ADVERTISEMENT

ಮುಂಡಗೋಡ‌ | ನೋಡುಗರ ಕಣ್ಮನ ಸೆಳೆದ ಗಜಕುಣಿತ

ಸಾಂಪ್ರದಾಯಿಕ ‘ಶಿಲ್ಲಂಗಾನ್’ ಆಚರಿಸಿದ ಗೌಳಿಗ ಸಮುದಾಯದವರು

ಶಾಂತೇಶ ಬೆನಕನಕೊಪ್ಪ
Published 8 ಅಕ್ಟೋಬರ್ 2019, 19:45 IST
Last Updated 8 ಅಕ್ಟೋಬರ್ 2019, 19:45 IST
ಮುಂಡಗೋಡದಲ್ಲಿ ಶಿಲ್ಲಂಗಾನ್ ಹಬ್ಬದಂದು ಶ್ವೇತವಸ್ತ್ರಧಾರಿಗಳಾಗಿ ‘ಗಜಕುಣಿತ’ದಲ್ಲಿ ಪಾಲ್ಗೊಂಡ ಗೌಳಿಗ ಜನಾಂಗದವರು 
ಮುಂಡಗೋಡದಲ್ಲಿ ಶಿಲ್ಲಂಗಾನ್ ಹಬ್ಬದಂದು ಶ್ವೇತವಸ್ತ್ರಧಾರಿಗಳಾಗಿ ‘ಗಜಕುಣಿತ’ದಲ್ಲಿ ಪಾಲ್ಗೊಂಡ ಗೌಳಿಗ ಜನಾಂಗದವರು    

ಮುಂಡಗೋಡ: ತಲೆಗೆ ಪಾಗೋಟ್ ಸುತ್ತಿಕೊಂಡು, ಕೈಯಲ್ಲಿ ಪೂಜಿಸುವ ಕೋಲು ಹಿಡಿದು, ‘ಚಾಂಗಭಲಾ.. ಚಾಂಗಭಲಾ..’ ಎನ್ನುತ್ತ ಹೆಜ್ಜೆ ಹಾಕುತ್ತಿದ್ದರು. ಶ್ವೇತವಸ್ತ್ರಧಾರಿಗಳಾಗಿ, ನೆತ್ತಿ ಸುಡುವ ಬಿಸಿಲು ಲೆಕ್ಕಿಸದೇ ಡೋಲು ನಾದಕ್ಕೆ ಪ್ರದಕ್ಷಿಣಾಕಾರದಲ್ಲಿ ಕುಣಿದರು. ವಿವಿಧ ತಂಡಗಳು ‘ಗಜಕುಣಿತ’ ಮಾಡುತ್ತಿರುವುದನ್ನು ನೂರಾರು ಗೌಳಿಗರು ಕಣ್ತುಂಬಿಕೊಂಡರು.

ತಾಲ್ಲೂಕಿನ ಬಡ್ಡಿಗೇರಿ, ಮೈನಳ್ಳಿ, ಕಳಕಿಕಾರೆ ಸೇರಿದಂತೆ ತಾಲ್ಲೂಕಿನ 25ಕ್ಕೂ ಹೆಚ್ಚು ಗ್ರಾಮಗಳಲ್ಲಿ ನೆಲೆಸಿರುವ ಗೌಳಿಗ ಜನಾಂಗದವರು, ದಸರಾ ಹಬ್ಬವನ್ನು ಸಾಂಪ್ರದಾಯಿಕವಾಗಿ ಮಂಗಳವಾರ ಆಚರಿಸಿದರು.

ಗೌಳಿಗ ಜನಾಂಗದವರು ವಿಜಯದಶಮಿಯಂದು ನಿಗದಿಪಡಿಸಿದ ‘ಗೌಳಿವಾಡಾ’ದಲ್ಲಿ ರಾತ್ರಿಯೇ ಬಂದುಸೇರುತ್ತಾರೆ. ಅಲ್ಲಿ ‘ಶಿಲ್ಲಂಗಾನ್’ ಹಬ್ಬವನ್ನು ಆಚರಿಸುವುದು ವಿಶೇಷ.

ADVERTISEMENT

ಆಚರಣೆಯ ಪದ್ಧತಿ:ಹಬ್ಬದ ಸಂತೆಯಲ್ಲಿ ಪರಸ್ಪರ ಭೇಟಿಯಾಗುವ ವಿವಿಧ ವಾಡೆಗಳ ಗೌಳಿಗರು, ಶಿಲ್ಲಂಗಾನ್ ನಡೆಯುವ ಬಗ್ಗೆ ಬೇರೆ ಊರಿನ ಗೌಳಿಗರಿಗೆ ತಿಳಿಸುತ್ತಾರೆ. ಅಲ್ಲಿಯೇ ತಾಂಬೂಲ (ಎಲೆ, ಅಡಿಕೆಬೆಟ್ಟ) ನೀಡಿ ಹಬ್ಬಕ್ಕೆ ಬರಲು ಆಮಂತ್ರಿಸುತ್ತಾರೆ. ತಾಂಬೂಲ ಸ್ವೀಕರಿಸಿದ ವ್ಯಕ್ತಿ ತನ್ನ ವಾಡೆಯಲ್ಲಿ ವಿಷಯ ತಿಳಿಸಿದಾಗ, ಆ ಊರಿನ ಗ್ರಾಮಸ್ಥರು, ‘ಶಿಲ್ಲಂಗಾನ್’ ನಡೆಯುವ ಊರಿಗೆ ಪ್ರಯಾಣ ಬೆಳೆಸುತ್ತಾರೆ ಎನ್ನುತ್ತಾರೆ ರಾಮು ಥೊರವತ್.

