ಕಾರವಾರ: ಪಾಲಕರ ಇಂಗ್ಲಿಷ್ ಮಾಧ್ಯಮದ ಮೋಹ, ನಗರಕ್ಕೆ ವಲಸೆ ಹೆಚ್ಚಿದ ಪರಿಣಾಮ ಜಿಲ್ಲೆಯ 21 ಸರ್ಕಾರಿ ಶಾಲೆಗಳಲ್ಲಿ ಈ ಬಾರಿ ವಿದ್ಯಾರ್ಥಿಗಳ ದಾಖಲಾತಿ ನಡೆದಿಲ್ಲ. ಶೂನ್ಯ ದಾಖಲಾತಿ ಹೊಂದಿದ ಶಾಲೆಗಳು ಈ ಬಾರಿ ತಾತ್ಕಾಲಿಕವಾಗಿ ಬಾಗಿಲು ಮುಚ್ಚಲಿವೆ.
ಶೈಕ್ಷಣಿಕ ವರ್ಷ ಆರಂಭಗೊಂಡು ಮೂರು ತಿಂಗಳು ಕಳೆದರೂ ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲೆಯ 10, ಶಿರಸಿ ಶೈಕ್ಷಣಿಕ ಜಿಲ್ಲೆಯ 11 ಶಾಲೆಗಳಲ್ಲಿ ಒಬ್ಬರೂ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿಲ್ಲ. ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಈ ಶಾಲೆಗಳು ಸ್ಥಗಿತಗೊಳ್ಳಲಿವೆ. ಇಲ್ಲಿನ ಶಿಕ್ಷಕರನ್ನು ಅನ್ಯ ಶಾಲೆಗಳಿಗೆ ನಿಯೋಜಿಸಲಾಗಿದೆ.
ಕಾರವಾರ ತಾಲ್ಲೂಕಿನ ಬೋರಿಬಾಗ್, ತೊರ್ಲೆಬಾಗ್, ಮಂದ್ರಾಳಿ, ಅಂಕೋಲಾ ತಾಲ್ಲೂಕಿನ ಮೋತಿಗುಡ್ಡ, ವಂದಿಗೆ, ಭಟ್ಕಳ ತಾಲ್ಲೂಕಿನ ಬಾಡಗೇರಿ, ಹೊನ್ನಾವರ ತಾಲ್ಲೂಕಿನ ಇಡಗುಂಜಿ, ಕೊಡ್ಲಾ, ಕುಮಟಾ ತಾಲ್ಲೂಕಿನ ಎತ್ತಿನಬೈಲ್, ಮೂರ್ಸೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು ವಿದ್ಯಾರ್ಥಿಗಳನ್ನು ಹೊಂದಿಲ್ಲ.
ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಜೊಯಿಡಾದ ಕುರಾವಳಿ, ವರಾಂಡಾ, ಶಿರಸಿ ತಾಲ್ಲೂಕಿನ ತೆಪ್ಪಾರ, ಜಾಗನಳ್ಳಿ, ನರೂರಿನ ಶಾಂತವೇರಿ ಗೋಪಾಲಗೌಡ ಮಾದರಿ ಶಾಲೆ, ಚಿನ್ಮಯ ಪ್ರೌಢಶಾಲೆ, ಜೆಎಂಜೆ ಕನ್ನಡ ಮಾಧ್ಯಮ ಶಾಲೆ, ಸಿದ್ದಾಪುರದ ಮಂಡಗಳಲೆ, ಚಪ್ಪರಮನೆ, ಲಿಟಲ್ ಫ್ಲವರ್ ಶಾಲೆಗಳು ತಾತ್ಕಾಲಿಕವಾಗಿ ಸ್ಥಗಿತಗೊಳ್ಳುತ್ತಿವೆ.
