ಕಾರವಾರ: ಗಣೇಶೋತ್ಸವ ಮೆರವಣಿಗೆಗಳಲ್ಲಿ ಡಿಜೆ (ಡಿಸ್ಕ್ ಜಾಕಿ) ಧ್ವನಿವರ್ಧಕಗಳ ಬಳಕೆ ಮಾಡದಂತೆ ಪೊಲೀಸರು ಸೂಚನೆ ನೀಡಿದ್ದರ ನಡುವೆಯೂ ಜಿಲ್ಲೆಯ ಹಲವೆಡೆ ನಿಯಮ ಉಲ್ಲಂಘಿಸಿ, ಡಿಜೆ ಬಳಕೆಗೆ ಉತ್ಸವ ಸಮಿತಿಗಳು ಮುಂದಾಗಿರುವ ದೂರುಗಳಿವೆ.
‘ಶಿರಸಿ, ಮುಂಡಗೋಡ ಸೇರಿದಂತೆ ಹಲವೆಡೆ ಡಿಜೆ ಧ್ವನಿವರ್ಧಕ ಬಳಕೆ ಮಾಡಿ ಗಣೇಶೋತ್ಸವ ಮೆರವಣಿಗೆ ನಡೆಸಲಾಗಿದೆ. ಆ.31, ಸೆ.2 ರಂದು ಹತ್ತಾರು ಕಡೆಗಳಲ್ಲಿ ನಿಯಮ ಉಲ್ಲಂಘನೆ ನಡೆದರೂ ಪೊಲೀಸರಿಂದ ಕ್ರಮ ಆಗಿಲ್ಲ’ ಎಂದು ಕೆಲ ಗಣೇಶೋತ್ಸವ ಪ್ರಮುಖರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಗಣೇಶ ಚತುರ್ಥಿ ಹಬ್ಬಕ್ಕೆ ಮುನ್ನವೇ ಉತ್ಸವದ ವೇಳೆ ಡಿಜೆ ಬಳಕೆ ಮಾಡದಂತೆ ಪೊಲೀಸರು ನೋಟಿಸ್ ನೀಡಿದ್ದಾರೆ. ಈ ಬಾರಿ ಕಟ್ಟುನಿಟ್ಟಾಗಿ ನಿಯಮ ಪಾಲಿಸಲು ನಿರ್ಧರಿಸಲಾಗಿತ್ತು. ಆದರೆ, ಹಲವೆಡೆ ನಿಯಮ ಉಲ್ಲಂಘನೆಯಾಗಿದೆ. ಆದರೂ ಕ್ರಮ ಕೈಗೊಂಡಿಲ್ಲ. ನಾವೂ ಡಿಜೆ ಬಳಸಿದರೆ ತಪ್ಪೇನು?’ ಎಂಬ ಪ್ರಶ್ನೆ ಎತ್ತಿದ್ದಾರೆ.
ಗಣೇಶ ಮೂರ್ತಿ ಪ್ರತಿಷ್ಠಾಪಿಸಿ 9 ಮತ್ತು 11ನೇ ದಿನ ಜಿಲ್ಲೆಯ ಹಲವೆಡೆ ದೊಡ್ಡ ಮಟ್ಟದಲ್ಲಿ ಮೂರ್ತಿಗಳ ವಿಸರ್ಜನಾ ಮೆರವಣಿಗೆ ನಡೆಯಲಿದ್ದು ಇದಕ್ಕಾಗಿ ಸ್ಥಳೀಯವಾಗಿ, ಹೊರ ಜಿಲ್ಲೆಗಳಿಂದ ಲಕ್ಷಾಂತರ ಮೊತ್ತ ಪಾವತಿಸಿ ಡಿಜೆ ತರಿಸಲು ತಯಾರಿ ನಡೆದಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಉತ್ಸವ ಸಮಿತಿಗಳು ಪ್ರಚಾರ ನಡೆಸುತ್ತಿವೆ.
