ಶಿರಸಿ: ಸರ್ಕಾರಿ ಶಾಲಾ ವ್ಯವಸ್ಥೆಯು ಎಲ್ಲ ಸೌಕರ್ಯಗಳ ಜತೆ ಶೈಕ್ಷಣಿಕವಾಗಿಯೂ ಗುಣಮಟ್ಟದಿಂದ ಕೂಡಿದ್ದು, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿದೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ನಗರದ ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಶಾಲಾ ಪ್ರಾರಂಭೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪಠ್ಯ, ಪುಸ್ತಕ ವಿತರಿಸಿ ಅವರು ಮಾತನಾಡಿದರು. ಸರ್ಕಾರಿ ಶೈಕ್ಷಣಿಕ ವ್ಯವಸ್ಥೆಯಲ್ಲಿದ್ದುಕೊಂಡು ರಾಜ್ಯಮಟ್ಟದಲ್ಲಿ ಹೆಚ್ಚಿನ ಮಕ್ಕಳು ಸಾಧನೆ ತೋರಿದ್ದಾರೆಂದರೆ ಅದು ಸರ್ಕಾರಿ ಶಾಲೆಯ ಗುಣಮಟ್ಟದ ಸಂಕೇತವಾಗಿದೆ' ಎಂದು ಹೇಳಿದರು.
'ಸರ್ಕಾರಿ ಶಾಲೆಗಳಿಗೆ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಮೂಲಭೂತ ಸೌಕರ್ಯ ಒದಗಿದಲು ಸರ್ಕಾರ ಬದ್ಧವಾಗಿದೆ' ಎಂದ ಅವರು, 'ಇಂದಿನ ಮಕ್ಕಳ ಶೈಕ್ಷಣಿಕ ಜ್ಞಾನ ಮಟ್ಟ ಹೆಚ್ಚಿದೆ. ಹೀಗಾಗಿ ಶಿಕ್ಷಕರು ಮಕ್ಕಳ ಜ್ಞಾನವನ್ನು ಮತ್ತಷ್ಟು ಹೆಚ್ಚಿಸಲು ಮುಂದಾಗಬೇಕು. ಶಿಕ್ಷಣದ ಜತೆ ಸಂಸ್ಕಾರವನ್ನೂ ನೀಡಬೇಕು' ಎಂದು ಹೇಳಿದರು.
ಶಿರಸಿ ಶೈಕ್ಷಣಿಕ ಜಿಲ್ಲೆ ಡಿಡಿಪಿಐ ಪಿ.ಬಸವರಾಜ ಮಾತನಾಡಿ, ಶೈಕ್ಷಣಿಕ ಜಿಲ್ಲೆಯಲ್ಲಿ ಯಾವ ಶಾಲೆಯ ಕಟ್ಟಡವೂ ವಿದ್ಯಾರ್ಥಿಗಳಿಗೆ ಅಸುರಕ್ಷಿತ ಅಲ್ಲ. ಹೀಗಾಗಿ ಪಾಲಕರು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಲು ಹಿಂಜರಿಕೆಪಡಬಾರದು ಎಂದರು. ಈಗಾಗಲೇ ಶೇ 75 ರಷ್ಟು ಪಠ್ಯ, ಪುಸ್ತಕ ವಿತರಿಸಲಾಗಿದೆ. ಸಮವಸ್ತ್ರವನ್ನು ಕೂಡ ಶೀಘ್ರದಲ್ಲೇ ನೀಡಲಾಗುವುದು. ಶೈಕ್ಷಣಿಕ ಜಿಲ್ಲೆಯ 721 ಪ್ರಾಥಮಿಕ ಶಾಲೆಗಳಿಗೆ ಅತಿಥಿ ಶಿಕ್ಷಕರ ಮಂಜೂರಾತಿ ಆಗಿದೆ. 167 ಪ್ರೌಢಶಾಲೆಗಳಿಗೂ ಅತಿಥಿ ಶಿಕ್ಷಕರ ನೇಮಕಕ್ಕೆ ಕ್ರಮವಹಿಸಲಾಗಿದೆ ಎಂದರು.
ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ಬಿಇಒ ನಾಗರಾಜ ನಾಯ್ಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.