ADVERTISEMENT

ಗೋಕರ್ಣ | ಉತ್ತಮ ಮಳೆ: ಭತ್ತ ಬಿತ್ತನೆ ಚುರುಕು

ಗೋಕರ್ಣ ಹೋಬಳಿ: ತುಂಡು ಕೃಷಿಭೂಮಿ ಹಿಡುವಳಿದಾರರೇ ಅಧಿಕ

ರವಿ ಸೂರಿ
Published 7 ಜುಲೈ 2023, 5:09 IST
Last Updated 7 ಜುಲೈ 2023, 5:09 IST
ಗೋಕರ್ಣ ಸಮೀಪದ ತಲಗೇರಿಯ ಬಳಿ ಗದ್ದೆ ಉಳುತ್ತಿರುವ ರೈತ
ಗೋಕರ್ಣ ಸಮೀಪದ ತಲಗೇರಿಯ ಬಳಿ ಗದ್ದೆ ಉಳುತ್ತಿರುವ ರೈತ   

ಗೋಕರ್ಣ: ಉತ್ತಮ ಮಳೆ ಬೀಳುತ್ತಿರುವುದರಿಂದ ಗೋಕರ್ಣ ಹೋಬಳಿಯಲ್ಲಿ ಕೃಷಿ ಚಟುವಟಿಕೆ ಚುರುಕುಗೊಂಡಿದೆ. ವಿವಿಧ ತರಕಾರಿ ಬೆಳೆದು ಲಾಭ ಗಳಿಸಿದ ರೈತರು ಈಗ ಭತ್ತದ ಬೀಜ ಬಿತ್ತನೆಯಲ್ಲಿ ನಿರತರಾಗಿದ್ದಾರೆ. ಟ್ರ್ಯಾಕ್ಟರ್, ಜೋಡೆತ್ತಿಗೆ ನೇಗಿಲುಗಳಿಂದ ಭೂಮಿ ಉಳುತ್ತಿದ್ದಾರೆ.

‘ಗೋಕರ್ಣ ಹೋಬಳಿಯಲ್ಲಿ ಹೆಚ್ಚಿನವರು ತುಂಡು ಕೃಷಿ ಭೂಮಿ ಹಿಡುವಳಿದಾರರು. ಈ ಭಾಗದಲ್ಲಿ ಒಟ್ಟೂ 730 ಹೆಕ್ಟೇರ್ ಕೃಷಿ ಭೂಮಿಯಲ್ಲಿ ಭತ್ತದ ಬೆಳೆ ಮಾಡಲಾಗುತ್ತಿದೆ. 375 ಕ್ವಿಂಟಲ್ ಬೀಜಕ್ಕೆ ಬೇಡಿಕೆಯಿದ್ದು, ಇಲ್ಲಿಯವರೆಗೆ 260 ಕ್ವಿಂಟಲ್ ಬೀಜ ವಿತರಿಸಲಾಗಿದೆ’ ಎಂದು ಕೃಷಿ ಅಧಿಕಾರಿ ಚಿದಾನಂದ ತಿಳಿಸಿದ್ದಾರೆ.

‘ವರ್ಷದಿಂದ ವರ್ಷಕ್ಕೆ ಹೈಬ್ರಿಡ್ ಬೀಜಕ್ಕೆ ಬೇಡಿಕೆ ಹೆಚ್ಚುತ್ತಿದೆೆ. ಖರ್ಚೂ ಕಡಿಮೆ, ಕೆಲಸವೂ ಬೇಗ ಮುಗಿಯುವ ಕಾರಣ ಕೆಲವು ರೈತರು ಹೈಬ್ರಿಡ್ ಬೀಜವನ್ನೇ ಬಿತ್ತುತ್ತಿದ್ದಾರೆ’ ಎಂದು ಚಿದಾನಂದ ವಿವರಣೆ ನೀಡಿದ್ದಾರೆ.

