ಕಾರವಾರ: ‘ಪ್ರಾಮಾಣಿಕತೆಗೆ ಮಹಾತ್ಮ ಗಾಂಧೀಜಿ, ಸರಳ ಜೀವನಕ್ಕೆ ಲಾಲ್ ಬಹದ್ದೂರ್ ಶಾಸ್ತ್ರಿ ಆದರ್ಶಪ್ರಾಯ. ಮಹಾನ್ ನಾಯಕರನ್ನು ಸಮಾಜ ಎಂದಿಗೂ ಮರೆಯಲಾಗದು’ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಹೇಳಿದರು.
ಇಲ್ಲಿನ ಮಹಾತ್ಮ ಗಾಂಧಿ ಉದ್ಯಾನದಲ್ಲಿ ಜಿಲ್ಲಾಡಳಿತದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಅಹಿಂಸೆಯ ಮೂಲಕ ಏನು ಬೇಕಾದರು ಸಾಧಿಸಬಹುದು ಎಂದು ಇಡೀ ಜಗತ್ತಿಗೆ ಅವರು ತಿಳಿಸಿಕೊಟ್ಟರು. ಸಮಾಜದಲ್ಲಿ ಬದಲಾವಣೆ ತರಲು ಸಣ್ಣ ಕಾರ್ಯಗಳೂ ಪ್ರೇರಣೆಯಾಗುತ್ತವೆ ಎಂಬುದನ್ನು ಗಾಂಧೀಜಿ, ಶಾಸ್ತ್ರೀಜಿ ತಿಳಿಸಿಕೊಟ್ಟರು’ ಎಂದರು.
ಜಿಲ್ಲಾ ಪಂಚಾಯಿತಿ ಸಿಇಒ ಡಾ.ದಿಲೀಷ್ ಶಶಿ ಮಾತನಾಡಿ, ‘ಗಾಂಧೀಜಿ ಅವರು ನನ್ನ ಜೀವನವೇ ನನ್ನ ಸಂದೇಶ ಎಂಬುದಕ್ಕೆ ಪೂರಕವಾಗಿ ಅವರ ತತ್ವಗಳನ್ನು ಜೀವನ ಪರ್ಯಾಂತ ತಮ್ಮ ಜೀವನದಲ್ಲಿ ಅಳವಡಿಸಿಕೊಂಡ ಸರಳ ವ್ಯಕ್ತಿತ್ವದ ನಾಯಕ’ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಲಿಪ್ ಎಂ.ಎನ್., ‘ಗಾಂಧೀಜಿ ವಿಚಾರಗಳು ಎಲ್ಲ ಕಾಲ ಘಟ್ಟಗಳಿಗೂ ಪ್ರಸ್ತುತ’ ಎಂದರು.
ನಗರಸಭೆ ಅಧ್ಯಕ್ಷ ರವಿರಾಜ್ ಅಕೋಲೇಕರ ಅಧ್ಯಕ್ಷತೆ ವಹಿಸಿದ್ದರು. ಗಾಂಧೀಜಿ ಅವರ ಜೀವನ ಚರಿತ್ರೆ ಕುರಿತು ಸಾಹಿತಿ ಮೋಹನ ಹಬ್ಬು ಉಪನ್ಯಾಸ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಜಿಲ್ಲಾ ನರಾಭಿವೃದ್ಧಿಕೋಶದ ಯೋಜನಾ ನಿರ್ದೇಶಕ ಜಹೀರ್ ಅಬ್ಬಾಸ್, ಪೌರಾಯುಕ್ತ ಜಗದೀಶ ಹುಲಗೆಜ್ಜಿ, ವಾರ್ತಾಧಿಕಾರಿ ಬಿ.ಶಿವಕುಮಾರ್, ಇತರರು ಪಾಲ್ಗೊಂಡಿದ್ದರು.
ಗಾಂಧಿ ಭಜನೆ, ಸ್ವಚ್ಛತೆ ಶ್ರಮದಾನ ನಡೆಯಿತು. ವಾರ್ತಾ ಇಲಾಖೆಯಿಂದ ಹಮ್ಮಿಕೊಂಡಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಗಾಂಧೀಜಿ ಕೊಡುಗೆಗಳ ಸ್ಮರಣೆ
ಭಟ್ಕಳ : ತಾಲ್ಲೂಕಿನ ಆಡಳಿತ ಸೌಧದಲ್ಲಿ ಗುರುವಾರ ಗಾಂಧಿ ಜಯಂತಿ ಆಚರಿಸಲಾಯಿತು.
ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿದ ಭಟ್ಕಳ ತಹಶೀಲ್ದಾರ್ ನಾಗೇಂದ್ರ ಕೋಳಶೆಟ್ಟಿ, ಗಾಂಧೀಜಿಯವರ ಕೊಡುಗೆಗಳನ್ನು ಸ್ಮರಿಸಿ, ಗಾಂಧೀಜಿಯವರ ಸತ್ಯ, ಅಹಿಂಸೆ, ಇತ್ಯಾದಿ ಉದಾತ್ತ ಗುಣಗಳನ್ನು ಕೊಂಡಾಡಿದರು.
ದೇಶದ ಎರಡನೇ ಪ್ರಧಾನಿಯಾಗಿದ್ದ ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ಕೊಡುಗೆಗಳನ್ನು ನೆನಪಿಸಿಕೊಂಡರು.
ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ನಾಯಕ್, ತಾಲ್ಲೂಕಿನ ವಿವಿಧ ಇಲಾಖೆಗಳ ಮುಖ್ಯಸ್ಥರು, ಸಿಬ್ಬಂದಿ ಹಾಗೂ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಮೇಲ್ವಿಚಾರಕರು ಸಂಪನ್ಮೂಲ ವ್ಯಕ್ತಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.