ADVERTISEMENT

ಕಾರವಾರ: ಸಾಲ ಮಂಜೂರು ಮಾಡುವ ನೆಪದಲ್ಲಿ ಸೀಬರ್ಡ್ ನೌಕಾನೆಲೆ ಸಿಬ್ಬಂದಿಗೆ ವಂಚನೆ

ಮುಂಬೈನ ಖಾಸಗಿ ಹಣಕಾಸು ಸಂಸ್ಥೆಯ ವಿರುದ್ಧ ದೂರು ದಾಖಲು

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2020, 16:07 IST
Last Updated 9 ಸೆಪ್ಟೆಂಬರ್ 2020, 16:07 IST

ಕಾರವಾರ: ಸಾಲ ಮಂಜೂರು ಮಾಡುವ ನೆಪದಲ್ಲಿ ವಂಚಿಸಿದ್ದಾಗಿ ಸೀಬರ್ಡ್ ನೌಕಾನೆಲೆಯ ಸಿಬ್ಬಂದಿಯೊಬ್ಬರು ಮುಂಬೈನ ಖಾಸಗಿ ಹಣಕಾಸು ಸಂಸ್ಥೆಯೊಂದರ ವಿರುದ್ಧ ದೂರು ನೀಡಿದ್ದಾರೆ.

ಜೆ.ಎಸ್ ಫೈನಾನ್ಸ್ ಎಂಬ ಸಂಸ್ಥೆಯವರು ಹೇಳಿಕೊಂಡ ಇಬ್ಬರು, ಸೀಬರ್ಡ್ ಸಿಬ್ಬಂದಿಗೆ ದೂರವಾಣಿ ಕರೆ ಮಾಡಿದ್ದರು. ₹ 20 ಲಕ್ಷ ಸಾಲ ಪಡೆಯಲು ಅರ್ಹರಾಗಿದ್ದು, ಮಂಜೂರು ಮಾಡಲು ಶುಲ್ಕ ಪಾವತಿಸಬೇಕು ಎಂದು ತಿಳಿಸಿದ್ದರು. ಇದನ್ನು ನಂಬಿದ ಅವರು, ಜುಲೈ 9ರಿಂದ ಮೂರು ಬಾರಿ ಒಟ್ಟು ₹ 25,500 ಅನ್ನು ಆನ್‌ಲೈನ್ ಮುಖಾಂತರ ವರ್ಗಾಯಿಸಿದ್ದರು. ಬಳಿಕ ಆರೋಪಿಗಳು, ಜಿ.ಎಸ್.ಟಿ ಶುಲ್ಕ ಎಂದು ಮತ್ತಷ್ಟು ಹಣ ಪಾವತಿಸಲು ಒತ್ತಾಯಿಸಿದ್ದರು.

ಆಗ ಇದು ವಂಚಕರ ಜಾಲ ಎಂದು ಗೊತ್ತಾಗಿ ಸಾಲವನ್ನು ರದ್ದು ಮಾಡಿ, ಈಗಾಗಲೇ ಪಾವತಿಸಿದ್ದ ಹಣವನ್ನು ವಾಪಸ್ ಮಾಡುವಂತೆ ಕೇಳಿದರು. ಆದರೆ, ಆರೋಪಿಗಳು ಕೊಲೆ ಮಾಡುವುದಾಗಿ ಹಾಗೂ ಮಕ್ಕಳನ್ನು ಅಪಹರಿಸುವುದಾಗಿ ಬೆದರಿಕೆ ಒಡ್ಡಿದರು. ಈ ಬಗ್ಗೆ ಸೀಬರ್ಡ್ ಸಿಬ್ಬಂದಿ ರಾಜ್ಯ ಸರ್ಕಾರದ ‘ಇ–ಜನಸ್ಪಂದನಾ’ ವೆಬ್‌ಸೈಟ್ ಮೂಲಕ ದೂರು ದಾಖಲಿಸಿದ್ದರು. ಅದನ್ನು ಆಧರಿಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಅವರು ಇನ್‌ಸ್ಪೆಕ್ಟರ್ ರೇವಣಸಿದ್ದಪ್ಪ ಅವರಿಗೆ ಸೂಚಿಸಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.