‘ಗ್ರಾಮೀಣ ಭಾಗದ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕುಸಿಯತೊಡಗಿದೆ. ಹಳ್ಳಿಗಳಲ್ಲಿ ಕುಟುಂಬಗಳ ಸಂಖ್ಯೆಯೂ ಇಳಿಕೆಯಾಗುತ್ತಿದ್ದು, ಉದ್ಯೋಗದ ನಿಮಿತ್ತ ಮಹಾನಗರಗಳ ವಲಸೆ ಹೆಚ್ಚಿದೆ. ವಿದ್ಯಾರ್ಥಿಗಳ ಸಂಖ್ಯೆ ಕುಸಿಯಲು ಇದು ಪ್ರಮುಖ ಕಾರಣ. ಇನ್ನೊಂದೆಡೆ ನಗರಗಳ ಖಾಸಗಿ ಶಾಲೆಗಳಿಂದ ಬಸ್‌ಗಳನ್ನು ಹಳ್ಳಿಗಳಿಗೂ ಕಳಿಸುವ ವ್ಯವಸ್ಥೆ ಈಚಿನ ವರ್ಷದಲ್ಲಿ ಹೆಚ್ಚಿದೆ. ಈ ಮೂಲಕ ಗ್ರಾಮಾಂತರ ಭಾಗದ ವಿದ್ಯಾರ್ಥಿಗಳನ್ನು ಖಾಸಗಿ ಶಾಲೆಗಳು ಸೆಳೆಯುತ್ತಿವೆ’ ಎಂದು ಶಿಕ್ಷಣಾಧಿಕಾರಿಯೊಬ್ಬರು ವಿವರಿಸಿದರು.
ಶೂನ್ಯ ದಾಖಲಾತಿ ಇರುವ ಶಾಲೆಗಳನ್ನು ಮುಚ್ಚಲ್ಪಟ್ಟ ಶಾಲೆ ಎಂದು ಪರಿಗಣಿಸಲಾಗದು. ಐದು ವರ್ಷಗಳವರೆಗೆ ದಾಖಲಾತಿ ಇಲ್ಲದಿದ್ದರೆ ಮಾತ್ರ ಶಾಶ್ವತವಾಗಿ ಸ್ಥಗಿತಗೊಳಿಸಲು ನಿರ್ಣಯಿಸಲಾಗುತ್ತದೆಡಿ.ಆರ್.ನಾಯ್ಕ ಶಿರಸಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ
ವಿದ್ಯಾರ್ಥಿಗಳೇ ಇಲ್ಲದ ಶಾಲೆಗಳನ್ನು ತಾತ್ಕಾಲಿಕವಾಗಿ ಮುಚ್ಚಿದರೂ ಅಲ್ಲಿ ನಿರಂತರ ನಿಗಾ ಇರಿಸಲಾಗುತ್ತದೆ. ಮುಂಬರುವ ಶೈಕ್ಷಣಿಕ ವರ್ಷಕ್ಕೆ ಪ್ರವೇಶಾತಿ ಪಡೆದರೆ ಪುನಃ ಶಾಲೆ ಆರಂಭಿಸಬೇಕಾಗುತ್ತದೆಲತಾ ನಾಯಕ ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ
ಹೊರರಾಜ್ಯದ ಶಾಲೆಗಳತ್ತ ವಿದ್ಯಾರ್ಥಿಗಳು
ರಾಜ್ಯದ ಗಡಿಭಾಗದಲ್ಲಿರುವ ಕಾರವಾರ ತಾಲ್ಲೂಕಿನಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ ಐದು ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಇರಲಿಲ್ಲ. ಈ ಬಾರಿಯೂ ಮೂರು ಶಾಲೆಗಳು ಇದೇ ಸ್ಥಿತಿಗೆ ತಲುಪಿವೆ. ಜೊಯಿಡಾ ತಾಲ್ಲೂಕಿನಲ್ಲಿಯೂ ಪ್ರತಿ ವರ್ಷ ಸರಾಸರಿ 2–3 ಶಾಲೆಗಳು ಬಾಗಿಲು ಮುಚ್ಚುತ್ತಿವೆ. ‘ಕಾರವಾರ ತಾಲ್ಲೂಕಿನ ಮಾಜಾಳಿ ಅಸ್ನೋಟಿ ಹಣಕೋಣ ಸದಾಶಿವಗಡ ಭಾಗದಿಂದ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿನಿತ್ಯ ಗೋವಾ ರಾಜ್ಯದ ಲೋಲೆಮ್ ಮಾಶೇಮ್‌ನಲ್ಲಿನ ಖಾಸಗಿ ಶಾಲೆಗಳಿಗೆ ಕಲಿಕೆಗೆ ತೆರಳುತ್ತಿದ್ದಾರೆ. ಶಾಲೆಯ ವಾಹನಗಳು ಬಂದು ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿವೆ. ಇದು ಇಲ್ಲಿನ ಸರ್ಕಾರಿ ಶಾಲೆಗಳ ಮೇಲೆ ಅಡ್ಡ ಪರಿಣಾಮ ಬೀರುತ್ತಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಕೃಷ್ಣಾ ಮೇಥಾ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.