ADVERTISEMENT

ಆರು ತಿಂಗಳು ಅವಧಿ ವಿಸ್ತರಿಸಿ: ಗ್ರಾಮ ಪಂಚಾಯ್ತಿ ಸದಸ್ಯರ ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ಮೇ 2020, 11:32 IST
Last Updated 14 ಮೇ 2020, 11:32 IST
ಶಿರಸಿಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯ ಉಪವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ ಅವರಿಗೆ ಮನವಿ ಸಲ್ಲಿಸಿದರು
ಶಿರಸಿಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯ ಉಪವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ ಅವರಿಗೆ ಮನವಿ ಸಲ್ಲಿಸಿದರು   

ಶಿರಸಿ: ‘ಗ್ರಾಮ ಪಂಚಾಯ್ತಿ ಸದಸ್ಯರ ಅವಧಿ ಮುಗಿದಿದೆ. ಆದರೆ, ಮುಂದಿನ ಚುನಾವಣೆಯವರೆಗೆ ಈ ಮೊದಲು ಆಯ್ಕೆಯಾದ ಸದಸ್ಯರೇ ಅಧಿಕಾರ ನಡೆಸಲು ಅನುಮತಿ ನೀಡಬೇಕು’ ಎಂದು ಶಿರಸಿ ತಾಲ್ಲೂಕು ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರ ಒಕ್ಕೂಟ ಆಗ್ರಹಿಸಿದೆ.

ಉಪವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ ಅವರಿಗೆ ಸಂಘಟನೆ ಪದಾಧಿಕಾರಿಗಳು ಗುರುವಾರ ಇಲ್ಲಿ ಮನವಿ ಸಲ್ಲಿಸಿದರು. ‘ಮೇ 19ಕ್ಕೆ ಗ್ರಾಮ ಪಂಚಾಯ್ತಿ ಸದಸ್ಯರ ಅವಧಿ ಮುಕ್ತಾಯಗೊಳ್ಳಲಿದೆ. ಈ ಅವಧಿ ಮುಕ್ತಾಯಗೊಳ್ಳುವ ಪೂರ್ವದಲ್ಲಿ ಚುನಾವಣೆ ನಡೆಸಿ ಹೊಸ ಸದಸ್ಯರ ಆಯ್ಕೆ ಮಾಡಲಾಗುತ್ತದೆ. ಆದರೆ, ಕೋವಿಡ್ 19 ಸಾಂಕ್ರಾಮಿಕ ಕಾಯಿಲೆ ಇರುವುದರಿಂದ ಚುನಾವಣೆ ನಡೆಸುವುದು ಅಸಾಧ್ಯ. ಗ್ರಾಮ ಪಂಚಾಯ್ತಿ ಕಾರ್ಯ ನಿರ್ವಹಿಸುವುದು ಅನಿವಾರ್ಯವಾಗಿದ್ದರಿಂದ, ಪ್ರಜಾಪ್ರಭುತ್ವ ರೀತಿಯಲ್ಲಿ ಆಯ್ಕೆಯಾದ ಈಗಿನ ಆಡಳಿತ ಸದಸ್ಯರನ್ನು ಇನ್ನೂ ಆರು ತಿಂಗಳು ಅಥವಾ ಚುನಾವಣೆ ನಡೆದು ಗ್ರಾಮ ಪಂಚಾಯ್ತಿಗೆ ಸದಸ್ಯರನ್ನು ಆಯ್ಕೆಗೊಳಿಸುವವರೆಗೆ ಯಾವುದು ಮೊದಲೋ ಅದನ್ನು ಜಾರಿಗೊಳಿಸಿ ಆದೇಶಿಸಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ.

2019ರಲ್ಲಿ ಮೊದಲು ಅತಿವೃಷ್ಟಿ, ನಂತರ ಉಪಚುನಾವಣೆ ನೀತಿಸಂಹಿತೆ, ಕೊರೊನಾ ಲಾಕ್‌ಡೌನ್ ಕಾರಣ ಅಭಿವೃದ್ಧಿ ಕಾಮಗಾರಿ ನಡೆಸಲು ಸಾಧ್ಯವಾಗಿಲ್ಲ. ಹೀಗಾಗಿ, ಹೆಚ್ಚುವರಿ ಕಾಲಾವಕಾಶ ನೀಡದಿದ್ದಲ್ಲಿ ಸಂಘದ ವತಿಯಿಂದ ಹೋರಾಟ ಮಾಡಲಾಗುವುದು ಎಂದು ಅಧ್ಯಕ್ಷ ರಾಘವೇಂದ್ರ ನಾಯ್ಕ ಎಚ್ಚರಿಸಿದರು. ಪದಾಧಿಕಾರಿಗಳಾದ ಗೀತಾ ಭೋವಿ, ಪ್ರಕಾಶ ಹೆಗಡೆ, ಖಾಸಿಂ ಸಾಬ್, ಸುಧೀರ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.