ADVERTISEMENT

ಉ. ಕನ್ನಡ|ಗಣೇಶ ಹಬ್ಬಕ್ಕೆ ಸಿದ್ಧತೆ: ಎಲ್ಲೆಡೆ ಪರಿಸರ ಪೂರಕ ಮೂರ್ತಿ ಪ್ರತಿಷ್ಠಾಪನೆ

ಉತ್ಸವ ಸಮಿತಿಗಳು ಸಜ್ಜು

ಗಣಪತಿ ಹೆಗಡೆ
Published 25 ಆಗಸ್ಟ್ 2025, 6:03 IST
Last Updated 25 ಆಗಸ್ಟ್ 2025, 6:03 IST
ಹಳಿಯಾಳದಲ್ಲಿ ಜೇಡಿ ಮಣ್ಣಿನಿಂದ ಸಿದ್ಧಪಡಿಸಿದ ಗಣಪತಿ ಮೂರ್ತಿಗಳಿಗೆ ದಂಪತಿ ಬಣ್ಣ ಹಚ್ಚುವ ಕೆಲಸದಲ್ಲಿ ನಿರತರಾಗಿದ್ದರು.
ಹಳಿಯಾಳದಲ್ಲಿ ಜೇಡಿ ಮಣ್ಣಿನಿಂದ ಸಿದ್ಧಪಡಿಸಿದ ಗಣಪತಿ ಮೂರ್ತಿಗಳಿಗೆ ದಂಪತಿ ಬಣ್ಣ ಹಚ್ಚುವ ಕೆಲಸದಲ್ಲಿ ನಿರತರಾಗಿದ್ದರು.   

ಕಾರವಾರ: ಗಣೇಶ ಚತುರ್ಥಿ ಆಚರಣೆಗೆ ಸಿದ್ಧತೆ ಜೋರಾಗಿದ್ದು ಪರಿಸರ ಪೂರಕ ಮೂರ್ತಿಗಳನ್ನೇ ಜಿಲ್ಲೆಯಾದ್ಯಂತ ಪ್ರತಿಷ್ಠಾಪಿಸಲು ಸಿದ್ಧತೆ ನಡೆದಿದೆ. ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಮೂರ್ತಿ ಬಳಸದಿರಲು ಗಣೇಶೋತ್ಸವ ಸಮಿತಿಗಳು ನಿರ್ಧರಿಸಿವೆ.

ಜಿಲ್ಲೆಯ 1,467 ಸ್ಥಳಗಳಲ್ಲಿ ಸಾರ್ವಜನಿಕವಾಗಿ ಗಣೇಶೋತ್ಸವ ಆಚರಣೆ ನಡೆಯಲಿದೆ. ಆಳೆತ್ತರದ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಪೂಜಿಸಲಾಗುತ್ತದೆ. ಎತ್ತರದ ಮೂರ್ತಿ ಭಾರ ಇರುವ ಕಾರಣಕ್ಕೆ ಈ ಹಿಂದೆ ಪಿಒಪಿಯಿಂದ ಸಿದ್ಧಪಡಿಸಿದ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿತ್ತು. ಆದರೆ, ಈ ಬಾರಿ ಎಲ್ಲೆಡೆ ಮಣ್ಣಿನಿಂದ ಸಿದ್ಧಪಡಿಸಿದ, ಜೊತೆಗೆ ರಾಸಾಯನಿಕ ರಹಿತ ಬಣ್ಣ ಲೇಪಿಸಿದ ಮೂರ್ತಿಗಳನ್ನು ಕೂರಿಸಲಾಗುತ್ತಿದೆ.

