ADVERTISEMENT

ಕಾರವಾರ: ಅವಧಿ ಮೀರಿದರೂ ಮುಗಿಯದ ಹೆದ್ದಾರಿ ಕಾಮಗಾರಿ

ಗಣಪತಿ ಹೆಗಡೆ
Published 1 ಸೆಪ್ಟೆಂಬರ್ 2025, 4:33 IST
Last Updated 1 ಸೆಪ್ಟೆಂಬರ್ 2025, 4:33 IST
ಕುಮಟಾ ತಾಲ್ಲೂಕಿನ ದೇವಿಮನೆ ಘಟ್ಟದಲ್ಲಿ ಶಿರಸಿ–ಕುಮಟಾ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯ ಒಂದು ಪಥದಲ್ಲಿ ಮಾತ್ರ ಕಾಂಕ್ರೀಟೀಕರಣ ಮಾಡಲಾಗಿರುವುದು
ಕುಮಟಾ ತಾಲ್ಲೂಕಿನ ದೇವಿಮನೆ ಘಟ್ಟದಲ್ಲಿ ಶಿರಸಿ–ಕುಮಟಾ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯ ಒಂದು ಪಥದಲ್ಲಿ ಮಾತ್ರ ಕಾಂಕ್ರೀಟೀಕರಣ ಮಾಡಲಾಗಿರುವುದು   

ಕಾರವಾರ: ಕಳೆದ ಒಂದೆರಡು ವರ್ಷದಿಂದ ನಡೆಯುತ್ತಿರುವ ಜಿಲ್ಲಾಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಜಿಲ್ಲೆಯಲ್ಲಿ ಹೆದ್ದಾರಿ ಕಾಮಗಾರಿ ಕೈಗೆತ್ತಿಕೊಂಡ ಕಂಪನಿಗಳ ಅಧಿಕಾರಿಗಳು ಜನಪ್ರತಿನಿಧಿಗಳಿಂದ ಲೆಕ್ಕವಿಲ್ಲದಷ್ಟು ಬಾರಿ ತರಾಟೆಗೆ ಒಳಗಾಗಿದ್ದಾರೆ. ಆದರೆ, ಕೆಲಸದ ಪ್ರಗತಿ ಮಾತ್ರ ನಿಧಾನವಾಗಿದೆ.

‘ರಾಷ್ಟ್ರೀಯ ಹೆದ್ದಾರಿ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಒಳಪಡುತ್ತದೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಈ ಬಗ್ಗೆ ಕಾಳಜಿ ವಹಿಸಬೇಕು. ಕಾಮಗಾರಿ ವೇಗ ಪಡೆದುಕೊಳ್ಳಲು ಸೂಚಿಸಬೇಕು. ಅವರ ನಿರ್ಲಕ್ಷ ಎದ್ದು ಕಾಣಿಸುತ್ತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಆಡಳಿತ ಪಕ್ಷದ ಶಾಸಕರು ದೂರುತ್ತಿದ್ದಾರೆ.

‘ಹೆದ್ದಾರಿ ಕಾಮಗಾರಿಗೆ ಪೂರಕವಾಗಿ ಭೂಸ್ವಾಧೀನ ಮಾಡಿಕೊಡುವಲ್ಲಿ ರಾಜ್ಯ ಸರ್ಕಾರ ಎಡವಿದೆ. ಕಾಮಗಾರಿ ವೇಗ ಪಡೆದುಕೊಳ್ಳಲು ಅಗತ್ಯವಿರುವ ಅನುಮತಿ ನೀಡಲು ಅನಗತ್ಯ ವಿಳಂಬ ಮಾಡಲಾಗುತ್ತಿದೆ. ಇದಕ್ಕೆ ರಾಜ್ಯ ಸರ್ಕಾರ ಹೊಣೆ’ ಎಂದು ಸಂಸದ ದೂರುತ್ತಿದ್ದಾರೆ.

ADVERTISEMENT

ಜನಪ್ರತಿನಿಧಿಗಳು ಹೀಗೆ ಪರಸ್ಪರ ಆರೋಪ–ಪ್ರತ್ಯಾರೋಪದಲ್ಲಿ ತೊಡಗಿದ್ದಷ್ಟೇ ಹೊರತು, ಗುತ್ತಿಗೆ ಪಡೆದ ಕಂಪನಿಗಳ ಮೇಲೆ ಕ್ರಮ ಕೈಗೊಳ್ಳದ ಕಾರಣದಿಂದ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಕಂಪನಿಗಳು ಪೂರ್ಣಗೊಳಿಸಲು ಆಸಕ್ತಿ ತೋರದೆ ಕಾಲಹರಣ ಮಾಡುತ್ತಿವೆ ಎಂದು ಸಾರ್ವಜನಿಕರು ಆರೋಪಿಸುವಂತಾಗಿದೆ.

