ಹೊನ್ನಾವರ: ಪ್ರಾಕೃತಿಕವಾಗಿ ಸಮೃದ್ಧವಾಗಿರುವ ತಾಲ್ಲೂಕಿನ ಸಾಲ್ಕೋಡ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳಿಗೆ ಹೇಳಿಕೊಳ್ಳುವಂತ ಬರ ಏನಿಲ್ಲ. ಆದರೆ, ಗ್ರಾಮಸ್ಥರನ್ನು ಚಿರತೆ ಭಯ ಕಾಡುತ್ತಿದೆ.
ಗ್ರಾಮದ ಮನೆ ಮನೆಗಳಿಗೆ ನೀರು ಪೂರೈಸಲು ಅನುಷ್ಠಾನಗೊಳಿಸಲಾಗುತ್ತಿರುವ ಜಲಜೀವನ ಮಿಷನ್ ಕಾಮಗಾರಿಯ ಅಧ್ವಾನ ಜನರನ್ನು ನಿದ್ದೆಗೆಡುವಂತೆಯೂ ಮಾಡಿದೆ. ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳು, ಗುತ್ತಿಗೆದಾರರು ಹಾಗೂ ಅಧಿಕಾರಿಗಳ ನಡುವಿನ ತಿಕ್ಕಾಟ ಹೆಚ್ಚಿರುವುದು ಯೋಜನೆಯ ಸಮರ್ಪಕ ಅನುಷ್ಠಾನದ ಬಗ್ಗೆ ಶಂಕೆ ಮೂಡಿಸಿದೆ ಎಂಬುದು ಜನರ ದೂರು.
ವಿದ್ಯುತ್, ರಸ್ತೆ ಮೊದಲಾದ ಮೂಲಭೂತ ಸೌಕರ್ಯಗಳು ಗ್ರಾಮದಲ್ಲಿದೆ. ಅಡಿಕೆ, ತೆಂಗು ಮತ್ತಿತರ ತೋಟಗಾರಿಕಾ ಬೆಳೆಗಳು ಹೆಚ್ಚಿದ್ದರೆ ಅಲ್ಪ ಪ್ರಮಾಣದಲ್ಲಿ ಭತ್ತದ ಕೃಷಿಯೂ ಇಲ್ಲಿ ಇದೆ. 9,142 ಎಕರೆ ವಿಸ್ತೀರ್ಣವಿರುವ ಗ್ರಾಮದಲ್ಲಿ 4,237 ಜನರು ವಾಸವಿದ್ದಾರೆ. 57 ಮಜರೆಗಳ ಕಾರ್ಯವ್ಯಾಪ್ತಿಯನ್ನು ಹೊಂದಿರುವ ಗ್ರಾಮ ಪಂಚಾಯಿತಿಯಲ್ಲಿ 11 ಸದಸ್ಯರಿದ್ದಾರೆ.
ಗ್ರಾಮ ಪಂಚಾಯಿತಿಗೆ ಹೊಸ ಕಟ್ಟಡವಿದೆಯಾದರೂ ಕಂದಾಯ ಇಲಾಖೆಗೆ ಸಂಬಂಧಿಸಿದ ಗ್ರಾಮ ಚಾವಡಿ ಶಿಥಿಲಾವಸ್ಥೆಯಲ್ಲಿದ್ದು, ಈಗಲೋ ಆಗಲೋ ಬೀಳಬಹುದು ಎಂಬ ಆತಂಕದಲ್ಲಿದೆ.
ಕುಡಿಯುವ ನೀರು ಪೂರೈಸುವ ಜಲ ಜೀವನ್ ಮಿಷನ್ (ಜೆಜೆಎಂ) ಕಾಮಗಾರಿ ಅರೇಅಂಗಡಿಯಲ್ಲಿ ಸಮರ್ಪಕವಾಗಿ ನಡೆದಿಲ್ಲವೆಂಬ ದೂರು ಕೆಲವರ ನಡುವೆ ಕೆಸರೆರೆಚಾಟಕ್ಕೂ ಕಾರಣವಾಗಿದೆ.