‘ಪಿಒಪಿಯಿಂದ ಮೂರ್ತಿ ತಯಾರಿಕೆ ಕಡಿಮೆ ವೆಚ್ಚದಾಯಕ, ಜೊತೆಗೆ ಹಗುರವಾಗಿರುವ ಕಾರಣದಿಂದ ಸಾಗಾಟಕ್ಕೂ ಸುಲಭ. ಆದರೆ, ಕೆಲ ವರ್ಷಗಳಿಂದ ಪಿಒಪಿಯಿಂದ ಮೂರ್ತಿ ತಯಾರಿಕೆ ನಡೆಸುವುದು ಕಡಿಮೆಯಾಗಿದೆ. ಹಲವು ವರ್ಷಗಳಿಂದ ಜೇಡಿ ಮಣ್ಣಿನಿಂದಲೇ ಮೂರ್ತಿಗಳನ್ನು ಸಿದ್ಧಪಡಿಸಿ ನೀಡುತ್ತಿದ್ದೇವೆ’ ಎನ್ನುತ್ತಾರೆ ಮೂರ್ತಿ ತಯಾರಕ ನಂದನಗದ್ದಾದ ಅಭಿನಂದನ್ ಬಾಂದೇಕರ.

ADVERTISEMENT

‘ಉತ್ಸವ ನಡೆಯುವ ವೇಳೆ ಏಕಬಳಕೆ ಪ್ಲಾಸ್ಟಿಕ್ ಬಳಸುವಂತಿಲ್ಲ. ಡಿಜೆ ಬಳಕೆ ಮಾಡುವಂತಿಲ್ಲ. ಹಸಿರು ಪಟಾಕಿ ಮಾತ್ರ ಬಳಸಬಹುದು. ರಾತ್ರಿ 10 ಗಂಟೆಯ ಬಳಿಕ ಧ್ವನಿವರ್ಧಕ ಬಳಕೆ ಮಾಡಬಾರದು. ಮೂರ್ತಿಗಳನ್ನು ಆಯಾ ಸ್ಥಳೀಯ ಸಂಸ್ಥೆಗಳು ಗುರುತಿಸಿದ ಸ್ಥಳದಲ್ಲಿ ಮಾತ್ರ ವಿಸರ್ಜಿಸಬೇಕು’ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಸೂಚಿಸಿದ್ದಾರೆ.

ಶಿರಸಿ ತಾಲ್ಲೂಕಲ್ಲಿ 10 ಸಾವಿರಕ್ಕೂ ಹೆಚ್ಚಿನ ಗಣಪತಿ ಮೂರ್ತಿಗಳ ಬೇಡಿಕೆಯಿದ್ದು, ಎಲ್ಲವೂ ಮಣ್ಣಿನಿಂದಲೇ ಸಿದ್ಧಪಡಿಸಿ ಗ್ರಾಹಕರಿಗೆ ನೀಡಲಾಗುತ್ತಿದೆ. ದೊಡ್ಡ ಮೂರ್ತಿಗಳನ್ನು ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ (ಪಿಒಪಿ) ಮಾಡಲು ಬೇಡಿಕೆ ಬಂದರೂ ನಿಯಮಾವಳಿ ಇರುವ ಕಾರಣ ತಿರಸ್ಕರಿಸುತ್ತೇವೆ ಎನ್ನುತ್ತಾರೆ ಮೂರ್ತಿ ತಯಾರಕ ಸೂರ್ಯಕಾಂತ ಗುಡಿಗಾರ.

ಯಲ್ಲಾಪುರ ತಾಲೂಕಿನಲ್ಲಿ ಪಿಓಪಿ ಗಣಪತಿಯನ್ನು ಮಾರಾಟಕ್ಕೆ ಇಡಲಾಗಿಲ್ಲ. ಅರಣ್ಯ ಇಲಾಖೆ ಸೇರಿದಂತೆ ಕೆಲ ಸಾರ್ವಜನಿಕ ಗಜಾನನೋತ್ಸ ಸಮಿತಿಗಳು ಬಣ್ಣ ರಹಿತ ಗಣಪತಿ ಇಡಲು ಸಿದ್ದತೆ ನಡೆಸಿವೆ. ಸಿದ್ದಾಪುರ, ಕುಮಟಾದಲ್ಲಿಯೂ ಪರಿಸರ ಪೂರಕ ಗಣಪತಿ ಮೂರ್ತಿ ತಯಾರಿಕೆ ನಡೆಯುತ್ತಿದೆ.