2016ರಲ್ಲೇ ಪೂರ್ಣಗೊಳ್ಳಬೇಕಿದ್ದ ಚತುಷ್ಪಥ ಹೆದ್ದಾರಿ–66 ಇನ್ನೂ ಪೂರ್ಣಗೊಂಡಿಲ್ಲದಿರುವುದು, 2021ರ ಮಾರ್ಚ್‌ನಲ್ಲೇ ಮುಗಿಯಬೇಕಿದ್ದ ಶಿರಸಿ–ಕುಮಟಾ ರಾಷ್ಟ್ರೀಯ ಹೆದ್ದಾರಿ ಇನ್ನೂ ಆಮೆಗತಿಯಲ್ಲಿ ಸಾಗಿರುವುದು, 2026ರ ಮಾರ್ಚ್ ಅಂತ್ಯಕ್ಕೆ ಪೂರ್ಣಗೊಳ್ಳಬೇಕಿರುವ ಶಿರಸಿ–ಹಾವೇರಿ ಹೆದ್ದಾರಿ ಕೆಲಸ ಇನ್ನೂ ಸರಿಯಾಗಿ ಆರಂಭಗೊಳ್ಳದಿರುವುದು ಈ ಆರೋಪಗಳಿಗೆ ಪುಷ್ಟಿ ನೀಡುತ್ತಿವೆ.

ಕಾರವಾರದಿಂದ ಕುಂದಾಪುರದವರೆಗೆ 189 ಕಿ.ಮೀ ಉದ್ದದ ಚತುಷ್ಪಥ ಹೆದ್ದಾರಿ ನಿರ್ಮಾಣದ ಕೆಲಸ ಕೈಗೆತ್ತಿಕೊಂಡ ಐಆರ್‌ಬಿ ಇನ್‌ಫ್ರಾಸ್ಟ್ರಕ್ಚರ್ ಕಂಪನಿ ಒಪ್ಪಂದದ ಪ್ರಕಾರ 2016ರಲ್ಲಿಯೇ ಕಾಮಗಾರಿ ಪೂರ್ಣಗೊಳಿಸಬೇಕಿತ್ತು. 2014ರಲ್ಲಿಯೇ ಹೆದ್ದಾರಿ ಕಾಮಗಾರಿ ಆರಂಭಗೊಂಡಿತ್ತು. ಇದುವರೆಗೂ ಕಂಪನಿ ದಾಖಲೆಗಳಲ್ಲಿ 182 ಕಿ.ಮೀನಷ್ಟು ಉದ್ದದ ರಸ್ತೆ ನಿರ್ಮಾಣ ಮುಗಿದಿದೆ ಎಂದು ಹೇಳುತ್ತಿದೆ.

ಆದರೆ, ಕಾರವಾರ ತಾಲ್ಲೂಕಿನ ಅಮದಳ್ಳಿ, ಅರಗಾ, ಅಂಕೋಲಾದ ಶಿರೂರು, ಬೆಳಸೆ, ಕುಮಟಾ ಪಟ್ಟಣ, ಭಟ್ಕಳದ ಮೂಡಭಟ್ಕಳ, ಮುಂತಾದ ಕಡೆಗಳಲ್ಲಿ ಇನ್ನೂ ಕೆಲಸ ಪೂರ್ಣಗೊಂಡಿಲ್ಲ.

‘ಚತುಷ್ಪಥ ಹೆದ್ದಾರಿ ಕಾಮಗಾರಿಗಳು ಆರಂಭದಿಂದಲೂ ಅಧ್ವಾನದಿಂದ ನಡೆದಿವೆ. ಅಮದಳ್ಳಿ ಬಳಿ ಅರೆಬರೆ ಕೆಲಸದಿಂದ ಹಲವು ಅಪಘಾತಗಳು ನಡೆದಿವೆ. ಪ್ರತಿಭಟಿಸಿದರೂ, ಮನವಿ ಸಲ್ಲಿಸಿದರೂ ಸ್ಪಂದಿಸುವ ಕೆಲಸ ನಡೆದಿಲ್ಲ’ ಎಂಬುದು ಗ್ರಾಮ ಪಂಚಾಯಿತಿ ಸದಸ್ಯ ನರೇಂದ್ರ ತಳೇಕರ ಅವರ ದೂರು.