‘ಗಣೇಶೋತ್ಸವದ ಅದ್ದೂರಿ ಮೆರವಣಿಗೆ ನಡೆಯುವ ಕಾರವಾರ, ಶಿರಸಿಯಲ್ಲಿ ಹಲವು ಉತ್ಸವ ಸಮಿತಿಗಳು ಡಿಜೆ ಬಳಕೆಗೆ ಪ್ರಯತ್ನಿಸುತ್ತಿವೆ. ಇದಕ್ಕಾಗಿ ಡಿಜೆ ಧ್ವನಿವರ್ಧಕ ಪೂರೈಸುವವರಿಗೆ ಮುಂಗಡ ಪಾವತಿಸಿವೆ. ಗ್ರಾಮೀಣ ಪ್ರದೇಶದಲ್ಲೂ ಡಿಜೆ ತರಿಸಲು ಉತ್ಸವ ಸಮಿತಿಗಳು ಲಕ್ಷಾಂತರ ವ್ಯಯಿಸಿವೆ. ಪೊಲೀಸರ ಕ್ರಮದ ಭಯದಿಂದ ಕೊನೆ ಕ್ಷಣದಲ್ಲಿ ಡಿಜೆ ತರಿಸುವ ಸಾಧ್ಯತೆ ಇದೆ’ ಎಂದು ಡಿಜೆ ಪೂರೈಕೆದಾರರೊಬ್ಬರು ಹೇಳಿದರು.
ಡಿಜೆ ಬಳಕೆಗೆ ಅವಕಾಶ ನೀಡುತ್ತಿಲ್ಲ. ಈ ಬಾರಿ ಹಲವು ಉತ್ಸವ ಸಮಿತಿಗಳು ಡಿಜೆ ಬಳಕೆ ಮಾಡದೆ ಸಾಂಪ್ರದಾಯಿಕವಾಗಿ ವಿಸರ್ಜನಾ ಮೆರವಣಿಗೆ ನಡೆಸಿ ಮಾದರಿಯಾಗಿವೆ. ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಜರುಗಿಸುತ್ತೇವೆದೀಪನ್ ಎಂ.ಎನ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗಸೂಚಿಯು ವಸತಿ ಪ್ರದೇಶಗಳಲ್ಲಿ ಹಗಲಿನ ವೇಳೆ ಗರಿಷ್ಠ 55 ಡೆಸಿಬಲ್ ವಾಣಿಜ್ಯ ಪ್ರದೇಶಧಲ್ಲಿ 65 ಡೆಸಿಬಲ್ ಶಬ್ದದ ಮಿತಿ ಮಾತ್ರ ಆರೋಗ್ಯಕರ. ರಾತ್ರಿ ವೇಳೆ ಈ ಪ್ರಮಾಣ 45 ಡಿಸೆಬಲ್‌ಗಿಂತ ಕಡಿಮೆ ಇರಬೇಕು ಎಂದು ತಿಳಿಸುತ್ತಿದೆ. ‘ಡಿಜೆಯ ಬೇಸ್‌ನಿಂದ ಹೊರಡುವ ಶಬ್ದವು ಕನಿಷ್ಠ 100 ಡೆಸಿಬಲ್ ಮೀರುತ್ತದೆ. ಅದಕ್ಕೆ ಅಳವಡಿಸುವ ಲೈನರ್ ಮತ್ತು ದೂರದವರೆಗೆ ಶಬ್ದ ಹೊರಡಿಸಲು ಬಳಸುವ ಫ್ರೆಶರ್ ಮಿಡ್ ಶಬ್ದದ ಮಿತಿಯನ್ನು 120 ಡೆಸಿಬಲ್‌ಗೂ ಮೀರಿಸುತ್ತದೆ. ಇದು ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುವ ಜೊತೆಗೆ ಕಿವಿ ಮೇಲೂ ಪರಿಣಾಮ ಬೀರಬಲ್ಲದು. ಅತಿಯಾದ ಶಬ್ದಕ್ಕೆ ತಮಟೆ ಹರಿದುಹೋಗುವ ಸಾಧ್ಯತೆಯೂ ಹೆಚ್ಚು. ಡಿಜೆಗಳ ಜೊತೆಗೆ ಬಳಕೆ ಮಾಡುವ ಲೇಸರ್‌ಗಳಿಂದ ಮಕ್ಕಳ ಕಣ್ಣಿನ ಮೇಲೆ ದುಷ್ಪರಿಣಾಮ ಬೀರುತ್ತದೆ’ ಎಂದು ವೈದ್ಯಾಧಿಕಾರಿಯೊಬ್ಬರು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.