ಭಟ್ಕಳ ತಾಲ್ಲೂಕಿನಲ್ಲಿ ಜೇಡಿ ಮಣ್ಣಿನಿಂದ ತಯಾರಿಸಿದ ಗಣಪತಿ ಮೂರ್ತಿಯನ್ನೇ ತಯಾರಿಸಲಾಗುತ್ತಿದೆ. ಪಟ್ಟಣದ ಗುಡಿಗಾರಮನೆ, ಕಂಚುಗಾರ ಮನೆ ಗಣಪತಿ ಮೂರ್ತಿಗೆ ಅಂತಿಮ ಸ್ಪರ್ಶ ನಡೆಸುವ ಕಾರ್ಯ ನಡೆಯುತಿದೆ. ಪೆಂಡಾಲ್‌, ಧ್ವನಿವರ್ಧಕ ಅಳವಡಿಸಲು ಕಡ್ಡಾಯ ಅನುಮತಿ ಪಡೆಯಲು ಸೂಚಿಸಲಾಗಿದೆ.

ಮುಂಡಗೋಡ ತಾಲ್ಲೂಕಿನಲ್ಲಿ 131 ಕಡೆಗಳಲ್ಲಿ ಸಾರ್ವಜನಿಕ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಪಟ್ಟಣದಲ್ಲಿ 22 ಕಡೆಗಳಲ್ಲಿ ಸಾರ್ವಜನಿಕವಾಗಿ ಗಣೇಶ ಪ್ರತಿಷ್ಠಾಪನೆಗೊಳ್ಳಲಿದ್ದಾನೆ. ಪರಿಸರಕ್ಕೆ ಮಾರಕವಾಗುವಂತ ಬಣ್ಣಗಳನ್ನು ಬಳಸದಂತೆ ತಾಲ್ಲೂಕು ಆಡಳಿತ ಸೂಚನೆ ನೀಡಿದೆ.

‘ಎತ್ತರದ ಮಣ್ಣಿನ ಮೂರ್ತಿಗಳನ್ನು ಮಾಡುವರು ಸಂಖ್ಯೆಯೂ ಕಡಿಮೆ ಇರುತ್ತದೆ. ವರ್ಷದಿಂದ ವರ್ಷಕ್ಕೆ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಯ ಸಮಯದಲ್ಲಿ ನಿಯಮಗಳು ಹೆಚ್ಚಾಗುತ್ತಿವೆ. ಇದರಿಂದ ಕಿರಿಕಿರಿ ಎನಿಸುತ್ತದೆ’ ಎನ್ನುತ್ತಾರೆ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಯ ಪದಾಧಿಕಾರಿ ಪ್ರಕಾಶ ಬಡಿಗೇರ.

ಹಳಿಯಾಳದಲ್ಲಿ ಗಣೇಶ ಪ್ರತಿಷ್ಠಾಪನೆಯ ದಿನದಂದು ಹಾಗೂ ವಿಸರ್ಜನೆಯ ದಿನದಂದು ಮೆರವಣಿಗೆಯಲ್ಲಿ ಕಡ್ಡಾಯವಾಗಿ ಡಿಜೆ ಹಚ್ಚುವುದನ್ನು ನಿಷೇಧಿಸಿ, ಸ್ಥಳೀಯ ವಾದ್ಯ ಮೇಳದೊಂದಿಗೆ ಮೆರವಣಿಗೆ ಮೂಲಕ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ನಿರ್ಧರಿಸಲಾಗಿದೆ. ಮಣ್ಣಿನ ಮೂರ್ತಿ ಸಿದ್ಧಪಡಿಸುವಲ್ಲಿ ಕಲಾವಿದರು ನಿರತರಾಗಿದ್ದಾರೆ.

