ADVERTISEMENT

ಒಕ್ಕಲೆಬ್ಬಿಸುವ ನೀತಿ ವಿರುದ್ಧ ಪತ್ರ ಚಳವಳಿ

ಅರಣ್ಯವಾಸಿಗಳಿಗೆ ಹಕ್ಕು ನೀಡಿ, ಯೋಜನೆಗಳಿಗೆ ಭೂಮಿ ಸಾಕು

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 7:22 IST
Last Updated 7 ಫೆಬ್ರುವರಿ 2026, 7:22 IST
ಅಘನಾಶಿನಿ ನದಿ ಜೋಡಣೆ ಯೋಜನೆಯನ್ನು ವಿರೋಧಿಸುವ ಹಿನ್ನೆಲೆಯಲ್ಲಿ ಅರಣ್ಯವಾಸಿಗಳು ಮುಖ್ಯಮಂತ್ರಿಗೆ ಬರೆಯಲಿರುವ ಪತ್ರವನ್ನು ಶಿರಸಿಯಲ್ಲಿ ರವೀಂದ್ರ ನಾಯ್ಕ ಪ್ರದರ್ಶಿಸಿದರು
ಅಘನಾಶಿನಿ ನದಿ ಜೋಡಣೆ ಯೋಜನೆಯನ್ನು ವಿರೋಧಿಸುವ ಹಿನ್ನೆಲೆಯಲ್ಲಿ ಅರಣ್ಯವಾಸಿಗಳು ಮುಖ್ಯಮಂತ್ರಿಗೆ ಬರೆಯಲಿರುವ ಪತ್ರವನ್ನು ಶಿರಸಿಯಲ್ಲಿ ರವೀಂದ್ರ ನಾಯ್ಕ ಪ್ರದರ್ಶಿಸಿದರು   

ಶಿರಸಿ: ‘ಜಿಲ್ಲೆಯ ಅರಣ್ಯ ಭೂಮಿ ಇನ್ನು ಮುಂದೆ ಯೋಜನೆಗಳಿಗೆ ಸಾಕು, ಮೊದಲು ಅರಣ್ಯವಾಸಿಗಳಿಗೆ ಭೂಮಿ ಹಕ್ಕು ನೀಡಿ ಎಂದು ಆಗ್ರಹಿಸಿ ಮುಖ್ಯಮಂತ್ರಿಗೆ ಪತ್ರ ಬರೆಯಲು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ನಿರ್ಧರಿಸಿದೆ’ ಎಂದು ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.

ನಗರದ ಹೋರಾಟಗಾರರ ವೇದಿಕೆಯ ಕಾರ್ಯಾಲಯದಲ್ಲಿ ಶುಕ್ರವಾರ ಅವರು ಅಘನಾಶಿನಿ ನದಿ ಜೋಡಣೆ ಯೋಜನೆಯನ್ನು ವಿರೋಧಿಸುವ ಹಿನ್ನೆಲೆಯಲ್ಲಿ ಅರಣ್ಯವಾಸಿಗಳು ಮುಖ್ಯಮಂತ್ರಿಗೆ ಬರೆಯಲಿರುವ ಪತ್ರ ಪ್ರದರ್ಶಿಸಿ ಮಾತನಾಡಿದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ವಿವಿಧ ಯೋಜನೆಗಳಿಗಾಗಿ 64,000 ಹೆಕ್ಟೇರ್ ಅರಣ್ಯ ಭೂಮಿಯನ್ನು ನೀಡಲಾಗಿದ್ದರೂ, ಜೀವನಕ್ಕಾಗಿ ಅರಣ್ಯವನ್ನೇ ನಂಬಿದ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವ ಸರ್ಕಾರದ ನೀತಿ ಖೇದಕರ. ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಸುಮಾರು 80 ಸಾವಿರ ಅರಣ್ಯವಾಸಿ ಕುಟುಂಬಗಳು 53 ಸಾವಿರ ಎಕರೆ ಪ್ರದೇಶದಲ್ಲಿ ಜೀವನೋಪಾಯಕ್ಕಾಗಿ ಸಾಗುವಳಿ ಮಾಡುತ್ತಿರುವುದು ದಾಖಲೆಗಳಲ್ಲಿದೆ. ಅರಣ್ಯ ಹಕ್ಕು ಕಾಯಿದೆ ಜಾರಿಗೆ ಬಂದಿದ್ದರೂ ಸಾಗುವಳಿ ಹಕ್ಕು ನೀಡುವುದು ಮಾತ್ರ ಮರೀಚಿಕೆಯಾಗಿದೆ ಎಂದರು.

