ADVERTISEMENT

15ರಿಂದ 18 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ ನೀಡಲು ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2021, 15:18 IST
Last Updated 27 ಡಿಸೆಂಬರ್ 2021, 15:18 IST

ಕಾರವಾರ: ಕೇಂದ್ರ ಸರ್ಕಾರದ ಸೂಚನೆಯಂತೆ ಜ.3ರಿಂದ ಮಕ್ಕಳಿಗೆ ಕೋವಿಡ್ ಲಸಿಕೆ ಹಾಗೂ ಆದ್ಯತಾ ವಲಯದವರಿಗೆ ಬೂಸ್ಟರ್ ಡೋಸ್ ನೀಡಲು ಆರೋಗ್ಯ ಇಲಾಖೆ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಜಿಲ್ಲೆಯಲ್ಲಿ 15ರಿಂದ 18 ವರ್ಷದ 70 ಸಾವಿರದಿಂದ 75 ಸಾವಿರ ಮಕ್ಕಳಿದ್ದಾರೆ ಎಂದು ಅಂದಾಜು ಮಾಡಿದ್ದಾರೆ.

ಆದ್ಯತಾ ವಲಯದಲ್ಲಿರುವ 77,302 ಮಂದಿಗೂ ಲಸಿಕೆ ನೀಡಲಾಗುತ್ತದೆ. ಇವರಲ್ಲಿ 15,284 ಆರೋಗ್ಯ ಕಾರ್ಯಕರ್ತರು,
10,997ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೇಲಿನ, ವಿವಿಧ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ 51,021 ಮಂದಿ ಸೇರಿದ್ದಾರೆ ಎಂದು ಆರ್.ಸಿ.ಎಚ್.ಒ ಡಾ. ಕ್ಯಾಪ್ಟನ್ ರಮೇಶ ರಾವ್ ತಿಳಿಸಿದ್ದಾರೆ.

‘ಮಕ್ಕಳಿಗೆ ಲಸಿಕೆ ನೀಡುವ ಪ್ರಕ್ರಿಯೆಯ ಬಗ್ಗೆ ರಾಜ್ಯ ಸರ್ಕಾರದಿಂದ ಎರಡು ಮೂರು ದಿನಗಳಲ್ಲಿ ಮಾರ್ಗಸೂಚಿ ಬರುವ ಸಾಧ್ಯತೆಯಿದೆ. ಅಷ್ಟರಲ್ಲಿ ಮಕ್ಕಳ ನಿರ್ದಿಷ್ಟ ಸಂಖ್ಯೆ ಸೇರಿದಂತೆ ಪೂರಕ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತದೆ. ಬಳಿಕ ಆಯಾ ಶಾಲೆಗಳಲ್ಲೇ ಲಸಿಕಾ ಕೇಂದ್ರಗಳನ್ನು ತೆರೆದು ಲಸಿಕೆ ನೀಡಲಾಗುವುದು’ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

‘ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ, 60 ವರ್ಷಕ್ಕಿಂತ ಮೇಲಿನವರಿಗೆ ಜ.10ರಿಂದ ಬೂಸ್ಟರ್ ಡೋಸ್ ಲಸಿಕೆ ಕೊಡಲಾಗುವುದು. ಅದೇ ರೀತಿ, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಮುಂಚೂಣಿ ಸೇನಾನಿಗಳಿಗೂ ಲಸಿಕೆ ನೀಡಲಾಗುತ್ತದೆ’ ಎಂದು ತಿಳಿಸಿದ್ದಾರೆ.

‘ಜಿಲ್ಲೆಯಲ್ಲಿ 18 ವರ್ಷಕ್ಕಿಂತ ಮೇಲಿನ ಒಟ್ಟು 10.78 ಲಕ್ಷ ಜನರಿದ್ದಾರೆ. ಅವರಲ್ಲಿ ಈವರೆಗೆ 10.52 ಲಕ್ಷ ಜನರಿಗೆ ಮೊದಲ ಡೋಸ್ ಲಸಿಕೆ ಕೊಡಲಾಗಿದೆ. 8.62 ಲಕ್ಷ ಜನರಿಗೆ ಎರಡನೇ ಡೋಸ್ ನೀಡಲಾಗಿದೆ. 1.12 ಲಕ್ಷ ಜನ ಎರಡನೇ ಡೋಸ್ ಪಡೆಯಲು ಬಾಕಿಯಿದ್ದಾರೆ. ಅವರ ಮಾಹಿತಿಗಳನ್ನು ಆರೋಗ್ಯ ಇಲಾಖೆಯ ತಾಲ್ಲೂಕು ಅಧಿಕಾರಿಗಳಿಗೆ ನೀಡಲಾಗಿದೆ. ಅವರು ದೂರವಾಣಿ ಮೂಲಕ ಸಂಪರ್ಕಿಸಿ ಲಸಿಕೆ ಪಡೆಯುವಂತೆ ತಿಳಿಸುತ್ತಿದ್ದಾರೆ. ಇದರ ಜೊತೆಗೇ ಪ್ರತಿ ಬುಧವಾರ ಲಸಿಕೆ ಮಹಾಮೇಳ ಮಾಡಲಾಗುತ್ತಿದ್ದು, ಎರಡನೇ ಡೋಸ್ ಬಾಕಿ ಇರುವವರಿಗೂ ನೀಡಲಾಗುತ್ತಿದೆ’ ಎಂದು ಹೇಳಿದ್ದಾರೆ.

ಲ್ಯಾಬ್ ಧೂಮೀಕರಣ 31ಕ್ಕೆ:

ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿರುವ ಕೋವಿಡ್ 19 ಆರ್.ಟಿ.ಪಿ.ಸಿ.ಆರ್ ಪ್ರಯೋಗಾಲಯಗಳನ್ನು ಡಿ.31ರಂದು ಧೂಮೀಕರಣ ಮಾಡಲಾಗುತ್ತದೆ. ಹಾಗಾಗಿ ಅಂದು ಇಡೀ ದಿನ ಹಾಗೂ ಜ.1ರಂದು ಬೆಳಿಗ್ಗೆ 8ರವರೆಗೆ ಪ್ರಯೋಗಾಲಯದಲ್ಲಿ ಕಾರ್ಯ ಸ್ಥಗಿತವಾಗಿರುತ್ತದೆ. ಬೆಳಿಗ್ಗೆ 8.30ರಿಂದ ಎಂದಿನಂತೆ ಕಾರ್ಯ ನಿರ್ವಹಿಸಲಿದೆ ಎಂದು ಸಂಸ್ಥೆಯ ನಿರ್ದೇಶಕ ಡಾ.ಗಜಾನನ ನಾಯಕ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.