‘40 ವರ್ಷಗಳಿಂದಲೂ ಪರಿಸರ ಪೂರಕ ಮೂರ್ತಿ ತಯಾರಿಸಲಾಗುತ್ತಿದೆ. ಖಾನಾಪುರದಿಂದ ಜೇಡಿ ಮಣ್ಣನ್ನು ತಂದು, ರಾಸಾಯನಿಕ ರಹಿತ ಬಣ್ಣ ಲೇಪಿಸಿ ಮೂರ್ತಿ ಪೂರೈಸುತ್ತಿದ್ದೇವೆ’ ಎಂದು ಕಲಾವಿದ ನೀಲಕಂಠ ತೇಲಿ ತಿಳಿಸಿದರು.

‘ಗೋಕಾಕ ತಾಲ್ಲೂಕಿನ ಕೊಣ್ಣೂರ ಗ್ರಾಮದಿಂದ ಮಣ್ಣಿನ ಸಿದ್ದಪಡಿಸಿದ ಗಣಪತಿಯನ್ನು ತಂದು ಮಾರಾಟ ಮಾಡುತ್ತಿದ್ದೇವೆ. ಮಾರಾಟಕ್ಕೆ ತಂದ ಮೂರ್ತಿಯನ್ನು ಪುರಸಭೆ ಅಧಿಕಾರಿಗಳು ಪರಿಶೀಲಿಸಿದ್ದಾರೆ.  ₹500 ರಿಂದ ₹3 ಸಾವಿರ ದರದಲ್ಲಿ ಮೂರ್ತಿ ಮಾರಾಟ ಆಗುತ್ತಿದೆ’ ಎಂದು ವ್ಯಾಪಾರಿ ವಿಶ್ವನಾಥ ಹೇಳಿದರು.

ಅಂಕೋಲಾ ತಾಲ್ಲೂಕಿನಲ್ಲಿ ಒಟ್ಟು 84 ಸಾರ್ವಜನಿಕ ಗಣೇಶೋತ್ಸವ ಸಮಿತಿಗಳಿವೆ. ಕೆಲವು ವರ್ಷಗಳಿಂದ ಪಟಾಕಿ ಹಾಗೂ ಬಣ್ಣ ಬಳಸುವುದನ್ನು ಕಡಿಮೆ ಮಾಡಲಾಗಿದೆ. ಎನ್ನುತ್ತಾರೆ ಭಾವಿಕೇರಿ ಗಣೇಶೋತ್ಸವ ಸಮಿತಿಯ ಪ್ರಮುಖ ಜಗದೀಶ್ ನಾಯಕ.

‘ಗ್ರಾಹಕರೇ ಗಣಪತಿ ಮೂರ್ತಿಗೆ ರಾಸಾಯನಿಕ ಬಣ್ಣಗಳನ್ನು ಬಳಿಯಲು ಒತ್ತಾಯಿಸುತ್ತಾರೆ. ಅವರ ಬೇಡಿಕೆಗೆ ಸ್ಪಂದಿಸಬೇಕಲ್ಲ’ ಎನ್ನುವುದು ಹೊನ್ನಾವರದ ಕೆಲ ಗಣೇಶ ವಿಗ್ರಹ ತಯಾರಕರ ಸಮಜಾಯಿಷಿ. ಡಿಜೆ ಬಳಸಬಾರದೆಂಬ ನಿಯಮಗಳಿಗೆ ಗ್ರಾಮೀಣ ಭಾಗ ಸೇರಿದಂತೆ ಹೆಚ್ಚಿನ ಸಾರ್ವಜನಿಕ ಗಣೇಶ ಪೆಂಡಾಲ್‌ಗಳು ನಿಯಮ ಮಾಡಿದ ವರ್ಷದಿಂದ ಈವರೆಗೂ ನಿಯಮ ಪಾಲಿಸಿದ ನಿದರ್ಶನಗಳಿಲ್ಲ.

