ADVERTISEMENT

ಶಿರಸಿ: ಕಣ್ಮರೆಯಾದ ಜನೌಷಧ ಕೇಂದ್ರ

ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ಹೊಸ ಕಟ್ಟಡ ನಿರ್ಮಾಣ

ಗಣಪತಿ ಹೆಗಡೆ
Published 10 ಸೆಪ್ಟೆಂಬರ್ 2022, 19:30 IST
Last Updated 10 ಸೆಪ್ಟೆಂಬರ್ 2022, 19:30 IST
ಶಿರಸಿಯ ಪಂಡಿತ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಜನೌಷಧ ಕೇಂದ್ರ ಇದ್ದ ಕಟ್ಟಡ ತೆರವುಗೊಂಡಿತ್ತು (ಸಂಗ್ರಹ ಚಿತ್ರ)
ಶಿರಸಿಯ ಪಂಡಿತ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಜನೌಷಧ ಕೇಂದ್ರ ಇದ್ದ ಕಟ್ಟಡ ತೆರವುಗೊಂಡಿತ್ತು (ಸಂಗ್ರಹ ಚಿತ್ರ)   

ಶಿರಸಿ: ಇಲ್ಲಿನ ಪಂಡಿತ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಈ ಮೊದಲು ಕಾರ್ಯನಿರ್ವಹಿಸುತ್ತಿದ್ದ ಜನೌಷಧ ಕೇಂದ್ರ ಈಗ ಕಣ್ಮರೆ ಆಗಿದೆ. ಹೊಸ ಕಟ್ಟಡ ನಿರ್ಮಿಸಲು ಆಸ್ಪತ್ರೆಯ ಹಳೆಯ ಕಟ್ಟಡ ತೆರವುಗೊಳಿಸಿದ್ದರಿಂದ ಸ್ಥಳಾವಕಾಶ ಸಿಗದೆ ಕೇಂದ್ರ ಸ್ಥಗಿತಗೊಂಡಿದೆ.

ಆಸ್ಪತ್ರೆಯ ಪ್ರವೇಶ ದ್ವಾರದ ಬಳಿಯ ಕಟ್ಟಡದಲ್ಲಿ ಜನೌಷಧ ಕೇಂದ್ರ ತೆರೆಯಲಾಗಿತ್ತು. ಸುಮಾರು ಮೂರು ವರ್ಷಗಳ ಕಾಲ ಕೇಂದ್ರ ಕಾರ್ಯಾಚರಣೆ ನಡೆಸಿದೆ. ಕಳೆದ ಡಿಸೆಂಬರ್ ವೇಳೆಗೆ ಕಟ್ಟಡ ತೆರವು ಮಾಡಿದ ಬಳಿಕ ಕೇಂದ್ರ ಸೂಕ್ತ ಸ್ಥಳಾವಕಾಶ ಲಭಿಸದ ಕಾರಣ ಕೆಲಸ ನಿಲ್ಲಿಸಿದೆ.

ಮಧುಮೇಹ, ಅಧಿಕ ರಕ್ತದೊತ್ತಡ ಸೇರಿದಂತೆ ಹಲವು ಕಾಯಿಲೆಗೆ, ಟಾನಿಕ್, ಪ್ರೊಟೀನ್ ಪೌಡರ್ ಸೇರಿ ಹಲವು ಔಷಧಗಳು ಕಡಿಮೆ ದರದಲ್ಲಿ ರೋಗಿಗಳಿಗೆ ಇಲ್ಲಿ ಲಭಿಸುತ್ತಿದ್ದವು. ರೋಗಿಗಳಿಗೆ ಅನುಕೂಲವಾಗಿದ್ದ ಜನೌಷಧ ಕೇಂದ್ರ ಮುಚ್ಚಿರುವುದು ಹಲವರಲ್ಲಿ ಬೇಸರ ತರಿಸಿದೆ.