ADVERTISEMENT

ಸುಪ್ರೀಂ ಕೋರ್ಟ್‌ನಲ್ಲಿ ಒಕ್ಕಲೆಬ್ಬಿಸುವ ಪ್ರಕ್ರಿಯೆಯ ಅಂತಿಮ ವಿಚಾರಣೆ ನಡೆಯುತ್ತಿರುವ ಈ ಸಂಕಷ್ಟದ ಸಮಯದಲ್ಲಿಯೂ ಸರ್ಕಾರವು ಧಾರಾಳವಾಗಿ ಅರಣ್ಯೇತರ ಚಟುವಟಿಕೆಗಳಿಗೆ ಭೂಮಿ ಬಿಡುಗಡೆ ಮಾಡುತ್ತಿರುವುದು ಖಂಡನೀಯ. ಜಿಲ್ಲೆಯ ಧಾರಣ ಸಾಮರ್ಥ್ಯ ಮೀರಿ ಅರಣ್ಯ ಭೂಮಿಯನ್ನು ಯೋಜನೆಗಳಿಗೆ ಬಲಿ ಕೊಡುತ್ತಿರುವುದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲು ಈ ಪತ್ರ ಚಳವಳಿ ಹಮ್ಮಿಕೊಳ್ಳಲಾಗಿದೆ’ ಎಂದು ಅವರು ವಿವರಿಸಿದರು.

‘ಮುಂಡಗೋಡು ತಾಲ್ಲೂಕಿನಲ್ಲಿ ಟಿಬೇಟಿಯನ್ ಕಾಲೊನಿಗೆ 1,600 ಹೆಕ್ಟೇರ್ ಭೂಮಿಯನ್ನು ನೀಡುವ ಸರ್ಕಾರ, ತಲೆತಲಾಂತರದಿಂದ ಇಲ್ಲೇ ಬದುಕುತ್ತಿರುವ 80 ಸಾವಿರ ಅರಣ್ಯವಾಸಿ ಕುಟುಂಬಗಳಿಗೆ ಕೇವಲ 53 ಸಾವಿರ ಎಕರೆ ಭೂಮಿ ನೀಡಲು ಹಿಂದೇಟು ಹಾಕುತ್ತಿರುವುದು ವಿಪರ್ಯಾಸ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಅಘನಾಶಿನಿ ನದಿ ಜೋಡಣೆ ಯೋಜನೆಯನ್ನು ವಿರೋಧಿಸಿ ಫೆ.11ರ ಬೆಳಿಗ್ಗೆ 10.30ಕ್ಕೆ ಸಿದ್ದಾಪುರದ ನೆಹರು ಮೈದಾನದಲ್ಲಿ ಬೃಹತ್ ಸಭೆ ಜರುಗಲಿದ್ದು, ಅಂದು ಅರಣ್ಯವಾಸಿಗಳು ವೈಯಕ್ತಿಕವಾಗಿ ಮುಖ್ಯಮಂತ್ರಿಗೆ ಜಿಲ್ಲಾಡಳಿತದ ಮೂಲಕ ಮನವಿ ಸಲ್ಲಿಸಲಿದ್ದಾರೆ’ ಎಂದು ಹೇಳಿದರು.

ಸಭೆಯಲ್ಲಿ ಸಂಘಟನೆಯ ಜಿಲ್ಲಾ ಘಟಕದ ಸಂಚಾಲಕ ಇಬ್ರಾಹೀಂ ಗೌಡಳ್ಳಿ, ನಾಗರಾಜ ದೇವಸ್ಥಳಿ, ಮಲ್ಲೇಶಿ ಬಾಳೆಹಳ್ಳಿ, ನೆಹರು ನಾಯ್ಕ ಬಿಳೂರು, ಎಂ.ಆರ್.ನಾಯ್ಕ ಕಂಡ್ರಾಜಿ, ಚಂದ್ರು ಶಾನಭಾಗ ಬಂಡಲ, ಲಕ್ಷ್ಮಣ ನಾಯ್ಕ ದೊಡ್ನಳ್ಳಿ, ವಿನೋದ ತಳೇಕರ ಹಾಸಣಗಿ, ಕುಸುಮಾ ಬೇಡರ, ಗಂಗಾ ನಾಯ್ಕ ಗೋಳಿ, ಪರಮೇಶ್ವರ ವಾನಳ್ಳಿ, ಈರಪ್ಪ ಕಾಗಿನಳಿ ಇತರರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.