
ಅಂಕೋಲಾ: ಕಾಂಗ್ರೆಸ್ ಸರ್ಕಾರ ಕಳೆದೆರಡು ವರ್ಷಗಳ ಅಧಿಕಾರಾವಧಿಯಲ್ಲಿ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡದಿರುವುದು ಶೂನ್ಯ ಸಾಧನೆಗೆ ಸಾಕ್ಷಿ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರು ಆರೋಪಿಸಿದರು.
ಪಟ್ಟಣದ ಕ್ಷತ್ರೀಯ ಕೋಮಾರಪಂಥ ಸಭಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಮತದಾರರಿಗೆ ನೀಡಿದ ಭರವಸೆ ಸಂಪೂರ್ಣ ಹುಸಿಯಾಗಿಸಿದ್ದು ನುಡಿದಂತೆ ನಡೆಯದ ಸರ್ಕಾರ ಎನ್ನುವುದನ್ನು ಇನ್ನೊಮ್ಮೆ ಸಾಬೀತು ಪಡಿಸಿದೆ. ಮೂಡಾ, ವಾಲ್ಮೀಕಿ ಸೇರಿದಂತೆ ಹತ್ತು ಹಲವು ಹಗರಣಗಳಲ್ಲಿ ಕಾಲಕಳೆಯುತ್ತಿರುವ ಕಾಂಗ್ರೆಸ್ ಸರ್ಕಾರ ರಾಜ್ಯದ 43 ಇಲಾಖೆಗಳಲ್ಲಿ ಖಾಲಿ ಇರುವ 3,86,301 ಹುದ್ದೆಗಳಲ್ಲಿ ಒಂದೇ ಒಂದು ಹುದ್ದೆಯನ್ನು ಭರ್ತಿ ಮಾಡದೇ ನಿರುದ್ಯೋಗ ಸಮಸ್ಯೆ ಇನ್ನಷ್ಟು ಹೆಚ್ಚಿಸುವಂತೆ ಮಾಡಿದೆ ಎಂದರು.
ಅಭಿವೃದ್ಧಿಗೆ ಪೂರಕವಾಗಿರಬೇಕಿರುವ ಶಿಕ್ಷಣ ಇಲಾಖೆ, ಪಶು ಸಂಗೋಪನೆ, ಆರೋಗ್ಯ ಮತ್ತು ವೈದ್ಯಕೀಯ ವಿಜ್ಞಾನ, ಒಳಾಡಳಿತ, ಕಂದಾಯ, ಗ್ರಾಮೀಣಾಭಿವೃದ್ಧಿ ಇಲಾಖೆಗಳಲ್ಲಿ ಸೇವೆ ಸಲ್ಲಿಸಲು ಸಿಬ್ಬಂದಿಗಳಿಲ್ಲದೇ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಹೋಗುವಂತಾಗಿದೆ. ಇನ್ನಾದರೂ ಸರ್ಕಾರ ಸೂಕ್ತ ಕ್ರಮ ಕೈಗೊಂಡು ಸರ್ಕಾರಿ ಹುದ್ದೆಗಳನ್ನು ತುಂಬುವುದರೊಂದಿಗೆ ವಿದ್ಯಾವಂತರಿಗೆ ಉದ್ಯೋಗದ ಅವಕಾಶಗಳನ್ನು ಕಲ್ಪಿಸಿಕೊಡುವಂತಾಗಲಿ ಎಂದು ಆಗ್ರಹಿಸಿದರು.
ಪ್ರಮುಖರಾದ ಜಗದೀಶ ನಾಯಕ ಮೊಗಟಾ, ಭಾಸ್ಕರ ನಾರ್ವೇಕರ, ರಾಜೇಂದ್ರ ನಾಯ್ಕ, ಡಾ.ವಿ.ಎನ್. ನಾಯಕ, ಸಂಜಯ ನಾಯ್ಕ ಭಾವಿಕೇರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.