ಶಿರಸಿ–ಕುಮಟಾ ರಾಷ್ಟ್ರೀಯ ಹೆದ್ದಾರಿ–766ಇ ಕಾಮಗಾರಿಯು ನಿಧಾನಗತಿಯಲ್ಲಿ ನಡೆಯುತ್ತಿರುವುದೂ ಜನರ ಆಕ್ಷೇಪಕ್ಕೆ ಕಾರಣವಾಗಿದೆ. ಶಿರಸಿಯ ನೀಲೇಕಣಿಯಿಂದ ಕುಮಟಾ ತಾಲ್ಲೂಕಿನ ದೀವಗಿ ಕ್ರಾಸ್‌ವರೆಗೆ 59 ಕಿ.ಮೀ ಉದ್ದದ ದ್ವಿಪಥ ಕಾಂಕ್ರೀಟ್ ರಸ್ತೆ ನಿರ್ಮಾಣ ಕೆಲಸ 6 ವರ್ಷ ಕಳೆದರೂ ಮುಗಿದಿಲ್ಲ. ಈ ಕಾಮಗಾರಿಯನ್ನು ಆರ್.ಎನ್.ಎಸ್ ಇನ್‍ಫ್ರಾಸ್ಟ್ರಕ್ಚರ್ ಕಂಪನಿ ಕೈಗೆತ್ತಿಕೊಂಡಿದೆ.

ಅಂಕೋಲಾ ತಾಲ್ಲೂಕಿನ ಶಿರೂರು ಸಮೀಪ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯ ಒಂದು ಪಥದ ಮೇಲೆ ಮಣ್ಣು ಸುರಿದಿರುವುದು

‘ಶಿರಸಿ–ಕುಮಟಾ ರಸ್ತೆಯು ಮಲೆನಾಡು ಮತ್ತು ಉತ್ತರ ಕರ್ನಾಟಕವನ್ನು ಕರಾವಳಿಯೊಂದಿಗೆ ಬೆಸೆಯುವ ಮುಖ್ಯ ಮಾರ್ಗ. ಆದರೆ, ರಸ್ತೆ ಕಾಮಗಾರಿಯ ಕಾರಣಕ್ಕೆ ಈ ಮಾರ್ಗದಲ್ಲಿ ಒಂದೂವರೆ ವರ್ಷದಿಂದ ವಾಹನ ಸಂಚಾರಕ್ಕೆ ತಡೆ ಒಡ್ಡಲಾಗಿದೆ. ಸರಕು ಸಾಗಣೆ ವಾಹನಗಳು 80 ಕಿ.ಮೀಗೂ ಹೆಚ್ಚು ದೂರ ಸುತ್ತು ಬಳಸಿ ಸಾಗುತ್ತಿವೆ. ಇದು ವಾಣಿಜ್ಯ ಚಟುವಟಿಕೆ ಮೇಲೂ ಪರಿಣಾಮ ಬೀರುತ್ತಿದೆ’ ಎನ್ನುತ್ತಾರೆ ಉದ್ಯಮಿ ಅಶ್ವತ್ಥ ಹೆಗಡೆ.

ಇದೇ ಮಾರ್ಗದ ದೇವಿಮನೆ ಘಟ್ಟದಲ್ಲಿ ಕೇವಲ ಒಂದು ಪಥದಲ್ಲಿ ಮಾತ್ರ ಕಾಂಕ್ರೀಟೀಕರಣ ಕೆಲಸ ಮುಗಿದಿದೆ. ಶಿರಸಿ ತಾಲ್ಲೂಕಿನ ಸಂಪಖಂಡ, ಕುಮಟಾ ತಾಲ್ಲೂಕಿನ ಕತಗಾಲ, ದೀವಗಿ, ಕೊಡಂಬಳೆ, ಹರೀಟಾ ಗ್ರಾಮಗಳಲ್ಲಿ ಹಳೆಯ ರಸ್ತೆಯೇ ಇದ್ದು, ಅವು ಕೂಡ ದುಸ್ಥಿತಿಯಲ್ಲಿವೆ. ಲಘು ವಾಹನಗಳು, ದ್ವಿಚಕ್ರ ವಾಹನ ಸವಾರರು ಅಪಘಾತದ ಭಯದಲ್ಲೇ ಸಾಗುವ ಸ್ಥಿತಿ ಇಲ್ಲಿ ಉಂಟಾಗಿದೆ. 

