ADVERTISEMENT

ಕಾರವಾರ: ತೋಟಗಾರಿಕಾ ನರ್ಸರಿಯಲ್ಲಿ ಜೀವಕಳೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2023, 4:36 IST
Last Updated 8 ಜುಲೈ 2023, 4:36 IST
ತೋಟಗಾರಿಕೆ ಇಲಾಖೆಯ ಸಸ್ಯಪಾಲನಾ ಕ್ಷೇತ್ರದಲ್ಲಿ ಬೆಳೆಸಲಾದ ಅಡಿಕೆ ಸಸಿಗಳು
ತೋಟಗಾರಿಕೆ ಇಲಾಖೆಯ ಸಸ್ಯಪಾಲನಾ ಕ್ಷೇತ್ರದಲ್ಲಿ ಬೆಳೆಸಲಾದ ಅಡಿಕೆ ಸಸಿಗಳು   

ಗಣಪತಿ ಹೆಗಡೆ

ಕಾರವಾರ: ಮಳೆಗಾಲ ಆರಂಭಗೊಳ್ಳುತ್ತಿದ್ದಂತೆ ಸಸಿಗಳ ನಾಟಿ ಕಾರ್ಯ ಜೋರಾಗುತ್ತದೆ. ಇದೇ ವೇಳೆ ರೈತರ ಅನುಕೂಲಕ್ಕೆ ಕಡಿಮೆ ದರದಲ್ಲಿ ವಿತರಿಸಲು ತೋಟಗಾರಿಕಾ ಇಲಾಖೆ ಸಸಿಗಳನ್ನು ಬೆಳೆಸಿ ಸಿದ್ಧಪಡಿಸಿಕೊಂಡಿದೆ.

ಜಿಲ್ಲೆಯ 11 ಕಡೆಗಳಲ್ಲಿ ತೋಟಗಾರಿಕಾ ಇಲಾಖೆಯ ಸಸ್ಯಪಾಲನಾ ಕೇಂದ್ರವಿದೆ. ಅವುಗಳಲ್ಲಿ ಈ ಬಾರಿ ವಿವಿಧ ಬಗೆಯ ಸುಮಾರು 3,99,366 ಸಸಿಗಳನ್ನು ಬೆಳೆಸಲಾಗಿದೆ. ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಳುಮೆಣಸು, ತೆಂಗು, ಗೇರು, ಹಣ್ಣಿನ ಬೆಳೆಗಳಾದ ಮಾವು, ಚಿಕ್ಕು, ಸಾಂಬಾರ ಬೆಳೆಗಳಾದ ದಾಲ್ಚಿನ್ನಿ, ಜಾಯಿಕಾಯಿ, ನಿಂಬೆ ಸೇರಿದಂತೆ ಹಲವು ಬೆಳೆಯ ಸಸಿಗಳೂ ಇವೆ.

ADVERTISEMENT

ಕಾರವಾರ ತಾಲ್ಲೂಕಿನ ತೊಡೂರು, ಅಂಕೋಲಾ ತಾಲ್ಲೂಕಿನ ಬಾಸಗೋಡ, ಹಿಚ್ಕಡ, ಶಿರಸಿಯ ತೆರಕನಳ್ಳಿ, ಯಲ್ಲಾಪುರದ ಹಿತ್ತಲಕಾರಗದ್ದೆ, ಸಿದ್ದಾಪುರದ ಹೊಸೂರು, ಜೊಯಿಡಾ ತಾಲ್ಲೂಕಿನ ರಾಮನಗರ, ಭಟ್ಕಳ ತಾಲ್ಲೂಕಿನ ಬೆಳಕೆ, ಕುಮಟಾ ಪಟ್ಟಣದಲ್ಲಿ ಸಸ್ಯಪಾಲನಾ ಕೇಂದ್ರಗಳಿವೆ.

