ADVERTISEMENT

ಸಣ್ಣ ಉದ್ದಿಮೆ ಸಹಾಯಕ್ಕೆ ಜಿ.ಇ.ಸಿ.ಎಲ್

ಲಾಕ್‌ಡೌನ್‌ನಿಂದ ಆರ್ಥಿಕ ತೊಂದರೆಗೆ ಒಳಗಾದ ಸಂಸ್ಥೆಗಳ ನೆರವಿಗೆ ಯೋಜನೆ

ಸದಾಶಿವ ಎಂ.ಎಸ್‌.
Published 20 ಜೂನ್ 2020, 19:30 IST
Last Updated 20 ಜೂನ್ 2020, 19:30 IST
   

ಕಾರವಾರ: ಲಾಕ್‌ಡೌನ್ ಅವಧಿಯಲ್ಲಿ ನಷ್ಟ ಅನುಭವಿಸಿದ ಸಣ್ಣ ಉದ್ಯಮಗಳ ನೆರವಿಗೆ ಪ್ರಕಟಿಸಲಾದ, ‘ತುರ್ತು ಹಣಕಾಸು ಖಾತರಿಯೋಜನೆ’ಯಡಿ (ಜಿ.ಇ.ಸಿ.ಎಲ್) ಜಿಲ್ಲೆಯಲ್ಲಿ ಈವರೆಗೆ 1,108 ಉದ್ಯಮಿಗಳು ಪ್ರಯೋಜನ ಪಡೆದುಕೊಂಡಿದ್ದಾರೆ. ಒಟ್ಟು ₹ 16.10 ಕೋಟಿ ಮೊತ್ತ ಮಂಜೂರಾಗಿದೆ.

ಲಾಕ್‌ಡೌನ್‌ ಸಂದರ್ಭದಲ್ಲಿ ಉದ್ಯಮಗಳನ್ನು ಮುಚ್ಚಲಾಗಿತ್ತು. ಆದರೆ, ನಿರ್ಬಂಧಗಳು ತೆರವಾದ ಬಳಿಕ ಪುನರಾರಂಭಿಸಲು ಹಣಕಾಸು ಕೊರತೆ ಎದುರಾಗಿತ್ತು. ಉದ್ದಿಮೆಗಾಗಿ ಮಾಡಿದ್ದ ಸಾಲದ ಕಂತುಗಳ ಮರುಪಾವತಿಗೂ ಸಣ್ಣ ಉದ್ಯಮಿಗಳ ಪರದಾಡಿದ್ದರು. ಅಂತಹವರ ನೆರವಿಗೆ ಒಟ್ಟು ₹ 3 ಲಕ್ಷ ಕೋಟಿಯನ್ನು ‘ಆತ್ಮ ನಿರ್ಭರ್ ಪ್ಯಾಕೇಜ್’ ಅಡಿ ಕೇಂದ್ರ ಸರ್ಕಾರ ಘೋಷಿಸಿತ್ತು.

‘ಈ ಯೋಜನೆ ಪ್ರಕಾರ ಫೆ.29ರಂದು ಅನ್ವಯವಾಗುವಂತೆ, ಉದ್ಯಮಿಗಳು ಪಾವತಿಸಬೇಕಾದಸಾಲದ ಬಾಕಿ ಮೊತ್ತದ ಶೇ 20ರಷ್ಟನ್ನು ಪುನಃ ಸಾಲವನ್ನಾಗಿ ಬ್ಯಾಂಕ್‌ಗಳಿಂದನೀಡಲಾಗುತ್ತದೆ. ಉದಾಹರಣೆಗೆ ಒಬ್ಬ ಉದ್ಯಮಿ ₹ 10 ಲಕ್ಷ ಸಾಲ ಪಾವತಿಸಲು ಬಾಕಿಯಿದ್ದರೆ ಅವರಿಗೆ ₹ 2 ಲಕ್ಷ ಸಾಲ ಪಡೆಯಲು ಅರ್ಹತೆ ಇರುತ್ತದೆ. ಇದಕ್ಕೆ ಬ್ಯಾಂಕ್‌ಗಳಲ್ಲಿಶೇ 9.25ರ ಗರಿಷ್ಠ ಬಡ್ಡಿಯಲ್ಲಿ ಹಾಗೂ ಕಿರು ಹಣಕಾಸು ಸಂಸ್ಥೆಗಳಲ್ಲಿ ಗರಿಷ್ಠ 14ರ ಬಡ್ಡಿ ದರವನ್ನು ವಿಧಿಸಲಾಗುತ್ತದೆ’ ಎಂದು ಜಿಲ್ಲಾ ಸಹವರ್ತಿ ಬ್ಯಾಂಕ್ ವ್ಯವಸ್ಥಾಪಕ ಪಿ.ಎಂ.ಪಿಂಜರ್ ‘ಪ್ರಜಾವಾಣಿ’ಗೆ ವಿವರಿಸಿದರು.

