ADVERTISEMENT

ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯ ಸುರಂಗ ಮಾರ್ಗ ನಿರ್ಬಂಧ ತೆರವು ಎಂದು?

3 ತಿಂಗಳಿನಿಂದ ಒಂದೇ ಪಥದಲ್ಲಿ ವಾಹನ ಸಚಾರ: ಅಪಘಾತದ ಆತಂಕ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2025, 2:32 IST
Last Updated 9 ಸೆಪ್ಟೆಂಬರ್ 2025, 2:32 IST
ಕಾರವಾರದ ಲಂಡನ್ ಸೇತುವೆ ಸಮೀಪ ರಾಷ್ಟ್ರೀಯ ಹೆದ್ದಾರಿ–66ರ ಸುರಂಗ ಮಾರ್ಗದ ಎದುರು ಬ್ಯಾರಿಕೇಡ್ ಅಳವಡಿಸಿ ಸಂಚಾರ ನಿರ್ಬಂಧಿಸಿರುವುದು 
ಕಾರವಾರದ ಲಂಡನ್ ಸೇತುವೆ ಸಮೀಪ ರಾಷ್ಟ್ರೀಯ ಹೆದ್ದಾರಿ–66ರ ಸುರಂಗ ಮಾರ್ಗದ ಎದುರು ಬ್ಯಾರಿಕೇಡ್ ಅಳವಡಿಸಿ ಸಂಚಾರ ನಿರ್ಬಂಧಿಸಿರುವುದು    

ಕಾರವಾರ: ಮಳೆಗಾಲದ ಆರಂಭದಲ್ಲಿ ಕುಸಿತ ಸಂಭವಿಸಿದ ಕಾರಣಕ್ಕೆ ಸ್ಥಗಿತಗೊಂಡಿರುವ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯ ಸುರಂಗ ಮಾರ್ಗದ ಒಂದು ಪಥದಲ್ಲಿ ಈವರೆಗೂ ಸಂಚಾರ ಪುನರಾರಂಭಗೊಂಡಿಲ್ಲ. ಒಂದೇ ಪಥದಲ್ಲಿ ಸಂಚಾರ ನಡೆಯುತ್ತಿದ್ದು, ಅವಘಡಗಳಿಗೆ ಕಾರಣವಾಗುತ್ತಿರುವ ದೂರು ಹೆಚ್ಚಿದೆ.

ಲಂಡನ್ ಸೇತುವೆಯಿಂದ ಬಿಣಗಾ ಗ್ರಾಮದವರೆಗೆ ಹೆದ್ದಾರಿಗೆ ಒಟ್ಟು ನಾಲ್ಕು ಸುರಂಗ ನಿರ್ಮಿಸಲಾಗಿದೆ. ಎರಡು ಸುರಂಗಗಳಲ್ಲಿ ಕಾರವಾರದಿಂದ ಬಿಣಗಾ ಕಡೆಗೆ, ಇನ್ನೆರಡು ಸುರಂಗಗಳಲ್ಲಿ ಬಿಣಗಾ ಕಡೆಯಿಂದ ಕಾರವಾರಕ್ಕೆ ವಾಹನಗಳು ಸಂಚರಿಸುತ್ತವೆ. ಅವುಗಳ ಪೈಕಿ ಕಾರವಾರದಿಂದ ಬಿಣಗಾ ಕಡೆಗೆ ವಾಹನ ಸಾಗುವ ಸುರಂಗ ಸದ್ಯ ಸ್ಥಗಿತಗೊಂಡಿದೆ.

ಈಚೆಗಷ್ಟೆ ಸುರಂಗ ಮಾರ್ಗದಲ್ಲಿ ತಡರಾತ್ರಿ ಎರಡು ಕಾರುಗಳ ಮುಖಾಮುಖಿ ಡಿಕ್ಕಿ ಸಂಭವಿಸಿ, ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಕಳೆದ ಹಲವು ದಿನಗಳಿಂದ ಸಣ್ಣ ಪುಟ್ಟ ಅಪಘಾತಗಳು ಸುರಂಗ ಮಾರ್ಗದಲ್ಲಿ ನಡೆಯುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಅಲ್ಲದೇ, ಸುರಂಗ ಮಾರ್ಗದಲ್ಲಿ ಸಂಚಾರ ನಿರ್ಬಂಧ ಆದೇಶ ತೆರವುಗೊಳಿಸುವುದು ಯಾವಾಗ? ಎಂದು ಪ್ರಶ್ನಿಸುತ್ತಿದ್ದಾರೆ.

