ADVERTISEMENT

ಮುಖ್ಯಮಂತ್ರಿ ವಿರುದ್ಧ ಉತ್ತರ ಕನ್ನಡ ಬಿಜೆಪಿಯಿಂದ #GoBackKumaraswamy ಅಭಿಯಾನ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2019, 4:57 IST
Last Updated 4 ಏಪ್ರಿಲ್ 2019, 4:57 IST
   

ಕಾರವಾರ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬುಧವಾರ ತಡರಾತ್ರಿ ಉಡುಪಿ ಜಿಲ್ಲೆಯಿಂದ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣಕ್ಕೆ ಬಂದು ವಾಸ್ತವ್ಯ ಹೂಡಿದ್ದಾರೆ.

ಗುರುವಾರ ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ್ ಅವರ ನಾಮಪತ್ರ ಸಲ್ಲಿಕೆಯಲ್ಲಿ ಹಾಗೂ ಬಳಿಕ ನಡೆಯುವ ಮೈತ್ರಿ ಪಕ್ಷಗಳ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

ಈ ನಡುವೆ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು #GoBackKumaraswamy ಅಭಿಯಾನ ಆರಂಭಿಸಿದ್ದಾರೆ. ಫೇಸ್‌ಬುಕ್ ಹಾಗೂ ಟ್ವಿಟರ್‌ಗಳಲ್ಲಿ ಈ ಹ್ಯಾಷ್ ಟ್ಯಾಗ್ ಬಳಸಿ, 'ಕುಮಾರಸ್ವಾಮಿಯವರೇ ಜಿಲ್ಲೆಯಿಂದ ವಾಪಸ್ ಹೋಗಿ' ಎಂದು ಪೋಸ್ಟ್ ಮಾಡುತ್ತಿದ್ದಾರೆ.

ADVERTISEMENT

ಕಾರಣವೇನು?

ಅಧಿಕಾರಕ್ಕೆ ಬಂದ ಎರಡು ತಿಂಗಳ ಒಳಗೇ ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಅತಿಕ್ರಮಣಕಾರರ ಸಮಸ್ಯೆಯನ್ನು ಬಗೆಹರಿಸುವುದಾಗಿ ಎಚ್.ಡಿ.ಕುಮಾರಸ್ವಾಮಿ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಕುಮಟಾಕ್ಕೆ ಪ್ರಚಾರಕ್ಕೆ ಬಂದಿದ್ದಾಗ ಆಶ್ವಾಸನೆ ಕೊಟ್ಟಿದ್ದರು. ಆದರೆ, ಈ ಭರವಸೆ ಈಡೇರಿಲ್ಲ. ಅಲ್ಲದೇ ಈ ಸಂಬಂಧ ಅವರಾಗಲೀ ಅವರ ಸಂಪುಟದ ಸಚಿವರಾಗಲೀ ಜಿಲ್ಲೆಗೆ ಭೇಟಿ ನೀಡಿಲ್ಲ.

ಜಿಲ್ಲೆಯಲ್ಲಿ ಅತಿಕ್ರಮಣಕಾರರ ಸಮಸ್ಯೆ ವರ್ಷದಿಂದ ವರ್ಷಕ್ಕೆ ಕಾವು ಪಡೆದುಕೊಳ್ಳುತ್ತಿದೆ. ಜಿಲ್ಲೆಯಲ್ಲಿ ಒಟ್ಟು ಅತಿಕ್ರಮಣಕಾರರ ಅರ್ಜಿ ಸಲ್ಲಿಕೆಯಾಗಿರುವುದು 87,625. ಅದರಲ್ಲಿ 65,220 ಅರ್ಜಿ ತಿರಸ್ಕೃತವಾಗಿದೆ. ಸಾಕಷ್ಟು ಹೋರಾಟಗಳು ನಡೆದರೂ ಸಮಸ್ಯೆ ಬಗೆಹರಿದಿಲ್ಲ.

'ಸುಳ್ಳು ಹೇಳದೇ ಮರಳಿ‌ ಹೋಗಿ'

ಮತ್ತೆ ಜಿಲ್ಲೆಗೆ ಬರುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಈ ಭಾರಿಯಾದರೂ ಸುಳ್ಳು ಹೇಳದೇ ಮರಳಿ ಹೋಗಿ' ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿಯ ಮಾಧ್ಯಮ‌ ಸಂಚಾಲಕ ನಾಗರಾಜ ನಾಯಕ ಹೇಳಿದ್ದಾರೆ.

‘ಚುನಾವಣಾ ಸಮಯದಲ್ಲಿ ಬಂದು ಜನರಿಗೆ ಸುಳ್ಳು ಆಶ್ವಾಸನೆಗಳನ್ನು ನೀಡಿ, ಅವರ ಶಾಪಕ್ಕೆ ಗುರಿಯಾಗದೇ ವಾಪಸ್ ತೆರಳಿ' ಎಂದು ಅವರು ಪ್ರಕಟಣೆಯಲ್ಲಿ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.