ADVERTISEMENT

ಅಂಕೋಲಾ: ಅಜ್ಜಿಕಟ್ಟಾದ ಗುಡ್ಡದ ಮೇಲೆ ಮನೆಗಳು

‘ಗುಡ್ಡ ಕುಸಿಯದಂತೆ ಕ್ರಮ ಕೈಗೊಳ್ಳಿ..’

ಮಂಜುನಾಥ ಇಟಗಿ
Published 11 ಜೂನ್ 2019, 19:31 IST
Last Updated 11 ಜೂನ್ 2019, 19:31 IST
ಅಂಕೋಲಾ ತಾಲ್ಲೂಕಿನ ಅಜ್ಜಿಕಟ್ಟಾದಲ್ಲಿ ಚತುಷ್ಪಥ ಹೆದ್ದಾರಿ ಕಾಮಗಾರಿಯಿಂದ ಅಪಾಯದ ಅಂಚಿಗೆ ಸಿಲುಕಿರುವ ಮನೆಗಳು
ಅಂಕೋಲಾ ತಾಲ್ಲೂಕಿನ ಅಜ್ಜಿಕಟ್ಟಾದಲ್ಲಿ ಚತುಷ್ಪಥ ಹೆದ್ದಾರಿ ಕಾಮಗಾರಿಯಿಂದ ಅಪಾಯದ ಅಂಚಿಗೆ ಸಿಲುಕಿರುವ ಮನೆಗಳು   

ಅಂಕೋಲಾ: ‘ಮಳೆ ಬಂದರೆ ಗುಡ್ಡ ಕುಸಿಯಬಹುದು, ಅದು ನಮ್ಮ ಬದುಕನ್ನೇ ಕಸಿಯಬಹುದು. ಆಗಬಹುದಾದ ಅಪಾಯವನ್ನು ತಡೆಯಿರಿ...’

ಪಟ್ಟಣದ ಅಜ್ಜಿಕಟ್ಟಾದಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಅಂಚಿನಲ್ಲಿ ಗುಡ್ಡದ ಮೇಲಿರುವ ಕುಟುಂಬಗಳ ಅಳಲು ಇದು.

ಕಾಮಗಾರಿಯ ಗುತ್ತಿಗೆ ಪಡೆದಿರುವ ಐಆರ್‌ಬಿಯ ಯಂತ್ರಗಳು ಇಲ್ಲಿ ಹೆದ್ದಾರಿ ನಿರ್ಮಿಸಲು ಗುಡ್ಡವನ್ನು ಬಗೆದವು. ಈ ಗುಡ್ಡದಲ್ಲಿ 40– 50 ವರ್ಷಗಳಿಂದ ಅತಿಕ್ರಮಣ ಮಾಡಿಕೊಂಡು ನಾಲ್ಕೈದು ಕುಟುಂಬಗಳು ಜೀವನ ಸಾಗಿಸುತ್ತಿವೆ. ಕಾಮಗಾರಿಯ ಸಂದರ್ಭಈ ಕುಟುಂಬಗಳಿಗೆ ಮಾನವೀಯ ನೆಲೆಯಲ್ಲಿಯಾವುದೇ ಬದಲಿ ವ್ಯವಸ್ಥೆ ಮಾಡಿಲ್ಲ ಎಂಬುದು ಸ್ಥಳೀಯರ ಬೇಸರವಾಗಿದೆ. ಜೋರು ಮಳೆಯಾದಾಗ ಗುಡ್ಡ ಕುಸಿಯದಿದ್ದರೆ ಸಾಕು ಎಂಬುದು ಇಲ್ಲಿನ ನಿವಾಸಿಗಳ ಪ್ರಾರ್ಥನೆಯಾಗಿದೆ.

ADVERTISEMENT

ಕಳೆದ ವರ್ಷ ಕುಮಟಾದ ತಂಡ್ರಕುಳಿಯಲ್ಲಿ ನಡೆದ ಭೂಕುಸಿತದ ದುರಂತದ ಕರಾಳ ನೆನಪು ಜನರ ಮನಸ್ಸಿನಿಂದ ಇನ್ನೂ ಮಾಸಿಲ್ಲ. ಅಂಥದ್ದೇ ಆತಂಕದಲ್ಲಿಅಜ್ಜಿಕಟ್ಟಾದ ಜನರೂ ದಿನ ಕಳೆಯುತ್ತಿದ್ದಾರೆ.

ಅತಿಕ್ರಮಣ ಜಾಗವಾದ ಕಾರಣ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೂ ಯಾವುದೇ ಪರಿಹಾರ ನೀಡಿಲ್ಲ. ಮನೆಯ ಅಂಚಿನವರೆಗೆ ಗುಡ್ಡ ಕೊರೆದು ನಿಲ್ಲಿಸಲಾಗಿದೆ. ಅನಾಹುತವಾಗುವ ಮೊದಲು ಬಡ ಕುಟುಂಬಗಳಿಗೆ ಜಿಲ್ಲಾಡಳಿತದಿಂದ ಸೂರಿನ ವ್ಯವಸ್ಥೆ ಕಲ್ಪಿಸಬೇಕು ಎನ್ನುವುದು ಸ್ಥಳೀಯ ನಿವಾಸಿಗಳ ಬೇಡಿಕೆಯಾಗಿದೆ.

‘ನಾವು ಹಲವಾರು ವರ್ಷಗಳಿಂದ ಇಲ್ಲಿ ಗುಡಿಸಲು ಕಟ್ಟಿಕೊಂಡು ವಾಸ ಮಾಡುತ್ತಿದ್ದೇವೆ. ರಸ್ತೆ ವಿಸ್ತರಣೆಯಬಳಿಕ ಗುಡ್ಡದ ಮಣ್ಣು ಕುಸಿಯಲಾರಂಭಿಸಿದೆ. ಜಿಲ್ಲಾಧಿಕಾರಿ ನಮ್ಮ ನೆರವಿಗೆ ಬರಬೇಕು. ರಾತ್ರಿಯೆಲ್ಲ ನಿದ್ದೆಬಿಟ್ಟು ಭಯದಲ್ಲಿ ನಾವು, ನಮ್ಮ ಮಕ್ಕಳುಕಾಲ ಕಳೆಯುವಂತಾಗಿದೆ. ಇಂತಹ ಪರಿಸ್ಥಿತಿ ಮತ್ಯಾರಿಗೂ ಬಾರದಿರಲಿ’ ಎನ್ನುತ್ತಾರೆ ಸ್ಥಳೀಯರಾದವಿಶ್ರಾಂತಿ ಕಾತ್ಯಾಯಣಿಕರ.

‘ಐಆರ್‌ಬಿಕಾಮಗಾರಿಗಳಿಂದ ಹಲವಾರು ಅವಘಡಗಳು ಈ ತಾಲ್ಲೂಕಿನಲ್ಲಿ ನಡೆದಿವೆ. ಕಳೆದ ವರ್ಷ ಕುಮಟಾದ ತಂಡ್ರಕುಳಿಯಲ್ಲಿ ಗುಡ್ಡ ಕುಸಿತದ ಅವಘಡ ಇನ್ನೂಮರೆತಿಲ್ಲ. ಜಿಲ್ಲಾಡಳಿತವುಬಡ ಕುಟುಂಬದ ನೆರವಿಗೆ ಬಂದು ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಬೇಕು’ ಎನ್ನುವುದು ವಕೀಲ ಉಮೇಶ ನಾಯ್ಕ ಅವರ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.