
ಯಲ್ಲಾಪುರ: ʻದೇಶ ವಿಭಜನೆಯ ಸಂದರ್ಭದ ಐತಿಹಾಸಿಕ ಸತ್ಯಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ದೇಶ ವಿಭಜನೆಗೆ ಗಾಂಧಿ ಕಾರಣ ಎಂದು ಆರೋಪಿಸಲಾಗುತ್ತಿದೆ. ದೇಶ ವಿಭಜನೆಗೆ ಗಾಂಧಿ ಕಾರಣ ಎಂಬುದು ಒಂದು ಮಿಥ್ಯʼ ಎಂದು ಲೇಖಕ ಅರವಿಂದ ಚೊಕ್ಕಾಡಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಮಂಚಿಕೇರಿಯ ರಾಜರಾಜೇಶ್ವರಿ ಪ್ರೌಢಶಾಲೆಯಲ್ಲಿ ರಂಗ ಸಮೂಹ ಶುಕ್ರವಾರ ಆಯೋಜಿಸಿದ್ದ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಗಾಂಧಿ - ಕಲ್ಪನೆ ಮತ್ತು ವಾಸ್ತವ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ʻಗಾಂಧಿ ಕುರಿತು ಅನೇಕ ತಪ್ಪು ಕಲ್ಪನೆಗಳಿವೆ. ವಾಸ್ತವ ಸಂಗತಿಗಳಿಗಿಂತ ಸೃಷ್ಟಿಸಿದ ಸಂಗತಿಗಳೇ ಹೆಚ್ಚು ಪ್ರಚಲಿತದಲ್ಲಿವೆ. ಗಾಂಧಿಯವರ ಗಾಢ ಪ್ರಭಾವದಿಂದಾಗಿ ಹೊರಬರಲು ಯಾರಿಗೂ ಸಾಧ್ಯವಾಗಲಿಲ್ಲ. ಎಲ್ಲರೂ ಗಾಂಧಿಯನ್ನು ತಮ್ಮ ವಿಚಾರಸರಣಿಗೆ ಹೊಂದಿಸಿಕೊಳ್ಳುವ-ಒಗ್ಗಿಸಿಕೊಳ್ಳುವ ಪ್ರಯತ್ನ ನಡೆಸಿದರು. ಆ ಮೂಲಕ ಗಾಂಧಿಯ ಕುರಿತು ವಾಸ್ತವಕ್ಕಿಂತ ಭಿನ್ನವಾದ ಸಂಕಥನ ರೂಪಿಸಿದರುʼ ಎಂದವರು ವಿಶ್ಲೇಷಿಸಿದರು.
ಸಾಹಿತಿ ಶ್ರೀಧರ ಬಳಗಾರ ಮಾತನಾಡಿ, ʻಗಾಂಧಿ ಸಾಂಪ್ರದಾಯಿಕ ಕೊಳಕು ಮತ್ತು ಆಧುನಿಕ ವಿಚಾರವನ್ನು ಏಕಕಾಲದಲ್ಲಿ ಎದುರಿಸಿದ ವ್ಯಕ್ತಿ. ಅವರು ಯಂತ್ರ ವಿರೋಧಿ ಆಗಿರಲಿಲ್ಲ. ನಮ್ಮನ್ನು ಗುಲಾಮರಾಗಿಸುವ ಯಂತ್ರ ಬೇಡ ಅಂದಿದ್ದರು. ಯಂತ್ರದ ಬೌದ್ಧಿಕ ಆಕ್ರಮಣಕ್ಕೆ ದೇಹದ ಮೂಲಕ ಉತ್ತರ ನೀಡುವ ಕಾಯಕ ಪ್ರೀತಿ ಅವರದ್ದು. ತನ್ನನ್ನು ತಾನು ಆಳಲಾರದವನನ್ನು ಧರ್ಮ, ರಾಜಕೀಯ ಪಕ್ಷ ಇತ್ಯಾದಿ ಆಳುತ್ತವೆ. ನಮ್ಮನ್ನು ಆಳಲಾರದ ನಮ್ಮ ದೌರ್ಬಲ್ಯದಿಂದಾಗಿ ಬ್ರಿಟಿಷರು ನಮ್ಮನ್ನು ಆಳಿದರು. ಗಾಂಧಿ ಚರಿತ್ರೆ ಅಥವಾ ವರ್ತಮಾನಕ್ಕೆ ಮಾತ್ರ ಸೀಮಿತರಲ್ಲ. ಗಾಂಧಿಯ ಅನುಕಂಪ ಮತ್ತು ಅಂಬೇಡ್ಕರ್ ಅವರ ಕೋಪ ಇದ್ದಾಗ ಭಾರತಕ್ಕೆ ಬಿಡುಗಡೆʼ ಎಂದರು.
ನಾಟಕಕಾರ ಡಿ.ಎಸ್.ಚೌಗಲೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ʻಗಾಂಧಿ ಸಕಾರಾತ್ಮಕ ಶಕ್ತಿಯ ಕಣಜ. ಅವರು ನಮಗೆ ಮತ್ತೆ ಮತ್ತೆ ಹೊಸ ಬೆಳಕನ್ನು ನೀಡುತ್ತಾರೆ. ಅನೇಕರು ಅಧ್ಯಯನ ಮಾಡದೇ ಗಾಂಧಿಯನ್ನು ಟೀಕಿಸುತ್ತಿದ್ದಾರೆ. ಗಾಂಧಿ ಆಗುವುದು ಸುಲಭ ಅಲ್ಲʼ ಎಂದರು.
ಹಿರಿಯ ಸಹಕಾರಿ ಆರ್.ಎನ್ ಹೆಗಡೆ ಗೋರ್ಸಗದ್ದೆ, ರಂಗಕರ್ಮಿ ರಾಮಕೃಷ್ಣ ದುಂಡಿ, ಪ್ರಮುಖರಾದ ಗುರುಪ್ರಸಾದ ದೊಡ್ಡೂರು, ಎಂ.ಕೆ ಭಟ್ಟ ಯಡಳ್ಳಿ, ನವೀನ್ ಹೆಗಡೆ, ಆರ್. ಎಲ್ ಭಟ್ಟ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.