
ಕಾರವಾರ: ‘ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಂಡಿರುವ ಹಿನ್ನೆಲೆಯಲ್ಲಿ ಫೆ.11ರಂದು ಹೊನ್ನಾವರದ ಗುಣವಂತೆಯ ಒಕ್ಕಲಿಗರ ಭವನದಲ್ಲಿ ಜಿಲ್ಲಾಮಟ್ಟದ ಸಂಭ್ರಮಾಚರಣೆ ಕಾರ್ಯಕ್ರಮ ಮತ್ತು ಕಾರ್ಯಾಗಾರ ಆಯೋಜಿಸಲಾಗುವುದು’ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ ನಾಯ್ಕ ತಿಳಿಸಿದರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಮಟ್ಟದ ಕಾರ್ಯಾಗಾರ ಆಯೋಜನೆ ಕುರಿತ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
‘ಪ್ರತಿ ತಾಲ್ಲೂಕಿನಿಂದ ಫಲಾನುಭವಿಗಳು ಆಗಮಿಸಲು ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಬೇಕು. ಕಾರ್ಯಾಗಾರ ನಡೆಯುವ ಸ್ಥಳದಲ್ಲಿ ಕಡ್ಡಾಯವಾಗಿ ಎಲ್ಲಾ ಬಸ್‌ಗಳಿಗೆ ನಿಲುಗಡೆಗೆ ಅವಕಾಶ ಕಲ್ಪಿಸಬೇಕು’ ಎಂದು ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
‘ಶಕ್ತಿ ಯೋಜನೆಯಡಿ 17.73 ಕೋಟಿ ಬಾರಿ ಉಚಿತ ಪ್ರಯಾಣದ ಅವಕಾಶದ ಲಾಭ ಪಡೆದಿದ್ದಾರೆ. ಗೃಹಲಕ್ಷ್ಮಿ ಯೋಜನೆಯಡಿ 3.37 ಲಕ್ಷ ಫಲಾನುಭವಿಗಳ ಖಾತೆಗೆ ಈವರೆಗೆ ₹1,493 ಕೋಟಿ ಪಾವತಿಸಲಾಗಿದೆ. ಗೃಹಜ್ಯೋತಿ ಯೋಜನೆಯಡಿ ₹510.98 ಕೋಟಿ ಮೊತ್ತದ ವಿದ್ಯುತ್ ಶುಲ್ಕ ವಿನಾಯಿತಿಯನ್ನು ಜನರು ಪಡೆದುಕೊಂಡಿದ್ದಾರೆ. ಅನ್ನಭಾಗ್ಯ ಯೋಜನೆಯಡಿ ನೇರ ನಗದು ಪಾವತಿ ಮೂಲಕ ₹298.89 ಕೋಟಿ ಪಾವತಿಸಲಾಗಿದ್ದು, ಯುವನಿಧಿ ಯೋಜನೆಯಡಿ 8,303 ಮಂದಿ ಯುವ ಜನರು ₹17.80 ಕೋಟಿ ಲಾಭ ಪಡೆದಿದ್ದಾರೆ’ ಎಂದರು.
ಜಿಲ್ಲಾ ಪಂಚಾಯಿತಿ ಸಿಇಒ ಡಾ.ದಿಲೀಷ್ ಶಶಿ ಮಾತನಾಡಿ, ‘ಸಂಭ್ರಮಾಚರಣೆ ಮತ್ತು ಕಾರ್ಯಾಗಾರದ ಬಗ್ಗೆ ವ್ಯಾಪಕ ಪ್ರಚಾರ ನೀಡಬೇಕು’ ಎಂದರು.
ಪ್ರಾಧಿಕಾರದ ಉಪಾಧ್ಯಕ್ಷರಾದ ನಾಗರಾಜ ಮುರ್ಡೇಶ್ವರ, ಜನಾರ್ಧನ ದೇವಾಡಿಗ, ಪುರುಷೋತ್ತಮ ನಾಯ್ಕ, ಸದಸ್ಯರಾದ ರಾಜೇಂದ್ರ ರಾಣೆ, ದೇವಿದಾಸ ಶಾನಭಾಗ, ಅಣ್ಣಪ್ಪ ನಾಯ್ಕ, ಪಾಂಡುರಂಗ ಗೌಡ, ರಿಯಾಜ್ ಬಾಬುಸಾಬ್, ಸುಮಾ ಉಗ್ರಾಣಕರ, ಅನಿಲ್ ದಂಡಗಲ್, ರಾಜಶೇಖರ ಹಿರೇಮಠ, ರಾಜು ನಾಯ್ಕ, ಅಶೋಕ ಗೌಡ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.