ADVERTISEMENT

ಜಿಎಸ್‌ಟಿ ಪರಿಷ್ಕರಣೆಯಿಂದ ಜನಜೀವನ ಸುಲಭ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 4:39 IST
Last Updated 5 ಸೆಪ್ಟೆಂಬರ್ 2025, 4:39 IST
ವಿಶ್ವೇಶ್ವರ ಹೆಗಡೆ ಕಾಗೇರಿ 
ವಿಶ್ವೇಶ್ವರ ಹೆಗಡೆ ಕಾಗೇರಿ    

ಶಿರಸಿ: ‘ಜಿಎಸ್‌ಟಿ ದರದಲ್ಲಿ ಪರಿಷ್ಕರಣೆಯು ಜನಜೀವನ ಸುಲಭಗೊಳಿಸುವ ಮತ್ತು ಆತ್ಮನಿರ್ಭರ ಭಾರತವನ್ನು ಬಲಪಡಿಸುವ ಒಂದು ಪರಿವರ್ತನಾತ್ಮಕ ಹೆಜ್ಜೆಯಾಗಿದೆ’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ವಿಶ್ಲೇಷಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಎಲ್ಲ ಸದಸ್ಯರ ಅಭಿಪ್ರಾಯ, ಸಲಹೆ ಪಡೆದು ಸರಳೀಕರಣ ತರಲಾಗಿದೆ. ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಿಎಸ್‌ಟಿ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ಜಾರಿಗೆ ತಂದಿದ್ದು, ರಾಷ್ಟ್ರಕ್ಕೆ ಐತಿಹಾಸಿಕ ದೀಪಾವಳಿ ಉಡುಗೊರೆ ನೀಡಿದೆ. ಸಚಿವ ಸಂಪುಟ ಸಭೆಯಲ್ಲಿ ಮುಂದಿನ ಪೀಳಿಗೆಯ ಜಿಎಸ್‌ಟಿ ಸುಧಾರಣೆ ಅನುಮೋದಿಸಿದ್ದು, ದೇಶವು ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವುದರ ಸಂಕೇತವಾಗಿದೆ' ಎಂದರು. 

‘ಜಿಎಸ್‌ಟಿ ಈಗ ಕೇವಲ 2 ಸ್ಲ್ಯಾಬ್ ಹೊಂದಿದ್ದು, ದೈನಂದಿನ ಅಗತ್ಯ ವಸ್ತುಗಳು ಆರೋಗ್ಯ ರಕ್ಷಣೆ, ಶಿಕ್ಷಣ, ಕೃಷಿ ಮತ್ತು ವಾಹನಗಳು ಸುಲಭವಾಗಿ ಕೈಗೆಟಕುವಂತಾಗುತ್ತವೆ. ಜತೆಗೆ ಉದ್ಯಮಗಳು ಹಾಗೂ ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳು ಭಾರಿ ಉತ್ತೇಜನವನ್ನೂ ಪಡೆಯುತ್ತವೆ’ ಎಂದು ಅವರು ಹೇಳಿದರು. 

ADVERTISEMENT

'ಇದೊಂದು ದೂರದೃಷ್ಟಿ ಪರಿಣಾಮದ ನಿರ್ಣಯವಾಗಿದೆ. ಸಮಾಜದ ಎಲ್ಲಾ ವರ್ಗಗಳಿಗೆ ಪ್ರಯೋಜನಕಾರಿಯಾದ ಬಡವರ ಪರ ಮತ್ತು ಬೆಳವಣಿಗೆ ಆಧಾರಿತ ನಿರ್ಧಾರ ಇದಾಗಿದೆ’ ಎಂದ ಅವರು, ‘ಕಾಂಗ್ರೆಸ್ ನ ಮತ ಬ್ಯಾಂಕ್ ರಾಜಕಾರಣದ ನೀತಿ ಅತಿರೇಕದ ಪರಿಣಾಮ ಸ್ವಾತಂತ್ರ್ಯಾನಂತರ ದೇಶ ಕಟ್ಟುವಲ್ಲಿ ವಿಫಲರಾಗಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ದೇಶ ಸಶಕ್ತವಾಗುತ್ತಿದೆ' ಎಂದರು. 

ಪಕ್ಷದ ಪದಾಧಿಕಾರಿಗಳಾದ ಸದಾನಂದ ಭಟ್, ಶರ್ಮಿಳಾ ಮಾದನಗೇರಿ, ರಮಾಕಾಂತ ಭಟ್, ಆನಂದ ಸಾಲೇರ, ಗುರುಪ್ರಸಾದ ಹೆಗಡೆ, ಆರ್.ಡಿ.ಹೆಗಡೆ, ಡಾನಿ ಡಿಸೋಜಾ, ಶ್ರೀರಾಮ ನಾಯ್ಕ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.