ADVERTISEMENT

ಹತ್ತು ದಿನ ಸ್ಥಿತಿ ಅವಲೋಕಿಸಿ ಗಣೇಶ ಹಬ್ಬಕ್ಕೆ ಹೊಸ ಮಾರ್ಗಸೂಚಿ: ಶಿವರಾಮ ಹೆಬ್ಬಾರ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2021, 9:31 IST
Last Updated 23 ಆಗಸ್ಟ್ 2021, 9:31 IST
ಶಿವರಾಮ ಹೆಬ್ಬಾರ
ಶಿವರಾಮ ಹೆಬ್ಬಾರ   

ಶಿರಸಿ: ಗಣೇಶ ಚತುರ್ಥಿ ಆಚರಣೆ ಸಂಬಂಧ ಮುಂದಿನ ಹತ್ತು ದಿನದ ಪರಿಸ್ಥಿತಿ ಅವಲೋಕಿಸಿ ಹೊಸ ಮಾರ್ಗಸೂಚಿ ಹೊರಡಿಸುವ ಸಾಧ್ಯತೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

ನಗರದಲ್ಲಿ ಸೋಮವಾರ ಮಾಧ್ಯಮದವರ ಜತೆ ಮಾತನಾಡಿದ ಅವರು, ‘ಹಬ್ಬದ ಆಚರಣೆಗೆ ಕಠಿಣ ನಿರ್ಬಂಧ ವಿಧಿಸದಂತೆ ಈಗಾಗಲೆ ಗಣೇಶೊತ್ಸವ ಸಮಿತಿ ಪ್ರಮುಖರ ನಿಯೋಗ ತಮ್ಮನ್ನು ಭೇಟಿ ಮಾಡಿದೆ. ಜನರ ಒತ್ತಾಯವನ್ನು ಸರ್ಕಾರಕ್ಕೂ ತಿಳಿಸಲಾಗಿದೆ. ಕೋವಿಡ್ ಮುಂದಿನ ಸ್ಥಿತಿ ಗಮನಿಸಿ ಮುಖ್ಯಮಂತ್ರಿ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ’ ಎಂದರು.

‘ಕೋವಿಡ್ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಶಿರಸಿಯಲ್ಲಿ ಕೋವಿಡ್ ಪತ್ತೆ ಪ್ರಯೋಗಾಲಯ ಶೀಘ್ರ ಕಾರ್ಯಾರಂಭಿಸಲಿದೆ. ಶಾಲೆಗಳಲ್ಲಿಯೂ ಕೋವಿಡ್ ನಿಯಮ ಪಾಲಿಸಿ ತರಗತಿ ಆರಂಭಿಸಲಾಗಿದೆ’ ಎಂದರು.

ADVERTISEMENT

‘ಸಾಲ ಮನ್ನಾ ಸೌಲಭ್ಯದಿಂದ ವಂಚಿತರಾಗಿರುವ ಎರಡು ಸಾವಿರದಷ್ಟು ರೈತರಿಗೆ ಬಿಡುಗಡೆ ಆಗಬೇಕಿರುವ ಮೊತ್ತವನ್ನು ಶೀಘ್ರ ದೊರಕುವಂತೆ ಮಾಡಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಿದ್ದೇನೆ. ವಾರದೊಳಗೆ ಸಕಾರಾತ್ಮಕ ಫಲಿತಾಂಶ ಕಂಡುಕೊಳ್ಳಲಿದ್ದೇವೆ’ ಎಂದರು.

‘ಖಾತೆ ಹಂಚಿಕೆ ವಿಚಾರದಲ್ಲಿ ಯಾವ ಸಚಿವರಲ್ಲೂ ಅಪಸ್ವರವಿಲ್ಲ. ಸರ್ಕಾರ ಸುಭದ್ರವಾಗಿದ್ದು ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.