ADVERTISEMENT

ಅಮೆರಿಕದಲ್ಲಿ ಉದ್ಯೋಗದಾಸೆಗೆ ₹ 57 ಲಕ್ಷ ಕಳೆದುಕೊಂಡ ಯುವತಿ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2021, 14:55 IST
Last Updated 11 ಫೆಬ್ರುವರಿ 2021, 14:55 IST

ಕಾರವಾರ: ಅಮೆರಿಕದಲ್ಲಿ ಉದ್ಯೋಗ ಪಡೆಯುವ ನಿರೀಕ್ಷೆಯಲ್ಲಿದ್ದ ಯುವತಿಯೊಬ್ಬರು, ಅಪರಿಚಿತರ ಇ–ಮೇಲ್‌ ಸಂದೇಶವನ್ನು ನಂಬಿ ಬರೋಬ್ಬರಿ ₹ 57.14 ಲಕ್ಷ ಕಳೆದುಕೊಂಡಿದ್ದಾರೆ.

ಹೊನ್ನಾವರ ತಾಲ್ಲೂಕಿನ ನೇತ್ರಾ (25) ಹಣ ಕಳೆದುಕೊಂಡವರು. ನರ್ಸಿಂಗ್ ಕೋರ್ಸ್ ಅಧ್ಯಯನ ಮಾಡಿದ್ದ ಅವರು, ಕೆಲವು ವರ್ಷ ಕತಾರ್‌ನಲ್ಲಿ ಉದ್ಯೋಗದಲ್ಲಿದ್ದರು. ಬಳಿಕ ತಮ್ಮೂರಿಗೆ ವಾಪಸ್ ಬಂದು, ಬೇರೆ ಉದ್ಯೋಗದ ಹುಡುಕಾಟದಲ್ಲಿದ್ದರು.

ಅವರ ಇ– ಮೇಲ್ ಖಾತೆಗೆ ಅಪರಿಚಿತರು ಕಳುಹಿಸಿದ್ದ ಸಂದೇಶದಲ್ಲಿ ಉದ್ಯೋಗಾವಕಾಶ ಹಾಗೂ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಯ ಉಲ್ಲೇಖವಿತ್ತು. ಅದಕ್ಕೆ ಕರೆ ಮಾಡಿದ ಯುವತಿ, ತಮ್ಮ ಪರಿಚಯ ಹೇಳಿಕೊಂಡಿದ್ದರು. ಕರೆ ಸ್ವೀಕರಿಸಿದ್ದ ವಂಚಕರು, ಯುವತಿಯ ವಾಟ್ಸ್‌ಆ್ಯಪ್ ಖಾತೆಗೆ ಪ್ರಶ್ನೆ ಪತ್ರಿಕೆಯೊಂದನ್ನು ಕಳುಹಿಸಿಕೊಟ್ಟು ಉತ್ತರಿಸುವಂತೆ ತಿಳಿಸಿದ್ದರು.

ADVERTISEMENT

ಅವರ ಉತ್ತರ ಪತ್ರಿಕೆ ತಲುಪಿದ ಬಳಿಕ ಆರೋಪಿಗಳು ಪಾಸ್‌ಪೋರ್ಟ್, ವೀಸಾ, ವೈದ್ಯಕೀಯ ಪ್ರಮಾಣಪತ್ರ, ನಿರಾಕ್ಷೇಪಣಾ ಪತ್ರ, ಆರೋಗ್ಯ ವಿಮೆ ಮುಂತಾದವುಗಳಿಗೆ ಶುಲ್ಕ, ತೆರಿಗೆ ಪಾವತಿಸಲು ಹೇಳಿದ್ದರು. ಆರೋಪಿಗಳು ನೀಡಿದ್ದ ವಿವಿಧ ಬ್ಯಾಂಕ್ ಖಾತೆಗಳಿಗೆ 2020ರ ಆ.13ರಿಂದ 2021ರ ಜ.17ರ ತನಕ ಹಣ ಜಮೆ ಮಾಡಿದ್ದರು.

ವಿದೇಶದಲ್ಲಿ ಉದ್ಯೋಗದ ಆಸೆಯಿಂದ ಅವರು ತಮ್ಮ ಸಂಪಾದನೆ, ಸಂಬಂಧಿಕರಲ್ಲಿ, ಪರಿಚಯಸ್ಥರಲ್ಲಿ, ಬ್ಯಾಂಕ್‌ಗಳಲ್ಲಿ ಸಾಲ ಮಾಡಿ ಹಣ ಹೊಂದಿಸಿದ್ದರು. ಆರು ತಿಂಗಳ ಅವಧಿಯಲ್ಲಿ ಹಲವು ಬಾರಿ ಹಣ ಪಾವತಿಸಿದ್ದರೂ ನೇಮಕಾತಿ ಆದೇಶವೇ ಬರಲಿಲ್ಲ. ಈ ಬಗ್ಗೆ ಕೇಳಿದರೆ ಸ್ಪಷ್ಟನೆಯಾಗಲೀ ಹಣ ಮರಳಿಸುವ ಬಗ್ಗೆಯಾಗಲೀ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಇದರಿಂದ ತಾವು ಮೋಸ ಹೋಗಿದ್ದು ಅರಿವಿಗೆ ಬಂದು, ಕಾರವಾರದ ಸಿ.ಇ.ಎನ್ ಠಾಣೆಗೆ ದೂರು ನೀಡಿದ್ದಾರೆ.

ಠಾಣೆಯ ಇನ್‌ಸ್ಪೆಕ್ಟರ್ ಪಿ.ಸೀತಾರಾಮ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.