ಶಿರಸಿ: ಐತಿಹಾಸಿಕ ಮಹತ್ವದ ತಾಣ ಬನವಾಸಿಯಲ್ಲಿ ರಾಜ್ಯ ಸರ್ಕಾರದ ಅಧಿಕೃತ ಉತ್ಸವಗಳಲ್ಲಿ ಒಂದಾದ ಕದಂಬೋತ್ಸವವು ಗೆಜೆಟ್ ಆದೇಶದ ಪ್ರಕಾರ ಕಡ್ಡಾಯವಾಗಿ ಡಿಸೆಂಬರ್ ಮೂರನೇ ವಾರದೊಳಗೆ ಆಯೋಜನೆ ಆಗಬೇಕು. ಆದರೆ ಈ ಬಾರಿ ಹೊಸ ವರ್ಷ ಸನಿಹವಾಗುತ್ತಿದ್ದರೂ ಇನ್ನೂ ಉತ್ಸವದ ಸಿದ್ಧತೆಯ ಸುಳಿವೇ ಇಲ್ಲದಂತಾಗಿದೆ.
ಬನವಾಸಿಯಲ್ಲಿ ನಡೆಯುವ ಕದಂಬೋತ್ಸವ ಸರ್ಕಾರಿ ಉತ್ಸವಗಳಲ್ಲಿ ಒಂದಾಗಿದೆ. ಬನವಾಸಿಯ ಐತಿಹಾಸಿಕ ಮಹತ್ವ ಅರಿತು 1995–96ನೇ ಸಾಲಿನಿಂದ ರಾಜ್ಯ ಸರ್ಕಾರವೇ ಕದಂಬೋತ್ಸವವನ್ನು ರಾಜ್ಯಮಟ್ಟದ ಉತ್ಸವವಾಗಿ ಆಚರಿಸುತ್ತ ಬಂದಿದೆ. ಆದಿಕವಿ ಪಂಪ ನೆಚ್ಚಿದ ನೆಲದಲ್ಲಿ ಕನ್ನಡದ ಜ್ಞಾನಪೀಠ ಎಂದೇ ಕರೆಯಲ್ಪಡುವ ಪ್ರತಿಷ್ಠಿತ ಪಂಪ ಪ್ರಶಸ್ತಿ ಪ್ರದಾನ ಕದಂಬೋತ್ಸವದ ಇನ್ನೊಂದು ಹೆಚ್ಚುಗಾರಿಕೆ. ಆದರೆ ಈ ಉತ್ಸವಾಚರಣೆಗೆ ಸರ್ಕಾರ ಪ್ರತಿ ವರ್ಷ ತಾತ್ಸಾರ ಭಾವ ತೋರುತ್ತಿದೆ ಎಂಬುದು ಬನವಾಸಿಗರ ದೂರಾಗಿದೆ.
ಸರ್ಕಾರದ ವೇಳಾಪಟ್ಟಿಯಂತೆ ಡಿಸೆಂಬರ್ ಮೂರನೇ ವಾರ ಕದಂಬೋತ್ಸವ ನಡೆಯಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಬರೆದ ಪತ್ರದಲ್ಲಿ ಡಿಸೆಂಬರ್ ತಿಂಗಳ ಮೂರನೇ ವಾರದ ಕೊನೆಯ ಶುಕ್ರವಾರ ಮತ್ತು ಶನಿವಾರ ಕದಂಬೋತ್ಸವ ಆಚರಣೆ ಮಾಡಬೇಕು ಎಂಬ ಆದೇಶವಿದೆ. ಆದರೆ ಆದೇಶದ ಅನುಷ್ಠಾನ ಮಾತ್ರ ಈವರೆಗೆ ಆಗಿಲ್ಲ. ಡಿಸೆಂಬರ್ ಕಳೆಯುತ್ತ ಬಂದರೂ ಕದಂಬೋತ್ಸವ ಆಚರಣೆ ಸಂಬಂಧ ಜಿಲ್ಲಾಡಳಿತ ಹಾಗೂ ಸರ್ಕಾರ ಮೌನಕ್ಕೆ ಜಾರಿರುವುದು ಬನವಾಸಿಗರ ಆಕ್ರೋಶಕ್ಕೆ ಕಾರಣವಾಗಿದೆ.
