ಕಾರವಾರ: 2023–24ನೇ ಸಾಲಿನ ಗೆಜೆಡೆಟ್ ಪ್ರೊಬೇಷನರ್ಸ್ ಗ್ರೂಪ್ ಎ ಮತ್ತು ಬಿ ವೃಂದದ ಹುದ್ದೆಗಳ ನೇಮಕಾತಿಗೆ ಜಿಲ್ಲೆಯಲ್ಲಿ ಆ.27 ರಂದು ನಡೆಯುವ ಪರೀಕ್ಷೆಯಲ್ಲಿ ಯಾವುದೇ ರೀತಿಯ ಅವ್ಯವಹಾರ ನಡೆಯದಂತೆ ಎಚ್ಚರವಹಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಅಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಪರೀಕ್ಷೆಯ ಪೂರ್ವಸಿದ್ಧತೆ ಸಭೆ ನಡೆಸಿದ ಅವರು, ‘ಪರೀಕ್ಷೆ ನಡೆಯಲಿರುವ ಎಲ್ಲ 15 ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಕೆ, ಮೊಬೈಲ್ ನೆಟ್‍ವರ್ಕ್ ಜಾಮರ್ ಅಳವಡಿಸಬೇಕು’ ಎಂದು ಆದೇಶಿಸಿದರು.
‘4,234 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷಾ ಕೊಠಡಿಯಲ್ಲಿ ಅಭ್ಯರ್ಥಿಗಳಿಗೆ ಸೂಚಿಸಿರುವ ವಸ್ತ್ರಸಂಹಿತೆ ಪಾಲನೆಯಾಗುವಂತೆ ಎಚ್ಚರವಹಿಸಬೇಕು. ಮೊಬೈಲ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳನ್ನು ಕೊಠಡಿಗೆ ತೆಗೆದುಕೊಂಡು ಬಾರದಂತೆ ಕಟ್ಟಿನಿಟ್ಟಿನ ತಪಾಸಣೆ ನಡೆಸಬೇಕು. ಅಭ್ಯರ್ಥಿಗಳಿಗೆ ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು’ ಎಂದು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ರಜಪೂತ್, ಪರೀಕ್ಷೆ ಕರ್ತವ್ಯಕ್ಕೆ ನಿಯೋಜಿಸಿರುವ ಅಧಿಕಾರಿಗಳು ಇದ್ದರು.
ಕೇಂದ್ರದ ಸುತ್ತ ನಿಷೇಧಾಜ್ಞೆ
ಪರೀಕ್ಷೆ ನಡೆಯುವ ಕಾರವಾರದ ಸರ್ಕಾರಿ ಪೂರ್ವ ಕಾಲೇಜು, ಸರ್ಕಾರಿ ಎಂಜಿನಿಯರಿಂಗ್ ಕಾಲೇಜು, ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು, ಹಿಂದೂ ಪ್ರೌಡಶಾಲೆ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಬಿಣಗಾದ ಸೋಮನಾಥ ಪ್ರೌಡಶಾಲೆ, ದಿವೇಕರ್ ವಾಣಿಜ್ಯ ಕಾಲೇಜು, ಸದಾಶಿವಗಡದ ಶಿವಾಜಿ ಪದವಿಪೂರ್ವ ಕಾಲೇಜು, ರಹೀಮ್‌ಖಾನ್ ಯೂನಿಟಿ ಪ್ರೌಢಶಾಲೆ, ಬಿಜಿವಿಎಸ್ ಕಲಾ ಮತ್ತು ವಾಣಿಜ್ಯ ಕಾಲೇಜು, ಬಾಡದ ಶಿವಾಜಿ ಕಲಾ ಮತು ವಾಣಿಜ್ಯ ಕಾಲೇಜು ಮತ್ತು ಶಿವಾಜಿ ಪಿಯು ಕಾಲೇಜು, ಶಿವಾಜಿ ಪ್ರೌಡ ಶಾಲೆ ನಂದನಗದ್ದಾ, ನ್ಯೂ ಹೈಸ್ಕೂಲ್, ಅಮೃತ ವಿದ್ಯಾಲಯದ ಸುತ್ತಮುತ್ತಲಿನ 200 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.