ADVERTISEMENT

ಗೋಕರ್ಣ: ‘ಪ್ಲಾಸ್ಟಿಕ್ ಮುಕ್ತ ಪರಿಸರ ಎಲ್ಲರ ಹೊಣೆ’

ಗೋಕರ್ಣದ ಮುಖ್ಯ ಸಮುದ್ರ ತೀರದ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 5:12 IST
Last Updated 1 ಡಿಸೆಂಬರ್ 2025, 5:12 IST
ಗೋಕರ್ಣದ ಮುಖ್ಯ ಸಮುದ್ರ ತೀರದಲ್ಲಿ ನಡೆದ ಸ್ವಚ್ಛತಾ ಅಭಿಯಾನದಲ್ಲಿ ವಿವಿಧ ಸಂಘಟನೆಯ ಪ್ರಮುಖರು, ಗ್ರಾಮ ಪಂಚಾಯಿತಿ ಸದಸ್ಯರು, ಪೊಲೀಸ್ ಅಧಿಕಾರಿ ಪಾಲ್ಗೊಂಡಿದ್ದರು  
ಗೋಕರ್ಣದ ಮುಖ್ಯ ಸಮುದ್ರ ತೀರದಲ್ಲಿ ನಡೆದ ಸ್ವಚ್ಛತಾ ಅಭಿಯಾನದಲ್ಲಿ ವಿವಿಧ ಸಂಘಟನೆಯ ಪ್ರಮುಖರು, ಗ್ರಾಮ ಪಂಚಾಯಿತಿ ಸದಸ್ಯರು, ಪೊಲೀಸ್ ಅಧಿಕಾರಿ ಪಾಲ್ಗೊಂಡಿದ್ದರು     

ಗೋಕರ್ಣ: ‘ಪ್ಲಾಸ್ಟಿಕ್ ಮುಕ್ತ ಪರಿಸರ ನಮ್ಮೆಲ್ಲರ ಹೊಣೆ. ಈಗಾಗಲೇ ಗೋಕರ್ಣದಲ್ಲಿ ಪ್ಲಾಸ್ಟಿಕ್ ನಿಷೇಧಿಸಿ ಆದೇಶಿಸಲಾಗಿದೆ. ಆದರೆ ಆ ಆದೇಶ ಕಾಗದದಲ್ಲಿ ಮಾತ್ರ ಇದೆ, ಬಳಕೆಯಲ್ಲಿಲ್ಲ. ಇದರಿಂದ ಕ್ಷೇತ್ರಕ್ಕೂ ಸ್ವಚ್ಛತೆಯ ವಿಷಯದಲ್ಲಿ ಕೆಟ್ಟ ಹೆಸರು ಬರುತ್ತಿದೆ. ಸ್ವಚ್ಛತೆಗೆ ನಾವೆಲ್ಲರೂ ಪ್ರಾಶಸ್ತ್ಯ ಕೊಟ್ಟು ಕ್ಷೇತ್ರವನ್ನು ಪ್ಲಾಸ್ಟಿಕ್ ಮುಕ್ತ ಪರಿಸರವನ್ನಾಗಿ ಮಾಡೋಣ’ ಎಂದು ಕೆ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ, ಗೋಕರ್ಣದ ಪುಣ್ಯಾಶ್ರಮದ ರಾಜಗೋಪಾಲ ಅಡಿ ಹೇಳಿದರು.

ಬೆಂಗಳೂರಿನ ಪರಿಸರ ನಿರ್ವಹಣೆ ನೀತಿ ಸಂಶೋಧನಾ ಸಂಸ್ಥೆ, ವನಲೋಕಾ ಫೌಂಡೇಷನ್, ಐಕ್ಯ ಎನ್.ಜಿ.ಒ, ಗೋಕರ್ಣ ಗ್ರಾಮ ಪಂಚಾಯಿತಿ, ಗೋಕರ್ಣದ ಪುಣ್ಯಾಶ್ರಮ, ಉತ್ತರ ಕನ್ನಡ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಸಹಯೋಗದಲ್ಲಿ  ಭಾನುವಾರ ನಡೆದ ಗೋಕರ್ಣದ ಮುಖ್ಯ ಸಮುದ್ರ ತೀರದ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮನಾ ಗೌಡ, ಪೊಲೀಸ್ ನಿರೀಕ್ಷಕ ಶ್ರೀಧರ ಎಸ್.ಆರ್, ಬೆಂಗಳೂರಿನ ಎಂಪ್ರಿ ಸಂಸ್ಥೆಯ ಪ್ರತಿನಿಧಿಗಳು, ಐಕ್ಯ ಎನ್. ಜಿ.ಒ ಅಧ್ಯಕ್ಷ ಎಂ.ಜಿ ನಾಯ್ಕ, ಉತ್ತರ ಕನ್ನಡ ಸ್ಕೌಟ್ಸ್ ಮತ್ತು ಗೈಡ್ಸ್ ಸಂಚಾಲಕಿ ಭಾರತಿ ಡಯಾಸ್, ಪಹರೆ ವೇದಿಕೆಯ ಗೋಕರ್ಣ ಘಟಕದ ಮುಖ್ಯಸ್ಥ ಮಹೇಶ್ ಶೆಟ್ಟಿ, ಗ್ರಾಮ ಪಂಚಾಯಿತಿ ಸದಸ್ಯರಾದ ಮಂಜುನಾಥ ಶೆಟ್ಟಿ, ಪಾರ್ವತಿ ಶೆಟ್ಟಿ, ತೇಜಸ್ವಿ ನಾಯ್ಕ, ಕುಮಾರ ಮಾರ್ಕಾಂಡೆ, ಭದ್ರಕಾಳಿ ಪಿ.ಯು.ಕಾಲೇಜು ವಿದ್ಯಾರ್ಥಿಗಳು, ಸ್ಕೌಟ್ಸ್  ಆ್ಯಂಡ್‌ ಗೈಡ್ಸ್ ಪದಾಧಿಕಾರಿಗಳು ಕುಮಟಾದ ಡಾ.ಎ.ವಿ.ಬಾಳಿಗಾ ಕಾಲೇಜು ಎನ್.ಎಸ್.ಎಸ್ ಘಟಕ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ADVERTISEMENT

ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ವೆಂಕಟರಮಣ ಪಟಗಾರ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಮಂಜುನಾಥ ಹಾಗೂ ಸಿಬ್ಬಂದಿಗಳು ಸಹಕರಿಸಿದರು.

ಕಾರ್ಯಕ್ರಮಕ್ಕೂ ಮುನ್ನ ರಥಬೀದಿಯಿಂದ ಮುಖ್ಯ ಕಡಲತೀರದವರೆಗೆ ಜಾಗೃತಿ ಜಾಥಾ ನಡೆಯಿತು. ಒಂದು ಕಿ.ಮೀ ಗೂ ಹೆಚ್ಚು ದೂರದ ಕಡಲತೀರದಲ್ಲಿ ಬಿದ್ದ ಕಸ ಕಡ್ಡಿವನ್ನು ಸಂಗ್ರಹಿಸಿ ಗ್ರಾಮ ಪಂಚಾಯಿತಿಗೆ ವಿಲೇವಾರಿ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.