‘ಎರಡೂವರೆ ದಶಕಗಳ ಹಿಂದೆ ಆರಂಭವಾದ ಬನವಾಸಿ ಕದಂಬೋತ್ಸವ ಪ್ರಾರಂಭದ ವರ್ಷಗಳಲ್ಲಿ ಡಿಸೆಂಬರ್ ಅಂತ್ಯದೊಳಗೆ ನಡೆಯುತ್ತಿತ್ತು. ನಂತರದ ವರ್ಷಗಳಲ್ಲಿ ನಿಯಮಗಳ ಪಾಲನೆ ಆಗಿಲ್ಲ. ನಿಯಮ ಪ್ರಕಾರ ಡಿಸೆಂಬರ್ ತಿಂಗಳಾಂತ್ಯದೊಳಗೆ ಕದಂಬೋತ್ಸವ ಹಮ್ಮಿಕೊಳ್ಳುವುದಾಗಿದ್ದರೆ, ನವೆಂಬರ್ ತಿಂಗಳ ಮುಕ್ತಾಯದ ಹೊತ್ತಿಗಾಗಲೇ ಸಿದ್ಧತೆಗೆ ನಾಂದಿ ಆಗಬೇಕು ಎನ್ನುವುದು ಪ್ರತಿವರ್ಷವೂ ಸ್ಥಳೀಯರೂ ಸೇರಿದಂತೆ ಅನೇಕರು ವ್ಯಕ್ತಪಡಿಸುತ್ತ ಬಂದಿರುವ ಆಗ್ರಹವಾಗಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಬಹುಪಾಲು ವರ್ಷ ನಿಯಮ ಉಲ್ಲಂಘನೆಯಾಗಿ ಫೆಬ್ರವರಿ, ಮಾರ್ಚ್ ತಿಂಗಳಲ್ಲಿ, ಅದೂ ಸರ್ಕಾರ ಒಪ್ಪಿಗೆ ನೀಡಿದರೆ ಮಾತ್ರ ನಡೆಯುತ್ತಿದೆ. ಬರ, ಮತ್ತಿತರ ಕಾರಣಗಳಿಂದ ನಡೆಯದೇ ಇದ್ದ ವರ್ಷಗಳೂ ಇವೆ’ ಎಂದು ಸ್ಥಳೀಯರಾದ ಪ್ರದೀಪ ಗೌಡ ತಿಳಿಸಿದರು.
‘ಕದಂಬೋತ್ಸವ ಪ್ರಾರಂಭಕ್ಕೆ ಹಿನ್ನೆಲೆಯಲ್ಲಿ ರೂಪಿತವಾಗಿದ್ದ ಮೂಲಸ್ವರೂಪಕ್ಕೆ ಧಕ್ಕೆಯಾಗದ ರೀತಿ ಪ್ರತಿವರ್ಷವೂ ನಿಗದಿತ ಅವಧಿಯೊಳಗೆ ಬನವಾಸಿ ಐತಿಹ್ಯದ ಹಿರಿಮೆ, ಗರಿಮೆ ಬಿಂಬಿಸುವಂತೆ ಮತ್ತು ನಾಡಿನ ನಾನಾ ಹೆಸರಾಂತ ತಂಡಗಳ ಕಲಾ ಪ್ರಾವೀಣ್ಯತೆ ಪ್ರದರ್ಶನ ವೀಕ್ಷಣೆ ಆಸ್ವಾದನೆಗೆ ಅವಕಾಶ ಆಗುವಂತೆ ಉತ್ಸವ ಸಂಘಟನೆ ಆಗಬೇಕೆಂಬ ಆಗ್ರಹಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸ್ಪಂದಿಸಿ ಕಾರ್ಯಪ್ರವೃತ್ತ ಆಗಬೇಕಾಗಿದೆ’ ಎಂಬುದು ಸ್ಥಳೀಯರ ಒತ್ತಾಯ.
ಡಿಸೆಂಬರ್ ತಿಂಗಳು ಮುಗಿಯುತ್ತ ಬಂದರೂ ಬನವಾಸಿ ಕದಂಬೋತ್ಸವದ ಸುದ್ದಿಯೇ ಇಲ್ಲ. ಕೂಡಲೇ ಉತ್ಸವಾಚರಣೆ ಬಗ್ಗೆ ಪೂರ್ವ ಸಿದ್ಧತೆ ಪ್ರಾರಂಭಿಸಬೇಕುಸುರೇಶ ನಾಯ್ಕ ಬನವಾಸಿ
ಕದಂಬೋತ್ಸವ ಆಚರಣೆ ಸಂಬಂಧ ಸರ್ಕಾರದ ಗಮನ ಸೆಳೆಯುವ ಕಾರ್ಯ ಮಾಡಲಾಗುವುದು. ನಿಶ್ಚಿತವಾಗಿ ಕದಂಬೋತ್ಸವ ಆಚರಿಸಲಾಗುವುದುಶಿವರಾಮ ಹೆಬ್ಬಾರ್ ಶಾಸಕ ಯಲ್ಲಾಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.