ADVERTISEMENT

ಹೆಸ್ಕಾಂ ಶಿರಸಿ ವಿಭಾಗ ವ್ಯಾಪ್ತಿ: 500ಕ್ಕೂ ಹೆಚ್ಚು ಅರ್ಜಿ ವಿಲೇವಾರಿ ಬಾಕಿ

ರಾಜೇಂದ್ರ ಹೆಗಡೆ
Published 9 ಜೂನ್ 2025, 6:15 IST
Last Updated 9 ಜೂನ್ 2025, 6:15 IST
ಶಿರಸಿಯಲ್ಲಿರುವ ಹೆಸ್ಕಾಂ ಕಚೇರಿ 
ಶಿರಸಿಯಲ್ಲಿರುವ ಹೆಸ್ಕಾಂ ಕಚೇರಿ    

ಶಿರಸಿ: ಹೊಸ ವಿದ್ಯುತ್ ಸಂಪರ್ಕ ಪಡೆಯಲು ಸ್ವಾಧೀನಾನುಭವ ಪತ್ರ (ಒಸಿ) ಕಡ್ಡಾಯ ಮಾಡಿರುವುದರಿಂದ ಅನಧಿಕೃತ ಆಸ್ತಿ ಹೆಚ್ಚಿರುವ ಹೆಸ್ಕಾಂ ಶಿರಸಿ ವಿಭಾಗ ವ್ಯಾಪ್ತಿಯಲ್ಲಿ ಕಳೆದೆರಡು ತಿಂಗಳಿನಿಂದ 500ಕ್ಕೂ ಹೆಚ್ಚಿನ ಅರ್ಜಿಗಳು ವಿಲೇಯಾಗದೇ ಬಾಕಿ ಉಳಿದಿದೆ. ಹೀಗಾಗಿ ಹೊಸ ವಿದ್ಯುತ್ ಸಂಪರ್ಕ ಪಡೆಯುವುದು ಕಟ್ಟಡ ಮಾಲೀಕರಿಗೆ ಸವಾಲಾಗಿದೆ. 

ಈ ಹಿಂದೆ ಕಟ್ಟಡ ನಕ್ಷೆ ಮಂಜೂರಾತಿ, ಕಟ್ಟಡ ಆರಂಭಿಕ ಪ್ರಮಾಣಪತ್ರದ ಆಧಾರದಲ್ಲಿ ಹೆಸ್ಕಾಂ ಹೊಸ ವಿದ್ಯುತ್‌ ಸಂಪರ್ಕ ಕಲ್ಪಿಸುತ್ತಿತ್ತು. ಕಟ್ಟಡ ಮಾಲೀಕರು ಒ.ಸಿ. ಇಲ್ಲದಿದ್ದರೂ ಇತರ ಅಗತ್ಯ ದಾಖಲೆಗಳನ್ನು ಸಲ್ಲಿಸಿ ವಿದ್ಯುತ್‌ ಸಂಪರ್ಕ ಪಡೆಯುತ್ತಿದ್ದರು. ತಾತ್ಕಾಲಿಕ ವಿದ್ಯುತ್‌ ಸಂಪರ್ಕಗಳಿಗೆ ಒ.ಸಿ. ಸಲ್ಲಿಕೆಯ ಅಗತ್ಯವಿಲ್ಲ. ಸುಪ್ರಿಂ ಕೋರ್ಟ್‌ ಆದೇಶ ಪೂರ್ವಾನ್ವಯ ಪರಿಣಾಮ ಇಲ್ಲದ ಕಾರಣ ಈ ಹಿಂದೆ ಒಸಿ ಸಲ್ಲಿಸದೆ ಪಡೆದ ವಿದ್ಯುತ್‌ ಸಂಪರ್ಕಕ್ಕೆ ಯಾವುದೇ ಸಮಸ್ಯೆಯಿಲ್ಲ. ಆದರೆ, ಸುಪ್ರೀಂ ಕೋರ್ಟ್‌ ಮತ್ತು ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗ (ಕೆಇಆರ್‌ಸಿ) ಆದೇಶದ ಅನ್ವಯ ಏ.4ರಿಂದ ಹೊಸ ವಿದ್ಯುತ್‌ ಸಂಪರ್ಕಕ್ಕೆ ಒಸಿ ಸಲ್ಲಿಕೆ ಕಡ್ಡಾಯ ಮಾಡಲಾಗಿದೆ. ಈ ಆದೇಶ ಪ್ರಸ್ತುತ ಹೊಸ ವಿದ್ಯುತ್ ಸಂಪರ್ಕ ಪಡೆಯಲು ಮುಂದಾಗುತ್ತಿರುವ ಆಸ್ತಿ ಮಾಲಿಕರಿಗೆ ತೀವ್ರ ತೊಡಕಾಗಿದೆ. 

