
ಕಾರವಾರ: ನಟ ಪುನೀತ್ ರಾಜ್‌ಕುಮಾರ್ ಜೊಯಿಡಾದ ಪಾತಾಗುಡಿ ಸರ್ಕಾರಿ ಶಾಲೆಯಲ್ಲಿ ಕನ್ನಡ ಪಾಠ ಮಾಡಿದ್ದ ದೃಶ್ಯವೊಂದರಿಂದ ಪ್ರೇರಣೆಗೊಂಡು, ನೂರಾರು ಕಿ.ಮೀ ದೂರದಿಂದ ಬಂದ ಕನ್ನಡ ಮನಸ್ಸು ಕರ್ನಾಟಕ ತಂಡವು ಶಾಲೆಯ ಅಭಿವೃದ್ಧಿಗೆ ಕೈಜೋಡಿಸಿದೆ.
2021ರಲ್ಲಿ ತೆರೆಕಂಡಿದ್ದ ಪುನೀತ್ ಕೊನೆಯದಾಗಿ ನಟಿಸಿದ್ದ ‘ಗಂಧದ ಗುಡಿ’ ಡಾಕ್ಯೂಫಿಲಂನಲ್ಲಿ ಪಾತಾಗುಡಿ ಶಾಲೆ, ಸುತ್ತಮುತ್ತಲಿನ ಪರಿಸರ ಚಿತ್ರಿಸಲಾಗಿತ್ತು. ಹಳತಾಗಿದ್ದ ಶಾಲೆಯ ಕಟ್ಟಡ, ಮಾಸಿದ ಗೋಡೆ ಕಂಡು ಮರುಗಿದ್ದ ಕನ್ನಡ ಮನಸ್ಸು ಕರ್ನಾಟಕ ತಂಡವು ಶಾಲೆಗೆ ಮೆರಗು ನೀಡಲು ಮುಂದಾಯಿತು.
35ಕ್ಕೂ ಹೆಚ್ಚು ಸದಸ್ಯರಿದ್ದ ತಂಡವು ಕೆಲ ದಿನದ ಹಿಂದೆ ಜೊಯಿಡಾ ತಾಲ್ಲೂಕಿನ ಪಾತಾಗುಡಿ, ಬಾಮಣಗಿ, ಗವೇಗಾಳಿ ಸರ್ಕಾರಿ ಶಾಲೆಗಳ ಮಾಸಿದ ಗೋಡೆಗಳಿಗೆ ಬಣ್ಣ ಬಳಿಯುವ ಕೆಲಸ ಮಾಡಿವೆ. ಜೊತೆಗೆ ಗೋಡೆಗಳ ಮೇಲೆ ಪರಿಸರ ಜಾಗೃತಿ ಮೂಡಿಸುವ ಚಿತ್ರಗಳು, ಕನ್ನಡದ ಕವಿಗಳು, ನಟ ಪುನೀತ್ ಚಿತ್ರವನ್ನೂ ಬಿಡಿಸಲಾಗಿದೆ.
‘ಸರ್ಕಾರಿ ಶಾಲೆ ಉಳಿಸಿ ಅಭಿಯಾನ ಆರಂಭಿಸಿದ್ದು, ರಾಜ್ಯದಲ್ಲಿ ಈವರೆಗೆ 64 ಸರ್ಕಾರಿ ಶಾಲೆಗಳಿಗೆ ಬಣ್ಣ ಬಳಿದುಕೊಡುವ, ಇತರ ಸೌಲಭ್ಯಗಳನ್ನು ಒದಗಿಸಿಕೊಡುವ ಕೆಲಸ ಮಾಡಲಾಗಿದೆ. ಉತ್ತರ ಕನ್ನಡಕ್ಕೆ ಮೊದಲ ಬಾರಿಗೆ ಬಂದಿದ್ದು, ಇಲ್ಲಿನ ಕುಗ್ರಾಮಗಳ ಮೂರು ಶಾಲೆಗಳಲ್ಲಿ ಮಾಸಿದ ಗೋಡೆಗೆ ಬಣ್ಣ ಬಳಿದು, ಶಿಕ್ಷಕರು ಮತ್ತು ಮಕ್ಕಳಿಗೆ ಪ್ರೇರಣೆ ನೀಡುವ ಪ್ರಯತ್ನ ನಡೆಸಿದ್ದೇವೆ’ ಎನ್ನುತ್ತಾರೆ ಕನ್ನಡ ಮನಸ್ಸು ಕರ್ನಾಟಕ ತಂಡದ ಸಂಸ್ಥಾಪಕ ಅಧ್ಯಕ್ಷ ಪವನ್ ದರೆಗುಂಡಿ.
