
ಮುಂಡಗೋಡ ಅರಣ್ಯ ಇಲಾಖೆ ಕಚೇರಿ ಆವರಣದಲ್ಲಿ ಅರಣ್ಯ ಅತಿಕ್ರಮಣದಾರರು ಪ್ರತಿಭಟನೆ ನಡೆಸಿದರು
ಮುಂಡಗೋಡ: ಅರಣ್ಯ ಹಕ್ಕು ಕಾಯಿದೆಯಡಿ ಅರ್ಜಿ ಸಲ್ಲಿಸಿರುವ ಅರಣ್ಯವಾಸಿಗಳನ್ನು 27 ವರ್ಷಗಳ ಹಿಂದೆ ದಾಖಲಿಸಿದ ಕ್ರಿಮಿನಲ್ ಪ್ರಕರಣದ ಆಧಾರದ ಮೇಲೆ ಒಕ್ಕಲೆಬ್ಬಿಸುವ ನೀತಿ ಖಂಡಿಸಿ, ಅರಣ್ಯ ಅತಿಕ್ರಮಣದಾರರು ಇಲ್ಲಿನ ಅರಣ್ಯ ಕಚೇರಿ ಆವರಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಅರಣ್ಯ ಭೂಮಿ ಹಕ್ಕು ಹೋರಾಟಗಾರ ವೇದಿಕೆ ಅಧ್ಯಕ್ಷ ರವಿಂದ್ರ ನಾಯ್ಕ ಮಾತನಾಡಿ, ‘ಅರಣ್ಯ ಇಲಾಖೆಯು ಈಚೆಗೆ ಕೈಗೊಂಡಿರುವ ಒಕ್ಕಲೆಬ್ಬಿಸುವ ನೀತಿ ಮತ್ತು ಆದೇಶ ತಾಂತ್ರಿಕ ದೋಷದಿಂದ ಕೂಡಿದೆ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಾಧಿಕಾರದಲ್ಲಿ ಅರಣ್ಯವಾಸಿಗಳಿಗೆ ಕಾನೂನಾತ್ಮಕ ನೋಟಿಸ್ ನೀಡುತ್ತಿರುವುದು ಖಂಡನೀಯ’ ಎಂದರು.
‘ಅರಣ್ಯ ಹಕ್ಕು ಕಾಯಿದೆ ಅರ್ಜಿ ವಿಚಾರಣೆ ಹಂತದಲ್ಲಿ, ಒಕ್ಕಲೆಬ್ಬಿಸುತ್ತಿರುವ ಪ್ರಕ್ರಿಯೆ ಜರುಗುತ್ತಿರುವುದು ಅರಣ್ಯವಾಸಿಗಳಲ್ಲಿ ಆತಂಕ ಉಂಟು ಮಾಡಿದೆ. ಹಲವು ದಶಕಗಳಿಂದ ವಾಸ್ತವ್ಯ ಹಾಗೂ ಸಾಗುವಳಿಗಾಗಿ ಅರಣ್ಯ ಪ್ರದೇಶವನ್ನು ಜನರು ಅವಲಂಬಿಸಿದ್ದು, ಅವರನ್ನು ಒಕ್ಕಲೆಬ್ಬಿಸುವುದು ಸರಿಯಲ್ಲ’ಎಂದು ತಿಳಿಸಿದರು.
‘ಅರಣ್ಯ ಸಾಗುವಳಿದಾರರ ಮೇಲೆ ಅರಣ್ಯ ಇಲಾಖೆಯು 1998ರಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದೆ. ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಸಾಗುವಳಿ ಅರ್ಜಿ ವಿಚಾರಣೆ ಹಂತದಲ್ಲಿರುವಾಗ, ಒಕ್ಕಲೆಬ್ಬಿಸಬಾರದು ಎಂಬ ಕಾನೂನು ಮತ್ತು ಕೇಂದ್ರ ಸರ್ಕಾರದ
ಆದೇಶವನ್ನು ಇಲ್ಲಿ ಉಲ್ಲಂಘಿಸಲಾಗುತ್ತಿದೆ. 3 ಎಕರೆ ಸಾಗುವಳಿದಾರರಿಗೆ ರಕ್ಷಣೆ ನೀಡುವ ರಾಜ್ಯ ಸರ್ಕಾರದ ಸುತ್ತೋಲೆಗೆ ವ್ಯತಿರಿಕ್ತವಾಗಿ ಅಧಿಕಾರಿಗಳು ವರ್ತಿಸುತ್ತಿದ್ದಾರೆ’ಎಂದು ಅವರು ದೂರಿದರು.
‘ಒಂದಿನ ಬೇಲಿ ತೆಗೆಯುವುದು. ಮತ್ತೊಂದು ದಿನ ಸಾಗುವಳಿಗೆ ಅಡ್ಡಿ ಪಡಿಸುವುದು. ಇನ್ನೊಂದು ದಿನ ನೋಟಿಸ್ ನೀಡುವುದನ್ನು ನೋಡಿ, ಅರಣ್ಯವಾಸಿಗಳಿಗೆ ಕಿರಿಕಿರಿಯಾಗಿದೆ. ಇಷ್ಟು ವರ್ಷ ಸಾಗುವಳಿ ಮಾಡಿಕೊಂಡು ಬರುತ್ತಿದ್ದರೂ, ಯಾವಾಗ ಮನೆ, ತೋಟ ಕಿತ್ತು ಹಾಕುತ್ತಾರೆ ಎಂಬ ಭಯ ಮನೆ ಮಾಡಿದೆ’ ಎಂದು ಅರಣ್ಯವಾಸಿಗಳು ಅಧಿಕಾರಿಗಳಲ್ಲಿ ಅಳಲು ತೋಡಿಕೊಂಡರು.
ಅರಣ್ಯ ಭೂಮಿ ಹಕ್ಕು ಹೋರಾಟಗಾರ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ಶಿವಾನಂದ ಜೋಗಿ, ಗಣಪತಿ ನಾಯ್ಕ, ಮಂಜುನಾಥ ನಾಯ್ಕ, ಸ್ವಾಮಿ ಹಿರೇಮಠ, ಮಲ್ಲಿಕಾರ್ಜುನ ಓಣಿಕೇರಿ, ಮುನೇಶ್ವರ ಹನುಮಾಪುರ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವಿ ಹುಲಕೋಟಿ, ಆರ್‌ಎಫ್‌ಒ ಅಪ್ಪಾರಾವ್ ಕಲಶೆಟ್ಟಿ, ಆರ್‌ಎಫ್‌ಒ ಬಿ.ವಿರೇಶ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.