‘ಮಜ್ಜಿಗೆ ತುಂಬಿರುವ ಮಡಿಕೆಯಲ್ಲಿ ಕಾಯಿ ಇಟ್ಟುಕೊಂಡು ಶಿಲ್ಲಂಗಾನ್ ನಡೆಯುವ ಗ್ರಾಮಕ್ಕೆ ಹೋಗುತ್ತಾರೆ. ಊರು ತಲುಪುತ್ತಿದ್ದಂತೆ ವಾದ್ಯಗಳ ಮೂಲಕ ಅವರನ್ನು ಸ್ವಾಗತಿಸಿ, ಮಜ್ಜಿಗೆ ತುಂಬಿದ ಮಡಿಕೆಗಳನ್ನು ದೇವರ ಮುಂದೆ ಇಟ್ಟು ಪೂಜಿಸುತ್ತಾರೆ. ನಂತರ ಸಾಂಪ್ರದಾಯಿಕ ಗಜಕುಣಿತದ ವೇಷ ಧರಿಸಿ ಪುರುಷರು ಕುಣಿಯುತ್ತಾರೆ. ಬೆಳಗಿನ ಜಾವದವರೆಗೂ ಗಜಕುಣಿತ ನಡೆಯುತ್ತದೆ’ ಎಂದು ಹಿರಿಯ ಮುಖಂಡ ಬಾಬು ಕೊಕರೆ ಹೇಳಿದರು.

‘ಕೆಲವರಿಗೆ ಮೈಮೇಲೆ ದೇವರು ಬರುತ್ತದೆ. ದೇವರ ಸಾನಿಧ್ಯದಲ್ಲಿ ಹೇಳಿಕೆ ನೀಡುತ್ತಾರೆ. ಬೆಸ ಮನೆತನದವರು (ಬೇರೆ ಪಂಗಡದವರು) ಪರಸ್ಪರ ಮೈಮೇಲೆ ಮಜ್ಜಿಗೆ ಸುರಿದುಕೊಂಡು ಸ್ನಾನ ಮಾಡುತ್ತಾರೆ. ಎಲ್ಲರೂ ಒಂದೇ ಎಂಬ ಭಾವನೆ ಈ ಆಚರಣೆಯ ಹಿಂದಿದೆ. ಸಂಜೆ ಗ್ರಾಮದ ಹೊರವಲಯದ ಬನ್ನಿ ಗಿಡದಲ್ಲಿ ‘ಸೋನಾ’ ಕತ್ತರಿಸಿ ತಂದು ಮನೆಯಲ್ಲಿ ಇಟ್ಟು ಪೂಜಿಸುತ್ತಾರೆ’ ಎಂದು ದನಗರ ಗೌಳಿ ಯುವ ಒಕ್ಕೂಟದ ಅಧ್ಯಕ್ಷ ಸಿದ್ದು ತೊರವತ್ ಹೇಳಿದರು.

ಚಪ್ಪಲಿ ಧರಿಸುವುದಿಲ್ಲ:ದಸರಾ ಹಬ್ಬದ ಒಂಬತ್ತು ದಿನಗಳಂದು ಮನೆಯ ದೇವರಿಗೆ ಕುಟುಂಬದ ಒಂದಿಬ್ಬರು ಸದಸ್ಯರು ಹರಕೆ ಹೊರುತ್ತಾರೆ. ಈ ದಿನಗಳಲ್ಲಿ ದೇವರ ಹರಕೆ ಹೊತ್ತವರು ಮನೆಯಲ್ಲಿ ಮಾಡಿದ ಅಥವಾ ಬೇರೆ ಮನೆಯ ಊಟ ಮಾಡುವುದಿಲ್ಲ. ಕೇವಲ ಹಾಲು, ಮಜ್ಜಿಗೆ ಸೇವಿಸುತ್ತಾರೆ. ಕಾಲಿಗೆ ಚಪ್ಪಲಿ ಧರಿಸದೇ ಸಂಚರಿಸುತ್ತಾರೆ. ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ವಿಶೇಷ ಪೂಜೆ ಮಾಡುತ್ತಾರೆ ಎಂದು ಗಂಗು ವರಕ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.