ADVERTISEMENT

ಕಾರವಾರ: 15 ಸಾವಿರ ಕೆ.ಜಿ. ಪ್ಲಾಸ್ಟಿಕ್ ಸಂಗ್ರಹದ ಗುರಿ

ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾಹಿತಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2021, 13:53 IST
Last Updated 2 ಅಕ್ಟೋಬರ್ 2021, 13:53 IST
ಕಾರವಾರದಲ್ಲಿ ಶನಿವಾರ ಮಹಾತ್ಮ ಗಾಂಧೀಜಿ ಅವರ ಪ್ರತಿಮೆಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾಲಾರ್ಪಣೆ ಮಾಡಿದರು. ಎಸ್.ಪಿ. ಶಿವಪ್ರಕಾಶ ದೇವರಾಜು, ನಗರಸಭೆ ಉಪಾಧ್ಯಕ್ಷ ಪ್ರಕಾಶ ನಾಯ್ಕ, ಅಧ್ಯಕ್ಷ ನಿತಿನ್ ಪಿಕಳೆ, ಹಿರಿಯ ಸಿವಿಲ್ ನ್ಯಾಯಾಧೀಶ ಸಂತೋಷಕುಮಾರ ಶೆಟ್ಟಿ ಇದ್ದಾರೆ
ಕಾರವಾರದಲ್ಲಿ ಶನಿವಾರ ಮಹಾತ್ಮ ಗಾಂಧೀಜಿ ಅವರ ಪ್ರತಿಮೆಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾಲಾರ್ಪಣೆ ಮಾಡಿದರು. ಎಸ್.ಪಿ. ಶಿವಪ್ರಕಾಶ ದೇವರಾಜು, ನಗರಸಭೆ ಉಪಾಧ್ಯಕ್ಷ ಪ್ರಕಾಶ ನಾಯ್ಕ, ಅಧ್ಯಕ್ಷ ನಿತಿನ್ ಪಿಕಳೆ, ಹಿರಿಯ ಸಿವಿಲ್ ನ್ಯಾಯಾಧೀಶ ಸಂತೋಷಕುಮಾರ ಶೆಟ್ಟಿ ಇದ್ದಾರೆ   

ಕಾರವಾರ: ‘ದೇಶದಲ್ಲಿ ಒಂದು ತಿಂಗಳು ಪ್ಲಾಸ್ಟಿಕ್ ರಹಿತ ಅಭಿಯಾನ ನಡೆಯುತ್ತಿದೆ. ಅದರ ಭಾಗವಾಗಿ ಉತ್ತರ ಕನ್ನಡದಲ್ಲಿ 10 ಸಾವಿರದಿಂದ 15 ಸಾವಿರ ಕೆ.ಜಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಲು ಗುರಿ ಹೊಂದಲಾಗಿದೆ‌’ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.

ಗಾಂಧಿ ಜಯಂತಿ ಅಂಗವಾಗಿ ನಗರದಲ್ಲಿ ಶನಿವಾರ ಮಹಾತ್ಮ ಗಾಂಧೀಜಿಯ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.

‘ದೇಶವು ಗಾಂಧೀಜಿ ಅವರ 152ನೇ ಜಯಂತ್ಯುತ್ಸವನ್ನು ಆಚರಿಸುತ್ತಿದೆ. ಅವರು ಈಗ ರಾಷ್ಟ್ರಪಿತ ಎನ್ನುವುದರ ಜೊತೆಗೇ ದೇಶದ ಸ್ವಚ್ಛತೆಯ ಮಾದರಿಯಾಗಿಯೂ ಕಾಣಿಸುತ್ತಿದ್ದಾರೆ. ಅವರ ಮಾರ್ಗದಲ್ಲಿ ನಡೆಯುವ ನಾವು, ವಾಸಿಸುವ ಪ್ರದೇಶ, ಪರಿಸರವನ್ನು ನಮ್ಮ ಮನೆ ಎಂದು ಭಾವಿಸಿ ಸ್ವಚ್ಛತೆ ಕಾಪಾಡಬೇಕು’ ಎಂದು ಹೇಳಿದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ ಮಾತನಾಡಿ, ‘ಗಾಂಧೀಜಿ ಅವರ ಜನ್ಮದಿನದಂದು ದೇಶವನ್ನು ಈಗಿನ ಹಂತದಿಂದ ಮುಂದೆ ಸಾಗಿಸಲು ಏನು ಕ್ರಮ ಬೇಕು ಎಂಬ ಚಿಂತನೆ ಮೂಡಲಿ. ಮೊದಲು ನಮ್ಮ ಕರ್ತವ್ಯಗಳನ್ನು ಸರಿಯಾಗಿ ಮಾಡಬೇಕು. ಅಂತೆಯೇ ಅಧಿಕಾರಿಗಳು ಜನರನ್ನು ಸತಾಯಿಸದೇ ಕೆಲಸ ಮಾಡಿದರೆ ದೇಶದ ಸ್ವಾತಂತ್ರ್ಯಕ್ಕೂ ಹೆಚ್ಚು ಅರ್ಥ ಬರುತ್ತದೆ’ ಎಂದರು.

ಬಳಿಕ, ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಹಮ್ಮಿಕೊಳ್ಳಲಾದ ಸ್ವಚ್ಛತಾ ಅಭಿಯಾನದಲ್ಲಿ ಗಣ್ಯರು ಮತ್ತು ಸಾರ್ವಜನಿಕರು ಪಾಲ್ಗೊಂಡರು. ಕಿನಾರೆಯಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳನ್ನು ಹೆಕ್ಕಿ ತೆಗೆದು ಗೋಣಿಚೀಲಗಳಲ್ಲಿ ತುಂಬಿಸಿ ವಿಲೇವಾರಿ ಮಾಡಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಎನ್.ಸಂತೋಷಕುಮಾರ್ ಶೆಟ್ಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಪ್ರಿಯಾಂಗಾ, ಉಪ ವಿಭಾಗಾಧಿಕಾರಿ ವಿದ್ಯಾಶ್ರೀ ಚಂದರಗಿ, ನಗರಸಭೆ ಆಯುಕ್ತ ಆರ್.ಪಿ.ನಾಯ್ಕ, ಲಯನ್ಸ್, ರೋಟರಿ ಸಂಸ್ಥೆಗಳು, ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಎನ್‍.ಸಿ.ಸಿ, ಎನ್‍.ಎಸ್‍.ಎಸ್ ವಿದ್ಯಾರ್ಥಿಗಳು, ಭಾರತೀಯ ನೌಕಾಪಡೆ, ಕೋಸ್ಟ್‌ಗಾರ್ಡ್ ಸಿಬ್ಬಂದಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.