ADVERTISEMENT

ಕಾರವಾರ: ಕೊಡಸಳ್ಳಿ ಅಣೆಕಟ್ಟೆ ಸಂಪರ್ಕ ರಸ್ತೆಯಲ್ಲಿ ಭೂಕುಸಿತ

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 3:01 IST
Last Updated 3 ಜುಲೈ 2025, 3:01 IST
   

ಕಾರವಾರ: ತಾಲ್ಲೂಕಿನ ಬಾಳೆಮನೆ ಸಮೀಪ ಗುರುವಾರ ನಸುಕಿನ ಜಾವ ಭೂಕುಸಿತ ಉಂಟಾಗಿದ್ದು, ಕದ್ರಾದಿಂದ ಕೊಡಸಳ್ಳಿ ಅಣೆಕಟ್ಟೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿದೆ.

ಸುಮಾರು 50 ಮೀಟರ್ ಅಗಲದವರೆಗೆ ಭೂಮಿ ಕುಸಿದಿದ್ದು, ರಸ್ತೆಯ ಮೇಲೆರಗಿದೆ. ಹಲವು ಮರಗಳು ಮಣ್ಣಿನಡಿಗೆ ಸಿಲುಕಿವೆ. ಈ ಮಾರ್ಗದಲ್ಲಿ ವಾಹನ ಸಂಚಾರ ನಡೆಯುವುದು ವಿರಳ.

'ಭೂಕುಸಿತದ ಘಟನೆ ನಡೆದ ಸ್ಥಳವು ಕದ್ರಾ ಅಣೆಕಟ್ಟೆಯಿಂದ ಕೇವಲ 12 ಕಿ.ಮೀ ದೂರದಲ್ಲಿ, ಕೊಡಸಳ್ಳಿ ಅಣೆಕಟ್ಟೆಯಿಂದ 22 ಕಿ.ಮೀ ದೂರದಲ್ಲಿದೆ. ಅಣೆಕಟ್ಟೆಯ ಜಲಾನಯನ ಪ್ರದೇಶಕ್ಕೆ ಸಮೀಪ ಕುಸಿತ ಸಂಭವಿಸಿದ್ದರಿಂದ ಆತಂಕ ಉಂಟಾಗಿದೆ' ಎಂದು ಕದ್ರಾ ಭಾಗದ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ADVERTISEMENT

ಬಾಳೆಮನೆ, ಜೊಯಿಡಾ ತಾಲ್ಲೂಕಿನ ಸೂಳಗೇರಿ ಗ್ರಾಮದ ಜನರಿಗೆ ಇದೊಂದೇ ರಸ್ತೆ ಸಂಪರ್ಕಕ್ಕೆ ಆಸರೆಯಾಗಿದೆ. ಕೊಡಸಳ್ಳಿ ಅಣೆಕಟ್ಟೆ ನಿರ್ವಹಣೆ ಕೆಲಸಕ್ಕೆ ಕರ್ನಾಟಕ ವಿದ್ಯುತ್ ನಿಗಮದ (ಕೆಪಿಸಿ) ಸಿಬ್ಬಂದಿ ತೆರಳಲೂ ಇದೊಂದೇ ಮಾರ್ಗ. ಸದ್ಯ ಅಲ್ಲಿ ವಾಹನ ಸಂಚಾರ ಸಾಧ್ಯವಿಲ್ಲದ ಸ್ಥಿತಿ ಇದೆ.

'ಭೂಕುಸಿತವಾದ ಸ್ಥಳ ಅಣೆಕಟ್ಟೆಯಿಂದ ಸಾಕಷ್ಟು ದೂರದಲ್ಲಿದ್ದು, ಅಣೆಕಟ್ಟೆಯ ಭದ್ರತೆಗೆ ಅಪಾಯವಿಲ್ಲ. ರಸ್ತೆಗೆ ಬಿದ್ದಿರುವ ಮಣ್ಣಿನ ರಾಶಿ ತೆರವುಗೊಳಿಸಲಾಗುತ್ತಿದೆ' ಎಂದು ಕೆಪಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.