'ಕಟ್ಟಡ ಸ್ವಾಧೀನಾನುಭವ ಪತ್ರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಂದ ನೀಡಲಾಗುವ ಕಾನೂನುಬದ್ಧ ದಾಖಲೆಯಾಗಿದೆ. ಈ ಪತ್ರ ಕಟ್ಟಡವು ಅನುಮತಿ ಪಡೆದ ನಕ್ಷೆಯಂತೆ ನಿರ್ಮಾಣವಾಗಿದೆಯೇ, ವಾಸಕ್ಕೆ ಸುರಕ್ಷಿತವಾಗಿದೆ ಎಂಬುದನ್ನು ದೃಢಪಡಿಸುತ್ತದೆ. ಆದರೆ ಹೆಸ್ಕಾಂ ಶಿರಸಿ ವ್ಯಾಪ್ತಿಯಲ್ಲಿ ಶೇ 50ರಷ್ಟು ಕಟ್ಟಡಗಳ ನಿರ್ಮಾಣದಲ್ಲಿ ನಿಯಮ ಉಲ್ಲಂಘನೆಯಾಗಿದ್ದು, ಇವು ಬಿ ಖಾತಾ ಆಸ್ತಿಗಳಾಗಿವೆ. ಈ ಆಸ್ತಿಗಳಿಗೆ ಹೊಸ ನಿಯಮದಂತೆ ಒಸಿ ಇಲ್ಲ. ಹೀಗಾಗಿ, ಇಂತಹ ಕಟ್ಟಡಗಳಿಗೆ ವಿದ್ಯುತ್‌ ಸಂಪರ್ಕ ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಒಸಿ ಪ್ರಮಾಣಪತ್ರ ಸಲ್ಲಿಸಲಾಗದ ಕಟ್ಟಡ ಮಾಲೀಕರಿಗೆ ತೀವ್ರ ತೊಂದರೆ ಎದುರಾಗಿದೆ. ಅರ್ಜಿ ಸಲ್ಲಿಸಿ ತಿಂಗಳು ಕಳೆದರೂ ಸಂಪರ್ಕ ನೀಡಲು ಹೆಸ್ಕಾಂ ಒಪ್ಪುತ್ತಿಲ್ಲ' ಎಂಬುದು ಹೊಸ ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿದವರೊಬ್ಬರ ಮಾತಾಗಿದೆ. 

ADVERTISEMENT

'ಶಿರಸಿ ವಿಭಾಗ ವ್ಯಾಪ್ತಿಯಲ್ಲಿ ಏಪ್ರಿಲ್, ಮೇ ತಿಂಗಳಲ್ಲಿ 500ಕ್ಕೂ ಹೆಚ್ಚು ಹೊಸ ಸಂಪರ್ಕದ ಅರ್ಜಿಗಳು ಹೆಸ್ಕಾಂಗೆ ಸಲ್ಲಿಕೆಯಾಗಿವೆ. ಜೂನ್ ತಿಂಗಳಲ್ಲಿ ಇವರೆಗೆ 100ರಷ್ಟು ಅರ್ಜಿಗಳು ಬಂದಿವೆ. ಅವುಗಳ ಪರಿಶೀಲನಾ ಕಾರ್ಯ ಚಾಲ್ತಿಯಲ್ಲಿದೆ. ಆದರೆ ಬಹುತೇಕ ಅರ್ಜಿದಾರರ ಬಳಿ ಒ.ಸಿ. ಇಲ್ಲ. ಹೀಗಾಗಿ ಅವುಗಳಿಗೆ ಹೊಸ ವಿದ್ಯುತ್ ಸಂಪರ್ಕ ನೀಡಲು ಸಾಧ್ಯವಿಲ್ಲ' ಎಂಬುದು ಹೆಸ್ಕಾಂ ಅಧಿಕಾರಿಯೊಬ್ಬರ ಮಾತು. 

ಒ.ಸಿ. ಇಲ್ಲದ ಕಾರಣಕ್ಕೆ ಕೆಲವು ಸಣ್ಣ ಕೈಗಾರಿಕೆ ಕೋಳಿ ಫಾರಂ ಡೇರಿಗಳಿಗೂ ವಿದ್ಯುತ್‌ ಸಂಪರ್ಕ ಸಿಗದಂತಾಗಿದೆ. ಈ ಸಮಸ್ಯೆ ಬಗ್ಗೆ ಸರ್ಕಾರ ಸೂಕ್ತ ಪರಿಹಾರ ಸೂಚಿಸುವ ಅಗತ್ಯವಿದೆ. 
ನಾರಾಯಣ ಗೌಡ ಕೋಳಿ ಸಾಕಣೆದಾರ
ಒ.ಸಿ. ಇಲ್ಲದ ಯಾವುದೇ ಕಟ್ಟಡಗಳಿಗೆ ವಿದ್ಯುತ್‌ ಸಂಪರ್ಕ ನೀಡಬಾರದೆಂದು ಸುಪ್ರಿಂ ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ನಿಯಮ ಪಾಲಿಸಿದವರಿಗೆ ಮಾತ್ರ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗುತ್ತಿದೆ.
ವಿನಯ ರಾಚೋಟಿ ಹೆಸ್ಕಾಂ ಶಿರಸಿ ಪ್ರಭಾರಿ ಇಇ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.