ADVERTISEMENT

ಯುವಪೀಳಿಗೆಗೆ ಬರವಣಿಗೆ ದಾರಿದೀಪವಾಗಲಿ: ಸಾಹಿತಿ ಎಂ.ಎ.ಖತೀಬ

ಕಾರವಾರ ತಾಲ್ಲೂಕು ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿ ಖತೀಬ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2023, 16:28 IST
Last Updated 23 ಫೆಬ್ರುವರಿ 2023, 16:28 IST
ಕಾರವಾರ ತಾಲ್ಲೂಕು 7ನೇ ಸಾಹಿತ್ಯ ಸಮ್ಮೇಳನಕ್ಕೆ ಸಾಹಿತಿ ಆರ್.ಜಿ.ಗುಂದಿ ಚಾಲನೆ ನೀಡಿದರು. ಸಮ್ಮೇಳನದ ಸರ್ವಾಧ್ಯಕ್ಷ ಎಂ.ಎ.ಖತೀಬ, ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ, ಕ.ಸಾ.ಪ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎನ್.ವಾಸರೆ ಇದ್ದಾರೆ
ಕಾರವಾರ ತಾಲ್ಲೂಕು 7ನೇ ಸಾಹಿತ್ಯ ಸಮ್ಮೇಳನಕ್ಕೆ ಸಾಹಿತಿ ಆರ್.ಜಿ.ಗುಂದಿ ಚಾಲನೆ ನೀಡಿದರು. ಸಮ್ಮೇಳನದ ಸರ್ವಾಧ್ಯಕ್ಷ ಎಂ.ಎ.ಖತೀಬ, ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ, ಕ.ಸಾ.ಪ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎನ್.ವಾಸರೆ ಇದ್ದಾರೆ   

ಕಾರವಾರ: ‘ದೇಶ, ಸಮಾಜದ ಒಳಿತಿಗೆ ಹೋರಾಡಿದವರ ಬದುಕಿನ ಚಿತ್ರಣ ಸಾಹಿತ್ಯಗಳ ಮೂಲಕ ದಾಖಲೀಕರಣ ಆಗಬೇಕಿದೆ. ಯುವ ಪೀಳಿಗೆಗೆ ಪೂರ್ವಿಕರ ಆದರ್ಶ ಗುಣಗಳನ್ನು ತಿಳಿಸಿ, ಬದುಕಿಗೆ ದಾರಿದೀಪವಾಗುವ ಬರವಣಿಗೆ ಈಗಿನ ಅಗತ್ಯ’ ಎಂದು ಸಾಹಿತಿ ಎಂ.ಎ.ಖತೀಬ ಹೇಳಿದರು.

ಇಲ್ಲಿನ ಜಿಲ್ಲಾ ರಂಗಮಂದಿರದ ಪ್ರಭಾಕರ ರಾಣೆ ವೇದಿಕೆಯಲ್ಲಿ ಗುರುವಾರ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕ ಆಯೋಜಿಸಿದ್ದ 7ನೇ ತಾಲ್ಲೂಕು ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು.

‘ಸಾಹಿತ್ಯ ಎಂಬುದು ಜನಜೀವನದ ಪ್ರತೀಕ. ಟ್ಯಾಗೋರ್, ಗಾಂಧೀಜಿ ಅವರಂತಹ ಮಹನೀಯರು ಭೇಟಿ ಕೊಟ್ಟ ಪವಿತ್ರ ನೆಲ ಇತಿಹಾಸದ ಸಿರಿವಂತಿಕೆ ಕಾಪಿಟ್ಟುಕೊಳ್ಳಬೇಕು’ ಎಂದರು.

ADVERTISEMENT

ಕ.ಸಾ.ಪ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎನ್‌.ವಾಸರೆ ಮಾತನಾಡಿ, ‘ಗಡಿಭಾಗದ ಗ್ರಾಮಗಳಲ್ಲಿ ಸೌಕರ್ಯ ಒದಗಿಸುವ ಕೆಲಸ ಆಗಬೇಕು. ಕನ್ನಡ ಶಾಲೆಗಳು ಕಳೆಗುಂದದಂತೆ‌ ನೋಡಿಕೊಳ್ಳಬೇಕು’ ಎಂದರು.

ಕ.ಸಾ.ಪ ತಾಲ್ಲೂಕು ಘಟಕದ ಅಧ್ಯಕ್ಷ ರಾಮಾ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ, ಉಪಾಧ್ಯಕ್ಷ ಪ್ರಕಾಶ ನಾಯ್ಕ, ಸಮ್ಮೇಳನದ ಗೌರವಾಧ್ಯಕ್ಷ ಜಿ.ಡಿ.ಮನೋಜೆ, ಪತ್ರಕರ್ತ ಗಂಗಾಧರ ಹಿರೇಗುತ್ತಿ, ಇಬ್ರಾಹಿಂ ಕಲ್ಲೂರು, ಪಿ.ಆರ್.ನಾಯ್ಕ, ಮಹೇಶ ಗೋಳಿಕಟ್ಟೆ, ಎಸ್.ಡಿ.ನಾಯ್ಕ, ಮುರ್ತುಜಾ ಹುಸೇನ್ ಇದ್ದರು.

ಸರ್ವಾಧ್ಯಕ್ಷರನ್ನು ಮಿತ್ರ ಸಮಾಜ ಮೈದಾನದಿಂದ ಮೆರವಣಿಗೆಯಲ್ಲಿ ಕರೆತರಲಾಯಿತು. ಎ.ಎನ್.ರಮೇಶ, ನಾಗರಾಜ ಬುಕಾರಿ, ಡಿ.ಎಸ್.ದೊಡ್ಮನಿ ಅವರ ಕೃತಿಗಳನ್ನು ಬಿಡುಗಡೆ ಗೊಳಿಸಲಾಯಿತು.

ಸಮಾಜದಲ್ಲಿ ಪರಿವರ್ತನೆ ತರುವ ಶಕ್ತಿ ಸಾಹಿತ್ಯಕ್ಕಿದೆ. ಬರಹಗಾರರು ಸೃಜನಶೀಲ ಗುಣ ಬೆಳೆಸಿಕೊಳ್ಳಬೇಕು.

-ಪ್ರಮೋದ ರಾಯಚೂರು, ಕೈಗಾ ಅಣುಸ್ಥಾವರದ ಸ್ಥಾನಿಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.