‘ಈ ಬಾರಿ ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸಬೇಕೆಂದಿದ್ದೇವೆ.ಆದರೆ ಗಣಪತಿ ವಿಸರ್ಜನೆ ಸಂದರ್ಭದಲ್ಲಾದರೂ ಪಟಾಕಿ, ಡಿಜೆ ಅಬ್ಬರವಿರದಿದ್ದರೆ ಯುವಕರು ಪಾಲ್ಗೊಳ್ಳದೆ ಕಾರ್ಯಕ್ರಮ ಕಳೆಕಟ್ಟುವುದಿಲ್ಲ ಎನ್ನುವ ಆತಂಕ ನಮ್ಮ ಕೆಲ ಸದಸ್ಯರಲ್ಲಿದೆ. ಆದರೂ ಪರಿಸರಕ್ಕೆ,ಜನರ ಆರೋಗ್ಯಕ್ಕೆ ತೊಂದರೆಯಾಗದ ರೀತಿಯಲ್ಲಿ ಆಚರಣೆ ಮಾಡಲು ಹಿರಿಯರಾಗಿ ಸಲಹೆ ನೀಡುತ್ತೇವೆ’ ಎಂದು ಗುಂಡಿಬೈಲ್‌ನ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಸದಸ್ಯ ಶ್ರೀಕಾಂತ ನಾಯ್ಕ ತಿಳಿಸಿದರು.

ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಸಂತೋಷಕುಮಾರ ಹಬ್ಬು, ರವಿ ಸೂರಿ, ಮೋಹನ ನಾಯ್ಕ, ಎಂ.ಜಿ.ಹೆಗಡೆ, ಶಾಂತೇಶ ಬೆನಕನಕೊಪ್ಪ, ಎಂ.ಜಿ.ನಾಯ್ಕ, ಪ್ರವೀಣಕುಮಾರ ಸುಲಾಖೆ, ಸುಜಯ್ ಭಟ್, ವಿಶ್ವೇಶ್ವರ ಗಾಂವ್ಕರ, ಅಜಿತ್ ನಾಯಕ.

ಶಿರಸಿಯ ಸೂರ್ಯಕಾಂತ ಗುಡಿಗಾರ ಮಣ್ಣಿನ ಗಣಪತಿ ಮೂರ್ತಿ ತಯಾರಿಕೆಯಲ್ಲಿ ನಿರತರಾಗಿರುವುದು.
ಭಟ್ಕಳ ಪಟ್ಟಣದ ಕಂಚುಗಾರ ಮನೆಯಲ್ಲಿ ಗಣಪತಿ ಮೂರ್ತಿಗೆ ಬಣ್ಣ ಬಳಿಯುತ್ತಿರುವುದು.
ಕಾರವಾರದ ನಂದನಗದ್ದಾದಲ್ಲಿ ಗಣೇಶ ಮೂರ್ತಿಗೆ ಬಣ್ಣ ಲೇಪಿಸುತ್ತಿರುವ ಕಲಾಕಾರ ಅಭಿನಂದನ್ ಬಾಂದೇಕರ.
ಮಣ್ಣಿನಿಂದ ಮಾಡಿರುವ ಎತ್ತರದ ಗಣೇಶ ಮೂರ್ತಿಗಳನ್ನು ತರುವಾಗ ಪ್ರತಿಷ್ಠಾಪಿಸುವರೆಗೂ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಪಿಒಪಿ ಮೂರ್ತಿಗಳಿದ್ದಾಗ ಇಂತಹ ಸಮಸ್ಯೆ ಇರುತ್ತಿರಲಿಲ್ಲ. ಮಣ್ಣಿನ ಮೂರ್ತಿಗಳಿಗೆ ದರವೂ ಹೆಚ್ಚಾಗುತ್ತದೆ
ಪ್ರಕಾಶ ಬಡಿಗೇರ ಮುಂಡಗೋಡ ಗಣೇಶೋತ್ಸವ ಸಮಿತಿ ಪದಾಧಿಕಾರಿ
ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ ಕಡೆಗಳಲ್ಲಿ ಕಾವಲುಗಾರ ಹಾಗೂ ಸ್ವಯಂಸೇವಕ ನೇಮಕ ಮಾಡಿಕೊಳ್ಳಲಾಗಿದೆ
ಶಿವಾನಂದ ಶೆಟ್ಟರ ಹಳಿಯಾಳ ಗಣೇಶೋತ್ಸವ ಸಮಿತಿ ಪದಾಧಿಕಾರಿ
ವರ್ಷಕ್ಕೊಮ್ಮೆ ಆಚರಿಸುವ ಹಬ್ಬದ ಸಂದರ್ಭದಲ್ಲಿ ಡಿಜೆ ಬಳಸಬಾರದು ಎಂಬ ನಿಯಮ ಹೇರಿರುವುದು ಸರಿಯಲ್ಲ
ಜಗದೀಶ್ ನಾಯಕ ಭಾವಿಕೇರಿ ಗಣೇಶೋತ್ಸವ ಸಮಿತಿ ಪ್ರಮುಖ