‘ಸಾಮಾನ್ಯವಾಗಿ ಜಿಲ್ಲೆಯಲ್ಲಿ ಹೆಚ್ಚು ಬೆಳೆ ಕ್ಷೇತ್ರ ಹೊಂದಿರುವ ಕಾರಣಕ್ಕೆ ಅಡಿಕೆ, ಕಾಳುಮೆಣಸು, ತೆಂಗು ಹೆಚ್ಚು ಬೇಡಿಕೆ ಪಡೆದುಕೊಳ್ಳುತ್ತವೆ. ಸಾಂಬಾರ ಬೆಳೆಗಳಾಗಿರುವ ಜತೆಗೆ ರೈತರು ಉಪಬೆಳೆಯಾಗಿ ಪರಿಗಣಿಸುವ ಜಾಯಿಕಾಯಿ, ಹಲಸು, ನಿಂಬೆ ಇನ್ನಿತರ ಬಗೆಯ ಸಸಿಗಳನ್ನೂ ಬೆಳೆಸಿ ಬೇಡಿಕೆಗೆ ತಕ್ಕಂತೆ ಹಂಚಿಕೆ ಮಾಡಲಾಗುತ್ತದೆ’ ಎಂದು ತೋಟಗಾರಿಕಾ ಇಲಾಖೆಯ ನರ್ಸರಿ ವಿಭಾಗದ ಅಧಿಕಾರಿ ಕೆ.ಎಂ.ರಾಮಚಂದ್ರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಖಾಸಗಿ ನರ್ಸರಿಗಳ ದರಕ್ಕಿಂತ ಕಡಿಮೆ ಬೆಲೆಗೆ ರೈತರಿಗೆ ಗುಣಮಟ್ಟದ ಸಸಿಗಳನ್ನು ಪೂರೈಸುವದು ಇಲಾಖೆಯ ಜವಾಬ್ದಾರಿಯಾಗಿದ್ದು, ಅದನ್ನು ನಿಭಾಯಿಸಲಾಗುತ್ತದೆ. ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆ ಅಡಿ ತೋಟ ವಿಸ್ತರಣೆಗೆ ಸಹಾಯಧನವೂ ಲಭಿಸುತ್ತದೆ’ ಎಂದು ಹೇಳಿದರು.

ರೈತರು ಸಮೀಪದ ಸಸ್ಯಪಾಲನಾ ಕ್ಷೇತ್ರಕ್ಕೆ ಭೇಟಿ ನೀಡಿ ಅಥವಾ ತೋಟಗಾರಿಕಾ ಇಲಾಖೆ ಕಚೇರಿಗೆ ಭೇಟಿ ನೀಡಿ ಸಸಿ ಪಡೆದುಕೊಳ್ಳಬಹುದು.
ಕೆ.ಎಂ.ರಾಮಚಂದ್ರ, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ

‘ಏಳೆಂಟು ತಿಂಗಳುಗಳ ಹಿಂದೆಯೇ ಗಿಡಗಳನ್ನು ಬೆಳೆಸಲು ಆರಂಭಿಸಲಾಗುತ್ತದೆ. ಪಾಲಿಹೌಸ್‍ನಲ್ಲಿ ಸಸಿಗಳನ್ನು ಆರೈಕೆ ಮಾಡುತ್ತೇವೆ. ಇದರಿಂದ ರೋಗಬಾಧೆ ತಪ್ಪಿಸಲು ಸಾಧ್ಯವಾಗುತ್ತದೆ’ ಎಂದೂ ತಿಳಿಸಿದರು.

ಗೇರು ಸಸಿಗಳಿಗೆ ಬೇಡಿಕೆ ಕುಸಿತ

‘ತೋಟಗಾರಿಕೆ ಬೆಳೆಗಳ ಪೈಕಿ ಅಡಿಕೆ ಕಾಳುಮೆಣಸು ಸಸಿಗಳಿಗೆ ಹೆಚ್ಚು ಬೇಡಿಕೆ ಇದೆ. ಆದರೆ ಗೇರು ಬೆಳೆ ಕರಾವಳಿಯೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸಾಕಷ್ಟಿದ್ದರೂ ಗೇರು ಸಸಿಗಳಿಗೆ ಬೇಡಿಕೆ ಕಡಿಮೆಯಾಗುತ್ತಿದೆ’ ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು. ‘ಇಲಾಖೆಯಿಂದ ಬೆಳೆಸಲಾಗುವ ಗೇರು ಸಸಿಗಳಲ್ಲಿ ಹೆಚ್ಚಿನವು ಕಸಿ ಮಾಡಲಾದ ಸಸಿಗಳು. ಇವು ಕೂಡ ಉತ್ತಮ ಗುಣಮಟ್ಟದಿಂದ ಕೂಡಿವೆ. ಆದರೂ ಇವುಗಳ ಖರೀದಿಗೆ ರೈತರು ಆಸಕ್ತಿ ತೋರಿಸುತ್ತಿಲ್ಲ’ ಎಂದು ಹೇಳಿದರು.

ಅಂಕಿ–ಅಂಶ

ಕಾಳುಮೆಣಸು ಸಸಿಗಳು : 1,40,203

ಅಡಿಕೆ ಸಸಿಗಳು : 1,20,368

ಗೇರು ಗಿಡಗಳು : 37,791

ತೆಂಗಿನ ಗಿಡಗಳು : 29,762

ಮಾವಿನ ಗಿಡ : 25,235

ಕಾರವಾರದ ತೊಡೂರಿನಲ್ಲಿರುವ ಸಸ್ಯಪಾಲನಾ ಕ್ಷೇತ್ರದ ಪಾಲಿಹೌಸ್‍ನಲ್ಲಿ ಬೆಳೆಸಿದ ಸಸಿಗಳನ್ನು ತೋಟಗಾರಿಕೆ ಇಲಾಖೆ ಅಧಿಕಾರಿಗಳು ವೀಕ್ಷಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.