ಶಿರಸಿ–ಹಾವೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗೌಡಳ್ಳಿ ಸಮೀಪ ಹತ್ತಾರು ಹೊಂಡಗಳು ಬಿದ್ದಿದ್ದು ವಾಹನ ಸವಾರರು ಸಾಗಲು ಪರದಾಡುತ್ತಿದ್ದಾರೆ

ಮೂಡಭಠ್ಕಳ ಬೈಪಾಸ್‌ ಹಾಗೂ ಕಾಯ್ಕಿಣಿ ಬಳಿ ಅಂಡರ್‌ ಪಾಸ್‌, ಭಟ್ಕಳದ ಸಂಶುದ್ದೀನ್ ಸರ್ಕಲ ಬಳಿ‌ ಮೇಲ್ಸೇತುವೆ ನಿರ್ಮಿಸಲು ಒತ್ತಾಯವಿದೆ. ಇದಲ್ಲದೇ ಪಟ್ಟಣ ವ್ಯಾಪ್ತಿಯಲ್ಲಿ ಹೆದ್ದಾರಿಯಲ್ಲಿ ಮಳೆ ನೀರು ಹರಿಯುವ ಚರಂಡಿ ಕಾಮಗಾರಿ, ಒಳಚರಂಡಿ ಚೇಂಬರ್‌ ಕಾಮಗಾರಿ ಹಾಗೂ ಸರ್ವಿಸ್‌ ರಸ್ತೆ ನಿರ್ಮಾಣದ ಬೇಡಿಕೆಯೂ ಇದೆ. ಈ ಕಾರಣಗಳಿಂದ ನಿರಂತರ ಪ್ರತಿಭಟನೆ ನಡೆಯುತ್ತಿದ್ದು, ಈ ಸ್ಥಳಗಳಲ್ಲಿ ಕಾಮಗಾರಿ ನಿಲ್ಲಿಸಲಾಗಿದೆ.

ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಮೋಹನ ನಾಯ್ಕ

ಹೊಂಡಗಳೇ ತುಂಬಿರುವ ಹೆದ್ದಾರಿ
ಶಿರಸಿ–ಹಾವೇರಿ ರಸ್ತೆ (766ಇ)ಯಲ್ಲಿ ಸಂಚಾರ ದುಸ್ತರವಾಗಿದೆ. ಇಲ್ಲಿ ಸಂಚರಿಸುವುದು ಅಪಾಯವನ್ನು ಬೆನ್ನಿಗಂಟಿಕೊಂಡು ಓಡಾಡಿದಂತೆ ಎಂಬುದು ಬಹುತೇಕ ವಾಹನ ಸವಾರರ ಮಾತು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಡಿ ಅಮ್ಮಾಪುರ ಇನ್‌ಫ್ರಾಸ್ಟ್ರಕ್ಚರ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯು ಸಾಗರಮಾಲಾ ಯೋಜನೆಯಡಿ 2018ರಲ್ಲೇ ಈ ರಸ್ತೆ ವಿಸ್ತರಣೆ ಕಾಮಗಾರಿ ಕೈಗೆತ್ತಿಕೊಂಡಿತ್ತು. ಒಟ್ಟು 74 ಕಿ.ಮೀ ರಸ್ತೆ ವಿಸ್ತರಣೆ ಮಾಡಬೇಕಿದ್ದು ಕೇವಲ 5 ಕಿ.ಮೀ. ಮಾತ್ರ ಕಾಮಗಾರಿಯಾಗಿದೆ. ನಿರ್ವಹಣೆಯೂ ನಡೆಯದೆ ರಸ್ತೆ ಹದಗೆಟ್ಟಿದೆ. ಮಳೆಗಾಲದಲ್ಲಿ ಈ ರಸ್ತೆಯು ಅಕ್ಷರಶಃ ಕೆಸರುಗದ್ದೆಯಂತಾಗಿ ಮಾರ್ಪಟ್ಟಿದೆ. ‘ಶಿರಸಿ ನಗರದಿಂದ ದಾಸನಕೊಪ್ಪವರೆಗೂ ರಸ್ತೆಯುದ್ದಕ್ಕೂ ನೂರಾರು ಹೊಂಡಗಳು ಬಿದ್ದ ಕಾರಣ ಓಡಾಡಲು ಆಗದ ಸ್ಥಿತಿಯಿದೆ’ ಎಂಬುದು ಬಿಸಲಕೊಪ್ಪದ ಗಜಾನನ ಹೆಗಡೆ ಆರೋಪ.
ಭೂಸ್ವಾಧೀನ ಪ್ರಕ್ರಿಯೆ ವಿಳಂಬ ಪರಿಸರದ ವಿಚಾರಕ್ಕೆ ದಾಖಲಾದ ಕೋರ್ಟ್ ಪ್ರಕರಣಗಳಿಂದ ನಿಗದಿತ ಅವಧಿಯಲ್ಲಿ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಲು ಸಮಸ್ಯೆ ಆಗಿದೆ
ಕೆ.ಶಿವಕುಮಾರ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ
ಅಪೂರ್ಣಗೊಂಡ ರಸ್ತೆ ಕಾಮಗಾರಿಯಿಂದಾಗಿ ಅಪಘಾತಗಳು ಹೆಚ್ಚುತ್ತಿದ್ದು ಹೆದ್ದಾರಿ ಪ್ರಾಧಿಕಾರ ಶೀಘ್ರದಲ್ಲಿ ಮೂಲಸೌಕರ್ಯ ಒದಗಿಸಿ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು
ಮಂಜಪ್ಪ ನಾಯ್ಕ ಜಾಲಿ ನಿವಾಸಿ
ಶಿರೂರು ಭಾಗದಲ್ಲಿ ರಸ್ತೆ ಕೆಲಸ ಪೂರ್ಣಗೊಂಡಿಲ್ಲ. ಇನ್ನೂ ಹಲವೆಡೆ ಹಳೆಯ ರಸ್ತೆಯಲ್ಲೇ ವಾಹನಗಳು ಸಂಚರಿಸುತ್ತಿದ್ದು ಕಿರಿದಾದ ಮಾರ್ಗದಲ್ಲಿ ವೇಗವಾಗಿ ಸಾಗುವುದರಿಂದ ಅಪಘಾತ ಭಯ ಕಾಡುತ್ತಿದೆ
ನಾಗರಾಜ ನಾಯ್ಕ ಶಿರೂರು ನಿವಾಸಿ
ಭೂಕುಸಿತ ನಿರಂತರ
ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ಆರಂಭಗೊಂಡ ಬಳಿಕ ಭೂಕುಸಿತದ ಘಟನೆಗಳು ಹೆಚ್ಚಿವೆ ಎಂಬ ದೂರುಗಳಿವೆ. ಕುಮಟಾದ ತಂಡ್ರಕುಳಿ ಬರ್ಗಿ ಅಂಕೋಲಾದ ಶಿರೂರು ಹೊನ್ನಾವರದ ಕರ್ನಲ್ ಹಿಲ್ ಕಾರವಾರದ ಸಂಕ್ರುಬಾಗ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ–66ರ ವಿಸ್ತರಣೆಯಿಂದ ಗುಡ್ಡ ಕುಸಿತ ಸಂಭವಿಸಿದೆ. ಶಿರಸಿ–ಕುಮಟಾ ಹೆದ್ದಾರಿ ವಿಸ್ತರಣೆಗೆ ರಾಗಿಹೊಸಳ್ಳಿ ಭಾಗದಲ್ಲಿ ಕುಸಿತ ಉಂಟಾಗಿದ್ದರೆ ದೇವಿಮನೆ ಘಟ್ಟದಲ್ಲಿ ನಿರಂತರವಾಗಿ ಭೂಕುಸಿತ ಉಂಟಾಗುತ್ತಲೇ ಇದೆ. ‘ಹೆದ್ದಾರಿ ವಿಸ್ತರಣೆ ನೆಪದಲ್ಲಿ ಕಂಪನಿಗಳು ಗುಡ್ಡಗಳನ್ನು ಅವೈಜ್ಞಾನಿಕವಾಗಿ ಕತ್ತರಿಸುತ್ತಿವೆ. ಲಂಬಕೋನ ಮಾದರಿಯಲ್ಲಿ ಗುಡ್ಡ ಕತ್ತರಿಸುವುದರಿಂದ ಇಂತಹ ಅವಘಡಗಳು ಘಟಿಸುತ್ತಲೇ ಇರುತ್ತವೆ’ ಎಂಬುದು ಪರಿಸರವಾದಿಗಳ ಆರೋಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.