ADVERTISEMENT

ಯಂತ್ರದ ಮೂಲಕ ನಾಟಿಗೆ ಮಾಡಲು ರೈತರು ಹೆಚ್ಚಿನ ಒಲವು ತೋರಿಸಿದ್ದು, ಕೆಲವೇ ಕೆಲವು ರೈತರು ಸಸಿ ನಾಟಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಯಂತ್ರ ನಾಟಿಯಲ್ಲಿ ಕೆಲಸವೂ ಕಡಿಮೆ, ಖರ್ಚು ಕಡಿಮೆ, ಕಳೆಯೂ ಕಡಿಮೆ, ಭತ್ತದ ಇಳುವರಿಯೂ ಜಾಸ್ತಿ ದೊರೆಯುತ್ತಿದೆ.

‘ಮಳೆಯ ಕಾರಣದಿಂದ ಕಡಲ ತಡಿಯ ಅಂಗಡಿಗಳೆಲ್ಲ ಮುಚ್ಚಿದ್ದರಿಂದ ಯುವ ಜನಾಂಗ ಸ್ವಲ್ಪ ಮಟ್ಟಿಗೆ ಕೃಷಿ ಕಾರ್ಯದ ಕಡೆ ಮುಖ ಮಾಡಿದ್ದಾರೆ. ಭತ್ತದ ಕೃಷಿ ಇಲ್ಲಿಯ ರೈತರಿಗೆ ಕೇವಲ ಒಂದು ಉಪ ಆದಾಯವಾಗಿದೆ. ಇದನ್ನೇ ನಂಬಿಕೊಂಡು ಜೀವನ ಸಾಗಿಸುವುದು ಬಲು ಕಷ್ಟ’ ಎನ್ನುತ್ತಾರೆ ಬುಜ್ಜೂರು ರೈತ ಪೊಕ್ಕ ಮಂಕಾಳಿ ಗೌಡ.

ಸಿಬ್ಬಂದಿ, ಗೋದಾಮಿನ ಕೊರತೆ: ಕೃಷಿ ಇಲಾಖೆಯಲ್ಲಿ ಸಿಬ್ಬಂದಿಯ ಕೊರತೆಯಿದೆ. ಕುಮಟಾ, ಕೂಜಳ್ಳಿ, ಮಿರ್ಜಾನ್ ಮತ್ತು ಗೋಕರ್ಣ ಹೋಬಳಿ ಸೇರಿ ಕೇವಲ ಇಬ್ಬರೇ ಕೃಷಿ ಅಧಿಕಾರಿ ಇದ್ದಾರೆ. ಉಳಿದವರೆಲ್ಲ ಹೊರ ಗುತ್ತಿಗೆ ನೌಕರರು. ಇದರಿಂದ ರೈತರು ಅವಶ್ಯಕ ಸೇವೆ, ಮಾಹಿತಿಯಿಂದ ವಂಚಿತರಾಗುತ್ತಿದ್ದಾರೆ.

ಗೋಕರ್ಣದಲ್ಲಿ ಗೋದಾಮಿನ ಕೊರತೆಯೂ ಇದೆ. ಬೀಜ, ರಸಗೊಬ್ಬರ ಸಂಗ್ರಹಿಸಿಡಲು ಸೂಕ್ತವಾದ ಸ್ಥಳದ ಅಭಾವವಿದ್ದು, ವಿನಂತಿಯ ಮೇರೆಗೆ ಗ್ರಾಮ ಪಂಚಾಯ್ತಿ ಹೆಚ್ಚಿಗೆ ಒಂದು ಕೊಠಡಿಯನ್ನು ನೀಡಿದೆ. ಕೃಷಿ ಯಂತ್ರಗಳನ್ನಿಡಲಂತೂ ಸ್ಥಳವೇ ಇಲ್ಲ. ರೈತರಿಗೆ ಕೃಷಿಗೆ ಸಂಬಂಧಪಟ್ಟಂತೆ ಅನಾನುಕೂಲ ಎದ್ದು ಕಾಣುತ್ತಿದೆ.

ರೈತರಿಗಾಗಿ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ವಿವಿಧ ಮಾದರಿಯ ಕೃಷಿ ಉಪಕರಣಗಳು ಲಭ್ಯವಿದ್ದು ಪ್ರೋತ್ಸಾಹ ದರದಲ್ಲಿ ರೈತರಿಗೆ ದೊರೆಯಲಿದೆ

-ಚಿದಾನಂದ ಕೃಷಿ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.