ಅಂಕೋಲಾ: ಪಟ್ಟಣದ ತಾಲ್ಲೂಕು ತಹಶೀಲ್ದಾರ್ ಕಾರ್ಯಾಲಯದ ಆವರಣದಲ್ಲಿರುವ ಹಳೆಯ ತಹಶೀಲ್ದಾರ್ ಕಚೇರಿ ಕಟ್ಟಡದ ನೂರಾರು ವರ್ಷಗಳ ಇತಿಹಾಸವಿರುವ ಗೋಡೆ ಗಣಪನಿಗೆ ತಹಶೀಲ್ದಾರ್ ಡಾ.ಚಿಕ್ಕಪ್ಪ ನಾಯಕ ಮುಂದಾಳತ್ವದಲ್ಲಿ ವಿಶೇಷ ಪೂಜೆ ನೆರವೇರಿತು.
ಬ್ರಿಟಿಷರ ಕಾಲದಲ್ಲಿ ತಾಲ್ಲೂಕು ತಹಶೀಲ್ದಾರ್ ಕಚೇರಿ ನಿರ್ಮಾಣ ಹಂತದಲ್ಲಿ ಗೋಡೆ ಪದೇ ಪದೇ ಕುಸಿಯುತಿತ್ತು, ತಾಂತ್ರಿಕ ಪರಿಣಿತರ ಸಹಾಯ ಪಡೆದರೂ ಗೋಡೆ ನಿರ್ಮಾಣ ಮಾತ್ರ ಸಾಧ್ಯವಾಗಿರಲಿಲ್ಲ. ಸ್ಥಗಿತಗೊಂಡ ಕಟ್ಟಡ ಕಾಮಗಾರಿಯು ಗೋಡೆಯ ಮೇಲೆ ಗಣಪನ ಮೂರ್ತಿ ಪ್ರತಿಷ್ಠಾಪನೆ ಮಾಡಿದಲ್ಲಿ ಕಟ್ಟಡ ಪೂರ್ಣಗೊಳ್ಳಬಹುದೆಂದು ಕಾರ್ಮಿಕರು ಭಕ್ತಿಯಿಂದ ಬ್ರಿಟಿಷ್ ಅಧಿಕಾರಿಗಳಿಗೆ ಸಲಹೆ ನೀಡಿದ್ದರು. ಅದರಂತೆಯೇ ಬ್ರಿಟಿಷ್ ಅಧಿಕಾರಿಗಳು ಗೋಡೆಯಲ್ಲಿ ಗಣಪನನ್ನು ನಿರ್ಮಿಸುವಂತೆ ಆದೇಶಿಸಿದರು.
ಕಾರ್ಮಿಕರ ಕೈಚಳಕದಿಂದ ಮೂಡಿಬಂದ ಗಣಪ ಗೋಡೆ ಗಣಪತಿ ಎಂದು ಪ್ರಸಿದ್ದಿ ಹೊಂದಿತು. ಪ್ರತಿ ವರ್ಷ ಗಣೇಶ ಚತುರ್ಥಿಯ ಸಂದರ್ಭದಲ್ಲಿ 5 ದಿನಗಳವರೆಗೆ ಪೊಲೀಸ್ ಇಲಾಖೆ ಮತ್ತು ತಹಶೀಲ್ದಾರ್ ಕಚೇರಿ ವತಿಯಿಂದ ವಿಶೇಷ ಪೂಜೆ ನಡೆಯಲಿದೆ.
ಅದರಂತೆ ಶನಿವಾರ ಆರತಿ ಪೂಜೆ ನೆರವೇರಿಸಿ ತಹಶೀಲ್ದಾರ್ ಕಾರ್ಯಾಲಯದ ಸಿಬ್ಬಂದಿ ಮತ್ತು ಅಧಿಕಾರಿಗಳು ಜೊತೆಯಾಗಿ ಪೂಜಾ ಕಾರ್ಯವನ್ನು ನೆರವೇರಿಸಿದರು. ಅಲಗೇರಿಯ ಭಜನಾ ಮಂಡಳಿಯವರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.