‘ಪುನೀತ್ ರಾಜ್‌ಕುಮಾರ್ ಡಾಕ್ಯೂಫಿಲಂನಲ್ಲಿ ಪಾತಾಗುಡಿ ಶಾಲೆಯಲ್ಲಿ ಇರುವ ದೃಶ್ಯ ಇಲ್ಲಿಗೆ ಬರಲು ಪ್ರೇರಣೆ ನೀಡಿತು. ಚಿತ್ರ ತಂಡದಲ್ಲಿದ್ದ ಪರಿಚಯದವರೊಬ್ಬರಿಂದ ಸ್ಥಳದ ಬಗ್ಗೆ ಮಾಹಿತಿ ಪಡೆದು ಬಂದೆವು. ಪಾತಾಗುಡಿ ಶಾಲೆಯೊಂದಿಗೆ ಮತ್ತೆರಡು ಶಾಲೆಗಳಿಗೂ ಅಗತ್ಯ ವ್ಯವಸ್ಥೆ ಕಲ್ಪಿಸುವ ಕೆಲಸ ನಡೆಸಲಾಯಿತು. ಇದಕ್ಕಾಗಿ ಸುಮಾರು ₹95 ಸಾವಿರ ವೆಚ್ಚವಾಗಿದ್ದು, ಸ್ಥಳೀಯ ದಾನಿಗಳೇ ನೀಡಿದರು. 35ಕ್ಕೂ ಹೆಚ್ಚು ಮಂದಿ ಸ್ವಯಂಪ್ರೇರಿತರಾಗಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಪಾಲ್ಗೊಂಡು ಫಲಾಪೇಕ್ಷೆ ಇಲ್ಲದೆ ಕೆಲಸ ಮಾಡಿದರು’ ಎಂದು ವಿವರಿಸಿದರು.
ಕುಗ್ರಾಮ ಪರಿಚಯಿಸಿದ ಪುನೀತ್
‘ಐದು ವರ್ಷಗಳ ಹಿಂದೆ ಗಂಧದ ಗುಡಿ ಚಿತ್ರದ ಚಿತ್ರೀಕರಣಕ್ಕೆ ಬಂದಿದ್ದ ಪುನೀತ್ ರಾಜ್‌ಕುಮಾರ್ ನಮ್ಮ ಮನೆಯಲ್ಲಿ ಮೂರ್ನಾಲ್ಕು ದಿನ ತಂಗಿದ್ದರು. ಕುಗ್ರಾಮದಲ್ಲಿ ಓಡಾಡಿ ಇಲ್ಲಿನ ವಸ್ತುಸ್ಥಿತಿ ಕಂಡಿದ್ದರು. ಅವರಿಲ್ಲದಿದ್ದರೂ ಅವರಿಂದಾಗಿಯೇ ಕುಗ್ರಾಮ ಹುಡುಕಿಕೊಂಡು ಬೆಂಗಳೂರಿನಿಂದ ಯುವಕರ ತಂಡ ಬಂದು ಶಾಲೆ ಅಭಿವೃದ್ಧಿಗೆ ಬೆಂಬಲವಾಗಿ ನಿಂತಿದೆ’ ಎನ್ನುತ್ತಾರೆ ಕನ್ನಡ ಮನಸ್ಸು ತಂಡಕ್ಕೆ ಆಶ್ರಯ ಕಲ್ಪಿಸಿದ್ದ ಪಾತಾಗುಡಿಯ ಗಜಾನನ ಗಾವಡಾ.
ಸರ್ಕಾರಿ ಶಾಲೆಗಳನ್ನು ಉಳಿಸಲು 6 ವರ್ಷಗಳಿಂದ ಅಭಿಯಾನ ನಡೆಸಲಾಗುತ್ತಿದೆ. ರಾಜ್ಯದ ಗಡಿಭಾಗ ಸೇರಿದಂತೆ ಕುಗ್ರಾಮಗಳ ಸರ್ಕಾರಿ ಶಾಲೆಗಳಿಗೆ ಸ್ಥಳೀಯ ದಾನಿಗಳಿಂದ ನೆರವು ಪಡೆದು ತಂಡದ ಸದಸ್ಯರೇ ಸ್ವಯಂ ಸೇವಕರಾಗಿ ಅಗತ್ಯ ಸೌಲಭ್ಯ ಕಲ್ಪಿಸುತ್ತಿದ್ದೇವೆಪವನ್ ದರೆಗುಂಡಿ, ಕನ್ನಡ ಮನಸ್ಸು ಕರ್ನಾಟಕ ತಂಡದ ಅಧ್ಯಕ್ಷ
ಜೊಯಿಡಾ ತಾಲ್ಲೂಕಿನ ಪಾತಾಗುಡಿ ಸರ್ಕಾರಿ ಶಾಲೆಯ ಗೋಡೆಯ ಮೇಲೆ ಕನ್ನಡ ಮನಸು ಕರ್ನಾಟಕ ತಂಡದ ಸದಸ್ಯರು ಪರಿಸರ ಜಾಗೃತಿಯ ಸಂದೇಶ ಸಾರುವ ಚಿತ್ರ ಬಿಡಿಸುತ್ತಿರುವುದನ್ನು ವಿದ್ಯಾರ್ಥಿಗಳು ವೀಕ್ಷಿಸುತ್ತ ನಿಂತಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.