ADVERTISEMENT

ಇತಿಹಾಸ ಸಮ್ಮೇಳನ ಮೇ 4ರಿಂದ

ಸಮಗ್ರ ಕರ್ನಾಟಕ ಸಾಮಂತ ಸಂಸ್ಕೃತಿ ಕುರಿತು ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2019, 19:45 IST
Last Updated 25 ಏಪ್ರಿಲ್ 2019, 19:45 IST
ಇತಿಹಾಸ ಸಮ್ಮೇಳನ ಸಮಿತಿ ಸದಸ್ಯರು ಶಿರಸಿಯಲ್ಲಿ ಸಮ್ಮೇಳನ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿದರು
ಇತಿಹಾಸ ಸಮ್ಮೇಳನ ಸಮಿತಿ ಸದಸ್ಯರು ಶಿರಸಿಯಲ್ಲಿ ಸಮ್ಮೇಳನ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿದರು   

ಶಿರಸಿ: ರಾಜ್ಯ ಮಟ್ಟದ ಐದನೇ ಇತಿಹಾಸ ಸಮ್ಮೇಳನ, ಸೋದೆ ಸದಾಶಿವರಾಯ ಪ್ರಶಸ್ತಿ ಪ್ರದಾನ ಹಾಗೂ ವಿಚಾರ ಸಂಕಿರಣವು ತಾಲ್ಲೂಕಿನ ಸೋಂದಾ ಸ್ವರ್ಣವಲ್ಲಿ ಸಂಸ್ಥಾನದಲ್ಲಿ ಮೇ 4 ಮತ್ತು 5ರಂದು ನಡೆಯಲಿದೆ.

ಜಾಗೃತ ವೇದಿಕೆ ಸೋಂದಾವು ಐಸಿಎಚ್‌ಆರ್ ದೆಹಲಿ, ಮಿಥಿಕ್ ಸೊಸೈಟಿ ಬೆಂಗಳೂರಿನ ಸಹಯೋಗದಲ್ಲಿ ಆಯೋಜಿಸಿರುವ ಸಮ್ಮೇಳನದ ಕುರಿತು ಸಂಚಾಲಕ ಲಕ್ಷ್ಮೀಶ ಹೆಗಡೆ ಸೋಂದಾ, ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಐತಿಹಾಸಿಕ ಪ್ರಾಮುಖ್ಯತೆಯ ಒಂದೊಂದು ವಿಷಯವನ್ನು ಕೇಂದ್ರೀಕರಿಸಿ ನಡೆಸುವ ಸಮ್ಮೇಳನದಲ್ಲಿ ಈ ವರ್ಷ ‘ಸಮಗ್ರ ಕರ್ನಾಟಕ ಸಾಮಂತ ಸಂಸ್ಕೃತಿ’ಯ ಕುರಿತು ವಿಸ್ತಾರ ಚರ್ಚೆ ನಡೆಯಲಿದೆ. ರಾಜ್ಯದ ಎಲ್ಲ ಜಿಲ್ಲೆಗಳ ತಜ್ಞರು ಆಯಾ ಜಿಲ್ಲೆಯ ಸಾಮಂತರು ಹಾಗೂ ಅವರ ಕೊಡುಗೆಗಳ ಕುರಿತು ಮಾತನಾಡಲಿದ್ದಾರೆ ಎಂದರು.

ಮೇ 4ರ ಬೆಳಿಗ್ಗೆ 10 ಗಂಟೆಗೆ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಾ.ಪ್ರಮೋದ ಗಾಯಿ ಸಮ್ಮೇಳನ ಉದ್ಘಾಟಿಸುವರು. ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಹಿರಿಯ ಇತಿಹಾಸಕಾರ ಡಾ.ಎಚ್.ಎಸ್.ಗೋಪಾಲರಾವ್ ಅಧ್ಯಕ್ಷತೆ ವಹಿಸುವರು. ಇತಿಹಾಸ ತಜ್ಞ ಅ.ಸುಂದರ ಅವರು ‘ಭಾರತೀಯ ಶಿಲ್ಪಗಳಲ್ಲಿ ಆಧ್ಯಾತ್ಮಿಕತೆ’ ಕುರಿತು ವಿಶೇಷ ಉಪನ್ಯಾಸ ನೀಡುವರು. ಎರಡು ದಿನಗಳಲ್ಲಿ ಒಟ್ಟು ಐದು ಗೋಷ್ಠಿಗಳು ನಡೆಯಲಿವೆ. ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷ ಡಾ.ದೇವರಕೊಂಡರೆಡ್ಡಿ, ಪ್ರಮುಖ ಇತಿಹಾಸ ತಜ್ಞರಾದ ಡಾ.ಎ.ಕೆ.ಶಾಸ್ತ್ರಿ, ಡಾ.ಶ್ರೀನಿವಾಸ ಪಾಡಿಗಾರ, ಡಾ.ಆರ್.ಎಂ.ಷಡಕ್ಷರಯ್ಯ, ಡಾ.ಶಿಲಾಧರ ಮುಗುಳಿ, ಡಾ.ರಾಜಾರಾಮ ಹೆಗಡೆ ಭಾಗವಹಿಸುವರು ಎಂದು ತಿಳಿಸಿದರು.

ADVERTISEMENT

ಸಾಂಸ್ಕೃತಿಕ ಸಂಭ್ರಮದಲ್ಲಿ ಕಲಾವಿದೆ ತುಳಸಿ ಹೆಗಡೆ ಇವಳಿಂದ ‘ಪರಿವರ್ತನೆ ಜಗದ ನಿಯಮ’ ಯಕ್ಷನೃತ್ಯ ರೂಪಕ, ಶಾಂಭವಿ ಶಂಕರ ಭಟ್ಟ ಇವಳಿಂದ ಕಥಾ ಕೀರ್ತನೆ, ನರಸಿಂಹ ಜೋಷಿ ಸಂಪೇಸರ ಅವರ ಹಿಂದೂಸ್ತಾನಿ ಗಾಯನ ನಡೆಯಲಿದೆ. ಮೇ 5ರ ಸಂಜೆ 5 ಗಂಟೆಗೆ ನಡೆಯುವ ಸಮಾರೋಪ ಕಾರ್ಯಕ್ರಮದಲ್ಲಿ ಇತಿಹಾಸಕಾರ ಲಕ್ಷ್ಮಣ ತೆಲಗಾವಿ ಅವರಿಗೆ ‘ಸೋದೆ ಸದಾಶಿವರಾಯ ಪ್ರಶಸ್ತಿ’ ಪ್ರದಾನ ಮಾಡಲಾಗುತ್ತದೆ. ಸ್ವಾದಿ ದಿಗಂಬರ ಜೈನ ಮಠಾಧೀಶ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಸಾನ್ನಿಧ್ಯ ವಹಿಸುವರು ಎಂದು ಹೇಳಿದರು. ಸಮ್ಮೇಳನ ಸಮಿತಿ ಪ್ರಮುಖರಾದ ಎನ್.ಎನ್.ಹೆಗಡೆ ಕಲಗದ್ದೆ, ಎನ್.ಎನ್.ಹೆಗಡೆ ವಾಜಗದ್ದೆ, ಸುಧೀರ ಪರಾಂಜಪೆ, ರತ್ನಾಕರ ಹೆಗಡೆ, ಶ್ರೀಧರ ಹೆಗಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.