‘ಬೆಟ್ಟಸಾಲು ಹೆಚ್ಚಿರುವ ತೊಳಸಾಣಿ, ಅಟಾರ,ದರ್ಬೆಜೆಡ್ಡಿ ಮೊದಲಾದ ಮಜರೆಗಳ ಕೆಲ ಮನೆಗಳಿಗೆ ಮಳೆಗಾಲದಲ್ಲಿ ಸಂಪರ್ಕ ವ್ಯವಸ್ಥೆಗೆ ತೊಡಕಾಗುತ್ತಿದೆ. ಕಾಡು ನಾಶ, ಅರಣ್ಯ ಪ್ರದೇಶದಲ್ಲಿ ಜೆಸಿಬಿ ಮೊರೆತ ಮೊದಲಾದ ಕಾರಣಗಳಿಂದ ನಾಡಿನೆಡೆಗೆ ದಾಳಿಯಿಡುವ ಕಾಡುಪ್ರಾಣಿಗಳು ಸಂಖ್ಯೆ ಹೆಚ್ಚಾಗುತ್ತಿದ್ದು ಗ್ರಾಮದಲ್ಲಿನ ಸಾಕುಪ್ರಾಣಿಗಳನ್ನು ಚಿರತೆಗಳು ಹೊತ್ತೊಯ್ಯುವ ಘಟನೆಗಳು ಆಗಾಗ ನಡೆಯುತ್ತಿವೆ.ಮನುಷ್ಯರ ಮೇಲೂ ಚಿರತೆ ದಾಳಿ ನಡೆದಿದೆ’ ಎಂದು ಗ್ರಾಮಸ್ಥರು ಅಳಲು ತೋಡಿಕೊಳ್ಳುತ್ತಾರೆ.
‘ಚಿರತೆಗಳು ಮನೆ ಬಾಗಿಲಿಗೆ ಬಂದು ಸಾಕುಪ್ರಾಣಿಗಳನ್ನು ತಿಂದುಹಾಕುತ್ತಿವೆ.ಈಚೆಗೆ ಸಂತೆಗುಳಿ ಸಮೀಪ ಬೈಕ್ ಮೇಲೆ ಬರುತ್ತಿದ್ದಾಗ ನನ್ನ ಮೇಲೆ ಚಿರತೆ ದಾಳಿ ಮಾಡಿತು. ಹೇಗೋ ತಪ್ಪಿಸಿಕೊಂಡು ಬಂದೆ. ಮುಂದೆಯೂ ಆತಂಕ ತಪ್ಪಿದ್ದಲ್ಲ’ ಎಂದು ಗ್ರಾಮದ ಸತ್ಯನಾರಾಯಣ ಹೆಗಡೆ ಆತಂಕ ವ್ಯಕ್ತಪಡಿಸಿದರು.
ಜೆಜೆಎಂ ಪೈಪ್‌ಲೈನ್ ನೀರು ಪೂರೈಕೆಯಲ್ಲಿ ಸಮಸ್ಯೆ ತಲೆದೋರಿರುವುದರಿಂದ ಸದ್ಯ ಗ್ರಾಮ ಪಂಚಾಯಿತಿ ವತಿಯಿಂದ ಮಾಡಲಾಗಿದ್ದ ಹಳೆಯ ವ್ಯವಸ್ಥೆಯಲ್ಲೇ ಜನರಿಗೆ ಕುಡಿಯುವ ನೀರು ಪೂರೈಸಲಾಗುತ್ತಿದೆಬಾಬುರಾಯ ನಾಯ್ಕ ಪಿಡಿಒ ಸಾಲ್ಕೋಡ ಗ್ರಾಮ ಪಂಚಾಯಿತಿ
ಅವೈಜ್ಞಾನಿಕ ಕೆಲಸ: ಗ್ರಾ.ಪಂ.ನಿಂದ ಪತ್ರ
‘ಜೆಜೆಎಂ ಯೋಜನೆಯಡಿ ಅರೆಅಂಗಡಿಯಲ್ಲಿ ನಿರ್ಮಾಣವಾಗಿರುವ ಟ್ಯಾಂಕ್ ಹಾಗೂ ಅದಕ್ಕೆ ನೀರು ಪೂರೈಸುವ ಪೈಪ್‌ಲೈನ್ ಕಾಮಗಾರಿ ಅವೈಜ್ಞಾನಿಕವಾಗಿದ್ದು ಇದರಿಂದ ಕೆಳಭಾಗದ 51 ಮನೆಗಳಿಗೆ ನೀರಿನ ಪೂರೈಕೆ ಸಾಧ್ಯವಾಗುತ್ತಿಲ್ಲ. ಇದನ್ನು ಸರಿಪಡಿಸುವವರೆಗೆ ಇದರ ನಿರ್ವಹಣೆಯನ್ನು ನಾವು ವಹಿಸಿಕೊಳ್ಳುವುದಿಲ್ಲ ಎಂದು ಗ್ರಾಮ ಪಂಚಾಯಿತಿಯಿಂದ ಜಿಲ್ಲಾ ಪಂಚಾಯಿತಿ ಗ್ರಾಮೀಣ ಕುಡಿಯುವ ನೀರು ವಿಭಾಗದ ಕಚೇರಿಗೆ ಪತ್ರ ಬರೆಯಲಾಗಿದೆ’ ಎಂದು ಗ್ರಾಮ ಪಂಚಾಯಿತಿ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.