ADVERTISEMENT

‘ಮಳೆಗಾಲದಲ್ಲಿ ಬಿಣಗಾ ಸಮೀಪದಲ್ಲಿರುವ ಸುರಂಗದ ಮೇಲ್ಭಾಗದಲ್ಲಿ ಭೂಕುಸಿತ ಸಂಭವಿಸಿತ್ತು. ಹಲವು ಬಾರಿ ಕಲ್ಲುಗಳು ಉರುಳಿ ಬಿದ್ದಿದ್ದವು. ಸುರಕ್ಷತೆ ದೃಷ್ಟಿಯಿಂದ ಸಂಚಾರ ಸ್ಥಗಿತಗೊಳಿಸಲಾಗಿದೆ. ಆದರೆ, ಮಳೆ ತೀವ್ರತೆ ಕಡಿಮೆಯಾದ ಬಳಿಕವೂ ಸುರಂಗದಲ್ಲಿ ಸಂಚಾರಕ್ಕೆ ಅವಕಾಶ ಕಲ್ಪಿಸಿಲ್ಲ. ಇದರಿಂದ ಏಕೈಕ ಮಾರ್ಗದಲ್ಲಿ ಸಂಚಾರ ದಟ್ಟಣೆ ಹೆಚ್ಚುತ್ತಿದ್ದು, ಅಪಘಾತಗಳ ಆತಂಕ ಹೆಚ್ಚಿದೆ’ ಎಂದು ಬಿಣಗಾ ಗ್ರಾಮಸ್ಥ ಗಜಾನನ ನಾಯ್ಕ ದೂರಿದ್ದಾರೆ.

ಭೂಕುಸಿತ ಸಂಭವಿಸಿದ್ದ ಗುಡ್ಡದ ಮೇಲ್ಭಾಗದಲ್ಲಿ ಜಿಲ್ಲಾಧಿಕಾರಿ ಬಂಗ್ಲೆಯೂ ಇದೆ. ಸುರಂಗ ಮಾರ್ಗದಲ್ಲಿ ತಾತ್ಕಾಲಿಕವಾಗಿ ವಾಹನ ಸಂಚಾರ ನಿಷೇಧಿಸಿ ಜೂನ್ ಮೊದಲ ವಾರದಲ್ಲಿ ಜಿಲ್ಲಾಧಿಕಾರಿ ಆದೇಶಿಸಿದ್ದರು. ಸಂಚಾರ ಪುನರಾರಂಭದ ನಿರ್ಧಾರದ ಕುರಿತು  ಪ್ರತಿಕ್ರಿಯೆಗೆ ಜಿಲ್ಲಾಧಿಕಾರಿ ಸಂಪರ್ಕಿಸಲಾಯಿತಾದರೂ ಪ್ರತಿಕ್ರಿಯಿಸಿಗೆ ಅವರು ನಿರಾಕರಿಸಿದರು.

‘ಸುರಕ್ಷತಾ ಕ್ರಮ ಅಗತ್ಯ’

‘ರಾಷ್ಟ್ರೀಯ ಹೆದ್ದಾರಿಯ ಸುರಂಗ ಮಾರ್ಗದ ಬಳಿ ಭೂಕುಸಿತ ಸಂಭವಿಸಿದ್ದರಿಂದ ಜಿಲ್ಲಾಧಿಕಾರಿ ಆದೇಶದ ಹಿನ್ನೆಲೆಯಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ಮಳೆ ಕಡಿಮೆ ಆಗಿದ್ದರಿಂದ ಸಂಚಾರ ಪುನರಾರಂಭಿಸಲು ಜಿಲ್ಲಾಡಳಿತದ ಅನುಮತಿಗೆ ಕಾಯುತ್ತಿದ್ದೇವೆ’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಕೆ.ಶಿವಕುಮಾರ್ ಪ್ರತಿಕ್ರಿಯಿಸಿದರು. ‘ಸುರಂಗ ಮಾರ್ಗದ ಹೊರಭಾಗದ ಕೆಲವೆಡೆ ಕುಸಿತ ಸಂಭವಿಸಿದ ಸ್ಥಳಗಳಲ್ಲಿ ತಜ್ಞರ ಸಲಹೆ ಆಧರಿಸಿ ಸುರಕ್ಷತಾ ಕ್ರಮ ಕೈಗೊಳ್ಳಬೇಕಿದೆ. ಸದ್ಯದಲ್ಲೇ ಈ ಕೆಲಸ ಕೈಗೆತ್ತಿಕೊಳ್ಳಲಾಗುತ್ತದೆ’ ಎಂದರು. ‘ಸುರಂಗದಲ್ಲಿ ಹಲವೆಡೆ ನೀರು ಸೋರಿಕೆಯಾಗುತ್ತಿದೆ. ಆದರೆ ಇದರಿಂದ ಯಾವುದೇ ಅಪಾಯ ಇಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.