ADVERTISEMENT

‘ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಒಂದಾದ ಜನೌಷಧ ಕೇಂದ್ರದಲ್ಲಿ ದುಬಾರಿ ಬೆಲೆಯ ಬದಲು ಕಡಿಮೆ ದರಕ್ಕೆ ಜೀವರಕ್ಷಕ ಔಷಧಗಳು ಲಭಿಸುತ್ತಿದ್ದವು. ಸರ್ಕಾರಿ ಆಸ್ಪತ್ರೆ ಆವರಣದಲ್ಲಿರುವ ಕೇಂದ್ರ ಬಡವರಿಗೆ ಆಸರೆಯಾಗಿತ್ತು. ಜನರ ಅನುಕೂಲತೆಯ ದೃಷ್ಟಿಯಿಂದ ಅದರ ಅಗತ್ಯವಿತ್ತು’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಪಿ.ಎಸ್.ಹೆಗಡೆ.

‘ಆಸ್ಪತ್ರೆ ಆವರಣದ ಹೊರತಾದ ಜಾಗದಲ್ಲಿ ಕೇಂದ್ರ ತೆರೆಯಲು ಹೊಸದಾಗಿ ಪರವಾನಿಗೆ ಪಡೆದುಕೊಳ್ಳಬೇಕಾಗುತ್ತದೆ. ಅದಕ್ಕೆ ಭಾರತೀಯ ಜನೌಷಧ ಪ್ರಾಧಿಕಾರದಿಂದ (ಬಿ.ಪಿ.ಪಿ.ಐ.) ಪರವಾನಿಗೆ ದೊರೆಯುವುದು ಕಷ್ಟ’ ಎಂದು ಜನೌಷಧ ಕೆಂದ್ರ ನಿರ್ವಹಿಸುವ ಹೊಣೆ ಹೊತ್ತಿದ್ದ ಸ್ಕೋಡ್‍ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ ನಾಯ್ಕ ತಿಳಿಸಿದರು.

‘ಆಸ್ಪತ್ರೆ ಆವರಣದಲ್ಲಿ ಜನೌಷಧ ಕೇಂದ್ರ ಪುನರಾರಂಭಿಸಲು ಜಾಗ ಒದಗಿಸುವಂತೆ ಮನವಿ ಮಾಡಲಾಗಿದೆ. ಈವರೆಗೆ ಜಾಗ ಸಿಗದ ಕಾರಣ ಮಳಿಗೆ ತೆರೆದಿಲ್ಲ. ಸೀಮಿತ ಜನೌಷಧ ಮಾರಾಟ ಮಾಡಬೇಕಿರುವುದರಿಂದ ಖಾಸಗಿ ಕಟ್ಟಡದಲ್ಲಿ ಕೇಂದ್ರ ನಿರ್ವಹಣೆಯೂ ಕಷ್ಟ’ ಎಂದರು.

‘ಆಸ್ಪತ್ರೆಯ ಹೊಸ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿರುವ ಕಾರಣ ಸದ್ಯ ಆವರಣದಲ್ಲಿ ಜಾಗದ ಕೊರತೆ ಇದೆ. ಹೊಸ ಕಟ್ಟಡ ನಿರ್ಮಿಸಿದ ಬಳಿಕ ಜನೌಷಧ ಕೇಂದ್ರ ಆರಂಭಿಸಲು ಜಾಗ ಒದಗಿಸುವ ಸಾಧ್ಯತೆ ಇದೆ’ ಎಂದು ಆಸ್ಪತ್ರೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

----------------

ಆಸ್ಪತ್ರೆ ಆವರಣ ಅಥವಾ ಸುತ್ತಮುತ್ತಲಿನ ಸರ್ಕಾರಿ ಕಟ್ಟಡದಲ್ಲಿ ಜನೌಷಧ ಕೇಂದ್ರ ಪುನರಾರಂಭಿಸಲು ಅವಕಾಶ ನೀಡಿದರೆ ಕೇಂದ್ರ ತೆರೆಯಲಾಗುವುದು.

ವೆಂಕಟೇಶ ನಾಯ್ಕ

ಸ್ಕೊಡ್‍ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.