ADVERTISEMENT

‘ಇದಕ್ಕೆ ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಸಾಲ ಖಾತರಿ ಟ್ರಸ್ಟೀ ಕಂಪನಿಯು (ಎನ್.ಸಿ.ಜಿ.ಟಿ.ಸಿ) ಬ್ಯಾಂಕ್‌ಗಳಿಗೆಸಂಪೂರ್ಣ ಖಾತರಿಯನ್ನು ನೀಡುತ್ತದೆ. ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್‌ಗಳಿಗೂ ಇದು ಅನ್ವಯವಾಗುತ್ತದೆ. ಮುದ್ರಾ ಯೋಜನೆಯಡಿ ಸಾಲ‍ಪಡೆದವರೂ ಇದರ ಪ್ರಯೋಜನ‍ಪಡೆದುಕೊಳ್ಳಬಹುದು. ಸಾಲದ ಮೊತ್ತ ಗರಿಷ್ಠ₹ 25 ಕೋಟಿ ಹಾಗೂ 2019–20ನೇ ಸಾಲಿನಲ್ಲಿ ₹ 100 ಕೋಟಿಯ ಒಳಗೆ ವಹಿವಾಟು ಮಾಡಿದ ಉದ್ದಿಮೆಗಳು ಇದರ ಪ್ರಯೋಜನ ಪಡೆದುಕೊಳ್ಳಬಹುದು’ ಎಂದು ಮಾಹಿತಿ ನೀಡಿದರು.

‘ಇದಕ್ಕೆ ಯಾವುದೇ ಪರಿಷ್ಕರಣಾ ಶುಲ್ಕ, ಮರುಪಾವತಿ ಶುಲ್ಕು ವಿಧಿಸುವುದಿಲ್ಲ. ನಾಲ್ಕು ವರ್ಷಗಳ ಅವಧಿಯಲ್ಲಿ ಮರು ಪಾವತಿ ಮಾಡಬೇಕು. ಸಿಬಿಲ್ ಮತ್ತು ಸಿ.ಎಂ.ಆರ್ಶ್ರೇಯಾಂಕವೂ ಇದಕ್ಕೆ ಬೇಕಾಗಿಲ್ಲ. ಲಾಕ್‌ಡೌನ್ ಕಾರಣದಿಂದ ಸ್ಥಗಿತಗೊಂಡಿರುವ ಉದ್ಯಮಗಳಿಗೆ ಮರು ಚಾಲನೆ ನೀಡುವುದೇ ಈ ಯೋಜನೆಯ ಉದ್ದೇಶವಾಗಿದೆ’ ಎಂದು ತಿಳಿಸಿದರು.

‘ಹಲವರಿಗೆ ಪ್ರಯೋಜನ’:‘ಜಿಲ್ಲೆಯಲ್ಲಿ 12,273 ಬ್ಯಾಂಕ್‌ ಖಾತೆಗಳುಜಿ.ಇ.ಸಿ.ಎಲ್ ಯೋಜನೆಯ ಸೌಲಭ್ಯ ಪಡೆದುಕೊಳ್ಳಲು ಅರ್ಹವಾಗಿವೆ. ಆದರೆ, ಅವುಗಳಲ್ಲಿ ಕೆಲವು ಖಾತೆದಾರರ ಸಾಲದ ಮರು ಪಾವತಿ ಮೊತ್ತ ಕಡಿಮೆ ಇರುವ ಕಾರಣ ಅವರಿಗೆ ಸಿಗಬಹುದಾದನೆರವೂಕಡಿಮೆಯಿರುತ್ತದೆ. ಅಂಥವರು ಈ ಯೋಜನೆಗೆ ಆಸಕ್ತಿ ತೋರದಿರಬಹುದು. ಆದರೆ, ದೊಡ್ಡ ಮೊತ್ತದ ಸಾಲ ಮರುಪಾವತಿ ಇರುವ ಸಣ್ಣ ಉದ್ಯಮಿಗಳಿಗೆ ಇದರಿಂದ ಪ್ರಯೋಜನವಾಗಲಿದೆ’ ಎಂದು ಪಿ.ಎಂ.ಪಿಂಜರ್ ತಿಳಿಸಿದರು.

ಜಿಲ್ಲೆಯಲ್ಲಿ ಜಿ.ಇ.ಸಿ.ಎಲ್ ಸ್ಥಿತಿಗತಿ

12,273 ಖಾತೆಗಳು

ಸಾಲ ಪಡೆಯಲು ಅರ್ಹವಾದವು

₹ 223.35 ಕೋಟಿ

ಮರುಪಾವತಿ ಆಗಬೇಕಿರುವ ಮೊತ್ತ

1,108 ಖಾತೆಗಳು

ಜಿ.ಇ.ಸಿ.ಎಲ್ ಅಡಿ ಸಾಲ ಪಡೆದವು

₹ 16.10 ಕೋಟಿ

ಜಿ.ಇ.ಸಿ.ಎಲ್ ಅಡಿ ಮಂಜೂರಾದ ಮೊತ್ತ

* ಜೂನ್ 20ರವರೆಗಿನಅಂಕಿ ಅಂಶಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.