅರಣ್ಯ ಅತಿಕ್ರಮಣದಾರರ ತಿರಸ್ಕರಿಸಲ್ಪಟ್ಟ ಅರ್ಜಿ ಪುನರ್ ಪರಿಶೀಲನೆ ಪ್ರಕ್ರಿಯೆ ಜರುಗಿಸದೇ ಈ ಹಿಂದೆ ತಿರಸ್ಕರಿಸಲ್ಪಟ್ಟ ಅಂಕಿ–ಅಂಶದ ಆಧಾರದ ಮೇಲೆ ರಾಜ್ಯ ಸರ್ಕಾರವು 73,206 ಅರ್ಜಿ ತಿರಸ್ಕರಿಸಿದ ವರದಿಯನ್ನು ಕೇಂದ್ರ ಸರ್ಕಾರ ಹಾಗೂ ಸುಪ್ರೀಂ ಕೊರ್ಟ್‍ಗೆ ಸಲ್ಲಿಸಿರುವುದು ಖಂಡನೀಯ’ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ನಗರದ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಕಚೇರಿಯಲ್ಲಿ ಬುಧವಾರ ರಾಜ್ಯ ಬುಡಕಟ್ಟು ಕಲ್ಯಾಣ ಇಲಾಖೆಯು ಕೇಂದ್ರ ಸರ್ಕಾರಕ್ಕೆ ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಸಲ್ಲಿಸಿದ ವರದಿಯ ಮಾಹಿತಿ ಪ್ರದರ್ಶಿಸಿ ಅವರು ಮಾತನಾಡಿದರು.
‘ಈಚೆಗೆ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಅರಣ್ಯ ಹಕ್ಕು ಕಾಯಿದೆಯ ಪ್ರಗತಿಯ ವರದಿಯನ್ನು ಸಲ್ಲಿಸಲಾಗಿದೆ. ಆದರೆ ಅರ್ಜಿಗಳ ಪುನರ್ ಪರಿಶೀಲಿಸದೇ, ಈ ಹಿಂದೆ ತಿರಸ್ಕರಿಸಲ್ಪಟ್ಟ ಅಂಕಿ–ಅಂಶದ ಆಧಾರದ ಮೇಲೆ ವರದಿ ಸಲ್ಲಿಸಿರುವುದು ಸರಿಯಲ್ಲ’ ಎಂದರು.
‘ಕಾನೂನು ಪ್ರಕ್ರಿಯೆ ಅನುಸರಿಸದೆ, ನಿಯಮಕ್ಕೆ ವ್ಯತಿರಿಕ್ತವಾಗಿ ಅರ್ಜಿಗಳು ತಿರಸ್ಕರಿಸಲ್ಪಟ್ಟ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಸ್ವಯಂ ಪ್ರೇರಿತವಾಗಿ ತಿರಸ್ಕರಿಸಲ್ಪಟ್ಟ ಅರ್ಜಿಯನ್ನು ಪುನರ್ ಪರಿಶೀಲಿಸಲು ಸುಪ್ರಿಂ ಕೋರ್ಟ್‍ಗೆ ಅಫಿಡವೀಟ್ ಸಲ್ಲಿಸಿದೆ. ತಿರಸ್ಕರಿಸಲ್ಪಟ್ಟ ಅರ್ಜಿಗಳನ್ನು ಪುನರ್ ಪರಿಶೀಲಿಸಲು ಆದೇಶವಾಗಿತ್ತು. ಆದರೆ ಕೋರ್ಟ್ ಆದೇಶ ಉಲ್ಲಂಘಿಸಿ ಮತ್ತು ಕೇಂದ್ರ ಸರ್ಕಾರದ ಮಾರ್ಗದರ್ಶನಕ್ಕೆ ವ್ಯತಿರಿಕ್ತವಾಗಿ ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿನ ತಿರಸ್ಕರಿಸಿದ ಅರ್ಜಿಗಳನ್ನು ಪುನರ್ ಪರಿಶೀಲಿಸದೇ ವರದಿ ಸಲ್ಲಿಸಲಾಗಿದೆ’ ಎಂದು ದೂರಿದರು.
‘ವರದಿಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 88,453 ಅರ್ಜಿಗಳು ಬಂದಿದ್ದು, ಅವುಗಳಲ್ಲಿ 2,867 ಅರ್ಜಿ ಅಂದರೆ ಶೇ 3.24 ಸಾಗುವಳಿ ಹಕ್ಕು ಪತ್ರ ವಿತರಿಸಲಾಗಿದೆ. ಅಲ್ಲದೇ, ಬಂದ ಅರ್ಜಿಗಳಲ್ಲಿ 73,206 ಅಂದರೆ ಶೇ 82.76 ಅರ್ಜಿಗಳು ತಿರಸ್ಕರಿಸಲ್ಪಟ್ಟಿದೆ. ಕೇವಲ 12,380 ಅರ್ಜಿಗಳು ವಿಚಾರಣೆ ಹಂತದಲ್ಲಿದೆ ಎಂದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ’ ಎಂದು ಹೇಳಿದರು.
ಅರ್ಜಿಗಳನ್ನು ಪುನರ್ ಪರಿಶೀಲಿಸುವ ಸುಪ್ರಿಂ ಕೋರ್ಟ್ ಆದೇಶ ಪಾಲಿಸದ ರಾಜ್ಯ ಸರ್ಕಾರದ ನಡೆಯು ಕೋರ್ಟ್ ನಿಂದನೆಗೆ ಕಾರಣವಾಗಿದೆರವೀಂದ್ರ ನಾಯ್ಕ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ
‘ಕೇಂದ್ರ ಸರ್ಕಾರವು ತಿರಸ್ಕರಿಸಲ್ಪಟ್ಟ ಅರ್ಜಿಯನ್ನು ತಿರಸ್ಕರಿಸಲ್ಪಟ್ಟ ಸಮಿತಿಯಿಂದಲೇ ಪುನರ್ ಪರಿಶೀಲಿಸಬೇಕೆಂದು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲ್ಪಟ್ಟಿತ್ತು. ಆದರೆ ಕರ್ನಾಟಕದ ಎಲ್ಲಾ ಜಿಲ್ಲೆಗಳ ಅರ್ಜಿಗಳನ್ನು ಪುನರ್ ಪರಿಶೀಲಿಸದೇ ಒಟ್ಟು ಸ್ವೀಕರಿಸಿದ 260139 ಅರ್ಜಿಗಳಲ್ಲಿ 266139 ಅರ್ಜಿಗಳನ್ನು ತಿರಸ್ಕರಿಸಲ್ಪಟ್ಟಿದೆ ಹಾಗೂ ರಾಜ್ಯದಲ್ಲಿ 16682 ಹಕ್ಕು ಪತ್ರ ನೀಡಲಾಗಿದೆ ಎಂದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ’ ಎಂದು ರವೀಂದ್ರ ನಾಯ್ಕ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.