ADVERTISEMENT

ಹುಬ್ಬಳ್ಳಿ–ಅಂಕೋಲಾ ರೈಲು ಮಾರ್ಗ: ಅಧಿಕಾರಿಗಳಿಂದ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2023, 15:44 IST
Last Updated 14 ಜೂನ್ 2023, 15:44 IST
ಹುಬ್ಬಳ್ಳಿ–ಅಂಕೋಲಾ ರೈಲು ಮಾರ್ಗದ ಸರ್ವೇಗೆ ಆಗಮಿಸಿರುವ ರೈಲ್ವೆ ಇಲಾಖೆಯ ಸರ್ವೇ ವಿಭಾಗದ ಪ್ರಧಾನ ವ್ಯವಸ್ಥಾಪಕ ಕಿಶೋರ್‌ಕುಮಾರ್ ಅವರ ಜತೆ ಶಾಸಕ ಶಿವರಾಮ ಹೆಬ್ಬಾರ ಚರ್ಚಿಸಿದರು.
ಹುಬ್ಬಳ್ಳಿ–ಅಂಕೋಲಾ ರೈಲು ಮಾರ್ಗದ ಸರ್ವೇಗೆ ಆಗಮಿಸಿರುವ ರೈಲ್ವೆ ಇಲಾಖೆಯ ಸರ್ವೇ ವಿಭಾಗದ ಪ್ರಧಾನ ವ್ಯವಸ್ಥಾಪಕ ಕಿಶೋರ್‌ಕುಮಾರ್ ಅವರ ಜತೆ ಶಾಸಕ ಶಿವರಾಮ ಹೆಬ್ಬಾರ ಚರ್ಚಿಸಿದರು.   

ಯಲ್ಲಾಪುರ: ಹುಬ್ಬಳ್ಳಿ–ಅಂಕೋಲಾ ರೈಲು ಮಾರ್ಗದ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಪರಿಶೀಲನೆ ನಡೆಸಲಾಗುತ್ತಿದ್ದು ರೈಲ್ವೆ ಇಲಾಖೆಯ ತಂಡ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಬುಧವಾರ ಪರಿಶೀಲನೆ ನಡೆಸಿತು.

ರೈಲ್ವೆ ಇಲಾಖೆಯ ಸರ್ವೇ ವಿಭಾಗದ ಪ್ರಧಾನ ವ್ಯವಸ್ಥಾಪಕ ಕಿಶೋರ್‌ಕುಮಾರ್ ಅವರ ನೇತೃತ್ವದಲ್ಲಿ ಐದು ಜನ ಹಿರಿಯ ಅಧಿಕಾರಿಗಳು ಸೇರಿದಂತೆ 15 ಸದಸ್ಯರಿದ್ದ ತಂಡ ತಾಲೂಕಿನಲ್ಲಿ ರೈಲ್ವೆ ಮಾರ್ಗ ಸಾಗಲಿರುವ ಸಂಭವನೀಯ ಸ್ಥಳಗಳಿಗೆ ಭೇಟಿ ನೀಡಿ ಸರ್ವೆ ಕಾರ್ಯ ನಡೆಸಿತು.

ರೈಲ್ವೆ ಇಲಾಖೆಯ ಸಮೀಕ್ಷಾ ತಂಡ ಪಟ್ಟಣದ ನಾರಾಯಣಪುರದ ಹತ್ತಿರ ಈಗಾಗಲೇ ಮಾರ್ಗ ಸಾಗುವ ದಾರಿ ಎಂದು ಗುರುತಿಸಲಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತು. ನಂತರ ಕಿರವತ್ತಿ ಅರಣ್ಯ ವಲಯದ ಡೋಮಗೇರಿ ಮತ್ತು ಒಂಟಗಿಮನೆ ಹಾಗೂ ಇಡಗುಂದಿಗೆ ಭೇಟಿ ನೀಡಿ ಪರಿಶೀಲಿಸಿತು.

ADVERTISEMENT

ಶಾಸಕ ಶಿವರಾಮ ಹೆಬ್ಬಾರ ಡೋಮಗೇರಿ ಕ್ರಾಸ್ ಬಳಿ ಕಿಶೋರ್‌ಕುಮಾರ್ ನೇತೃತ್ವದ ತಂಡವನ್ನು ಭೇಟಿಯಾಗಿ ಹುಬ್ಬಳ್ಳಿ–ಅಂಕೋಲಾ ರೈಲು ಮಾರ್ಗದ ಅಗತ್ಯವನ್ನು ವಿವರಿಸಿದರು. ಕಿರವತ್ತಿ ವಲಯ ಅರಣ್ಯ ವ್ಯಾಪ್ತಿಯಲ್ಲಿ ಆನೆಗಳ ದಾಟುಸಾಲು ಎಂದು ಗುರುತಿಸಿದ ಸ್ಥಳದಲ್ಲಿ ಆನೆ ಕಾರಿಡಾರ್ ನಿರ್ಮಾಣದ ಬಗ್ಗೆ ಅಗತ್ಯ ಸಲಹೆ ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.