ADVERTISEMENT

ಜೊಯಿಡಾ: ಭಾರಿ ಮಳೆಗೆ ಕುಸಿದ ಶಾಲಾ ಕಟ್ಟಡ, ಉಕ್ಕಿ ಹರಿಯುತ್ತಿರುವ ನದಿಗಳು

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 10:28 IST
Last Updated 22 ಜುಲೈ 2021, 10:28 IST
ಕುಸಿದಿರುವ ಕಿರವತ್ತಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ
ಕುಸಿದಿರುವ ಕಿರವತ್ತಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ   

ಜೊಯಿಡಾ (ಉತ್ತರ ಕನ್ನಡ): ತಾಲ್ಲೂಕಿನಲ್ಲಿ ಎರಡು ದಿನಗಳಿಂದ ಅಬ್ಬರಿಸುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಹಳ್ಳ, ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.

ಬುಧವಾರ ಸಂಜೆ ಗಾಳಿ ಸಹಿತ ಸುರಿದ ಮಳೆಗೆ ಕುಂಬಾರವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿರವತ್ತಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ, ಬಳಕೆ ಇಲ್ಲದ ಕಟ್ಟಡ ಕುಸಿದಿದೆ. ಈಗ ತರಗತಿಗಳು ನಡೆಯದಿರುವ ಕಾರಣ ದೊಡ್ಡ ಅಪಾಯ ತಪ್ಪಿದಂತಾಗಿದೆ.

ಭತ್ತ ನಾಟಿ ಚುರುಕು ಪಡೆದುಕೊಂಡ ಸಮಯದಲ್ಲಿ ಮಳೆ ಅಬ್ಬರಿಸುತ್ತಿದ್ದು, ಕೃಷಿ ಚಟುವಟಿಕೆಗಳಿಗೆ ತಡೆಯುಂಟು ಮಾಡುತ್ತಿದೆ. ಗ್ರಾಮೀಣ ಭಾಗದಲ್ಲಿ ಹಲವು ಕಡೆ ನಾಟಿ ಮಾಡಿದ ಭತ್ತ, ನೀರು ರಭಸವಾಗಿ ಹರಿದು ಕೊಚ್ಚಿ ಹೋಗಿದೆ.

ADVERTISEMENT

ಸೂಪಾ ಜಲಾಶಯಕ್ಕೆ ನೀರನ್ನು ಒದಗಿಸುವ ಕಾಳಿ ನದಿಯ ಉಪನದಿಗಳಾದ ಪಾಂಡರಿ ಹಾಗೂ ಕಾನೇರಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಇದರಿಂದ ಆ ಭಾಗದ ಜನರ ಸಂಚಾರಕ್ಕೆ ಸಮಸ್ಯೆ ಎದುರಾಗಿದೆ. ತಾಲ್ಲೂಕಿನಲ್ಲಿ ಮಧ್ಯಾಹ್ನದ ನಂತರ ಹೆಚ್ಚಿನ ವೇಗ ಪಡೆದುಕೊಂಡಿರುವ ಮಳೆ, ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ತಮ್ಮ ತಮ್ಮ ಹಳ್ಳಿಗಳಿಗೆ ಮರಳುವ ವಿದ್ಯಾರ್ಥಿಗಳಿಗೂ ಆತಂಕವನ್ನು ತಂದಿದೆ.

ಕಾನೇರಿ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಕುಂಬಾರವಾಡ ಸಮೀಪದ ಕಾತೇಲಿ ಶ್ಯಾಂಡಿಲ್ ಮಹಾರಾಜ್ ಸೇತುವೆಯ ಜಲಾವೃತವಾಗಿದೆ. ಒಂದು ಬದಿ ರಸ್ತೆಯಲ್ಲಿ ನೀರು ಹರಿಯುತ್ತಿದ್ದು, ಜನರು ರಸ್ತೆ ದಾಟಲು ಹರಸಾಹಸ ಪಡಬೇಕಾಯಿತು. ಕುಂಬಾರವಾಡದಿಂದ ಗೊಡಸೇತ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಗುರುವಾರ ಬೆಳಿಗ್ಗೆ ಬೃಹತ್ ಗಾತ್ರದ ಮರವೊಂದು ಉರುಳಿ ಬಿದ್ದು ಸಂಚಾರಕ್ಕೆ ಸಮಸ್ಯೆ ಎದುರಾಯಿತು.

ಜೊಯಿಡಾದ ಕಾತೇಲಿಯಲ್ಲಿ ಶ್ಯಾಂಡಿಲ್ ಮಹಾರಾಜ್ ಸೇತುವೆಯ ಮೇಲೆ ನೀರು ಹರಿಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.