ಪೊಲೀಸರಿಂದ ಬಹುಮಾನ ಗೋಕರ್ಣ ವ್ಯಾಪ್ತಿಯಲ್ಲಿ ಸುಮಾರು 39ಕ್ಕೂ ಹೆಚ್ಚು ಸಾರ್ವಜನಿಕ ಗಣೇಶೋತ್ಸವ ನಡೆಯಲಿದೆ. ಆಧುನಿಕತೆಗೆ ತಕ್ಕಂತೆ ವಿವಿಧ ರೀತಿಯ ಭಂಗಿಯಲ್ಲಿ ಕುಳಿತಿರುವ ನಿಂತಿರುವ ಗಣಪತಿ ಮೂರ್ತಿಯನ್ನು ಆಕರ್ಷಕವಾಗಿ ತಯಾರಿಸುವುದು ಭಕ್ತರ ಮೆಚ್ಚುಗೆಗೆ ಕಾರಣವಾಗಿದೆ. ಗೋಕರ್ಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪರಿಸರ ಸ್ನೇಹ ಗಣಪತಿ ಹಬ್ಬಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಪರಸರ ಸ್ನೇಹಿ ಸಾರ್ವಜನಿಕ ಗಣಪತಿ ಹಬ್ಬವನ್ನು ಸಂಘಟಿಸುವ ಸಂಘಕ್ಕೆ ಬಹುಮಾನ ವಿತರಿಸಲು ನಿರ್ಧರಿಸಲಾಗಿದೆ ಎನ್ನುತ್ತಾರೆ ಪೊಲೀಸ್ ಇನ್‌ಸ್ಪೆಕ್ಟರ್ ಶ್ರೀಧರ ಎಸ್.ಆರ್.

ಜನಪ್ರತಿನಿಧಿಗಳ ಮೇಲೆ ಒತ್ತಡ ದಾಂಡೇಲಿಯಲ್ಲಿ ಪರಿಸರ ಪೂರಕ ಮೂರ್ತಿಗಳ ಪ್ರತಿಷ್ಠಾಪನೆಗೆ ಸಿದ್ಧತೆ ನಡೆದಿದ್ದರೂ ಹಬ್ಬದ ವೇಳೆ ಡಿಜೆ ಬಳಕೆಗೆ ಅನುಮತಿ ನೀಡಬೇಕು ಎಂಬ ಒತ್ತಡ ಹೇರಲು ಗಣೇಶೋತ್ಸವ ಸಮಿತಿಯವರು ಶಾಸಕರು ಸೇರಿದಂತೆ ಜನಪ್ರತಿನಿಧಿಗಳ ಮೊರೆ ಹೋಗಿದ್ದಾರೆ. ‘ಹೊರಗಡೆಯಿಂದ ಮೂರ್ತಿ ತಂದು ನಗರದಲ್ಲಿ ಮಾರಾಟ ಮಾಡುವುದನ್ನು ನಿಯಂತ್ರಿಸಬೇಕು. ಪಿಒಪಿ ಮೂರ್ತಿಗಳ ನಿರ್ಬಂಧದ ಕುರಿತು ಹಬ್ಬಕ್ಕೆ ಕೆಲವೇ ದಿನ ಮುನ್ನ ಸೂಚನೆ ನೀಡುವ ಬದಲು 6 ತಿಂಗಳ ಮೊದಲೇ ತಿಳಿಸಬೇಕು ಎನ್ನುತ್ತಾರೆ ಸ್ಥಳೀಯ ಮೂರ್ತಿ ತಯಾರಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.