ADVERTISEMENT

‍ಪ್ರಸಕ್ತ ಅಧಿಕವೇಶನದಲ್ಲಿ ಕಾನೂನು ತಿದ್ದುಪಡಿ

ಫಾರಂ ನಂ.3ರ ಸಮಸ್ಯೆಯ ಪರಿಹಾರಕ್ಕೆ ಕೂಡಲೇ ಕ್ರಮ: ಸಚಿವ ಹೆಬ್ಬಾರ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2021, 4:35 IST
Last Updated 2 ಮಾರ್ಚ್ 2021, 4:35 IST
ಯಲ್ಲಾಪುರ ಪಟ್ಟಣ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಕಾರ್ಮಿಕ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಮಾತನಾಡಿದರು
ಯಲ್ಲಾಪುರ ಪಟ್ಟಣ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಕಾರ್ಮಿಕ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಮಾತನಾಡಿದರು   

ಯಲ್ಲಾಪುರ: ರಾಜ್ಯದಾದ್ಯಂತ ಸಮಸ್ಯೆ ಸೃಷ್ಟಿಸಿರುವ ಇ-ಸ್ವತ್ತು ಹಾಗೂ ಫಾರಂ ನಂ.3 ರ ಸಮಸ್ಯೆಯ ಪರಿಹಾರಕ್ಕಾಗಿ ವಿಧಾನಸಭೆಯ ಪ್ರಸಕ್ತ ಅಧಿವೇಶನದಲ್ಲೇ ಮಹತ್ವದ ನಿರ್ಣಯ ಕೈಗೊಂಡು ಕಾನೂನು ತಿದ್ದುಪಡಿ ಮಾಡಲು ನಿರ್ಣಯಿಸಲಾಗಿದೆ ಎಂದು ಕಾರ್ಮಿಕ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

ಸೋಮವರ ನಡೆದ ಪಟ್ಟಣ ಪಂಚಾಯ್ತಿ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪಟ್ಟಣ ವ್ಯಾಪ್ತಿಯ ವಿವಿಧ ಸಮಸ್ಯೆಗಳ ಕುರಿತು ಸಲಹೆ- ಸೂಚನೆ ಪಡೆಯಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಪ್ರತಿಯೊಬ್ಬ ಸದಸ್ಯರೂ ತಮ್ಮ ವಾರ್ಡಿನ ಸ್ಥಿತಿ-ಗತಿಯನ್ನು ಗಮನಿಸಿ ಪಕ್ಷಾತೀತವಾಗಿ ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಿದರು.

ಚುನಾವಣೆಯ ಸಂದರ್ಭದಲ್ಲಿರುವ ಪಕ್ಷ ರಾಜಕೀಯವನ್ನು ತೊರೆದು, ಜನಪ್ರತಿನಿಧಿಗಳೆಲ್ಲರೂ ಅಭಿವೃದ್ಧಿಯೊಂದನ್ನೇ ಗಮನದಲ್ಲಿರಿಸಿ, ಸಾರ್ವಜನಿಕರಿಂದ ಯಾವುದೇ ಕಾರಣಕ್ಕೂ ದೂರು ಬಾರದಂತೆ ಕಾರ್ಯನಿರ್ವಹಿಸಬೇಕು ಎಂದರು.

ADVERTISEMENT

ಪಟ್ಟಣ ವ್ಯಾಪ್ತಿಯಲ್ಲಿ ಎಲ್ಲರಿಗೂ ಮನೆ ದೊರೆಯಬೇಕೆಂಬ ಉದ್ದೇಶದಿಂದ ಸರ್ಕಾರ 1000 ಮನೆಗಳನ್ನು ಮಂಜೂರು ಮಾಡಿದೆ. ಮನೆ ಹಂಚಿಕೆಯ ವಿಚಾರದಲ್ಲಿ ಸಾರ್ವಜನಿಕರ ದೂರು ಬಾರದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಈ ಹಿನ್ನೆಲೆಯಲ್ಲಿ 3-4 ಇಲಾಖೆಗಳ ಅಧಿಕಾರಿಗಳ ಸಮನ್ವಯ ಸಮಿತಿ ರಚಿಸಿ, ವಾರ್ಡ್ ಸದಸ್ಯರು ಮನೆಗಳ ಸಮೀಕ್ಷಾ ಕಾರ್ಯ ನಡೆಸಬೇಕು. ಮಾ.15 ರೊಳಗೆ ಎಲ್ಲ ವಾರ್ಡ್‌ಗಳಲ್ಲಿ ಮನೆಗಳ ಬೇಡಿಕೆ ಅರ್ಜಿ ಪರಿಶೀಲನೆ ಅಂತ್ಯಗೊಳಿಸಬೇಕು ಎಂದರು.

ಯಾವುದೇ ಕಾರ್ಯಕ್ಕೆ ವಿಳಂಬ ಮಾಡದೇ, ಸಾರ್ವಜನಿಕರ
ಬೇಡಿಕೆಗಳಿಗೆ ಸ್ಪಂದಿಸಬೇಕು. ತೆರಿಗೆ ವಸೂಲಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು. ಮೀನು ಮಾರುಕಟ್ಟೆಯ ಹಿಂದಿನ ಬಾಕಿ ₹ 7 ಲಕ್ಷ ಸೇರಿದಂತೆ ಇತ್ತೀಚಿನ ₹ 3.23 ಲಕ್ಷ, ಸದ್ಯದ ₹ 30 ಸಾವಿರವನ್ನು ವಸೂಲಿ ಮಾಡಬೇಕು. ಕಂಡಕಂಡಲ್ಲಿ ಮೀನು-ಮಾಂಸ ಮಾರುವಂತಿಲ್ಲ. ನಿಗದಿಗೊಳಿಸಿದ ಮಾರುಕಟ್ಟೆಯಲ್ಲೇ ಕಡ್ಡಾಯವಾಗಿ ಮಾರಾಟ ಮಾಡಬೇಕು. ಅಗತ್ಯವಿದ್ದರೆ ಮೀನು ಮಾರುಕಟ್ಟೆಯನ್ನು ವಿಸ್ತರಿಸೋಣವೆಂದರು.

ಪಟ್ಟಣ ಪಂಚಯ್ತಿ ಸದಸ್ಯರಾದ ರಾಧಾಕೃಷ್ಣ ನಾಯ್ಕ, ಆದಿತ್ಯ ಗುಡಿಗಾರ, ಸೋಮೇಶ್ವರ ನಾಯ್ಕ, ರಾಜು ನಾಯ್ಕ, ಸತೀಶ ನಾಯ್ಕ, ನಾಗರಾಜ ಅಂಕೋಲೇಕರ, ಕಲ್ಪನಾ ನಾಯ್ಕ, ಅಲಿಮಾ ಶೇಖ್ ಸಲಹೆ ನೀಡಿದರು. ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಸುನಂದಾ ದಾಸ, ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ, ಸ್ಥಾಯಿ ಸಮಿತಿ ನೂತನ ಅಧ್ಯಕ್ಷ ಅಮಿತ ಅಂಗಡಿ ಉಪಸ್ಥಿತರಿದ್ದರು. ಮುಖ್ಯಾಧಿಕಾರಿ ಅರುಣ ನಾಯ್ಕ ಸ್ವಾಗತಿಸಿದರು. ಸಮುದಾಯ ಸಂಘಟನಾಧಿಕಾರಿ ಹೇಮಾವತಿ ಭಟ್ಟ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.