ADVERTISEMENT

ಮಾನವತಾವಾದಿ ಲೇಖಕ ಬೆಟಗೇರಿ ಕೃಷ್ಣಶರ್ಮ: ಸಾಹಿತಿ ರಾಘವೇಂದ್ರ ಪಾಟೀಲ ಅಭುಮತ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 4:56 IST
Last Updated 16 ಅಕ್ಟೋಬರ್ 2025, 4:56 IST
ದಾಂಡೇಲಿಯ ಅಂಬೇವಾಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಬೆಟಗೇರಿ ಕೃಷ್ಣಶರ್ಮ ಅವರ ಕಥಾ ಪ್ರಪಂಚ ಹಾಗೂ ಕಾವ್ಯ ಗಾಯನ ಕಾರ್ಯಕ್ರಮದಲ್ಲಿ ಸಾಹಿತಿ ರಾಘವೇಂದ್ರ ಪಾಟೀಲ ಮಾತನಾಡಿದರು
ದಾಂಡೇಲಿಯ ಅಂಬೇವಾಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಬೆಟಗೇರಿ ಕೃಷ್ಣಶರ್ಮ ಅವರ ಕಥಾ ಪ್ರಪಂಚ ಹಾಗೂ ಕಾವ್ಯ ಗಾಯನ ಕಾರ್ಯಕ್ರಮದಲ್ಲಿ ಸಾಹಿತಿ ರಾಘವೇಂದ್ರ ಪಾಟೀಲ ಮಾತನಾಡಿದರು   

ದಾಂಡೇಲಿ: ‘ಮಾತೃತ್ವವನ್ನೇ ಜೀವಾಳವಾಗಿಸಿಕೊಂಡು ಗಟ್ಟಿ ಸಾಹಿತ್ಯವನ್ನು ಸಾರಸ್ವತ ಲೋಕಕ್ಕೆ ನೀಡಿದ ಮಹಾನ್ ಮಾನವತಾವಾದಿ ಬೆಟಗೇರಿ ಕೃಷ್ಣಶರ್ಮ’ ಎಂದು ಧಾರವಾಡದ ಲೇಖಕ ರಾಘವೇಂದ್ರ ಪಾಟೀಲ ಹೇಳಿದರು.

ಅಂಬೇವಾಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಮತ್ತು ಬೆಳಗಾವಿಯ ಡಾ. ಬೆಟಗೇರಿ ಕೃಷ್ಣ ಶರ್ಮ ಟ್ರಸ್ಟ್ ಸಹಯೋಗದಲ್ಲಿ ಬುಧವಾರ ನಡೆದ ‘ಬೆಟಗೇರಿ ಕೃಷ್ಣ ಶರ್ಮ ಅವರ ಕಥಾ ಪ್ರಪಂಚ: ಸರ್ಟಿಫಿಕೇಟ್ ಕೋರ್ಸ್’ ಮತ್ತು ‘ಆನಂದಕಂದ ಕಾವ್ಯ ಗಾಯನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಶರ್ಮರು ಅವರು ಗಾಂಧೀಜಿಯಿಂದ ಪ್ರಭಾವಿತರಾಗಿ ಉದಾರವಾದಿ ಪ್ರತಿಪಾದಕರಾಗಿ ಇಪ್ಪತ್ತನೇ ಶತಮಾನದ ಕಾವ್ಯ, ಸಣ್ಣ ಕಥೆ, ಕಾದಂಬರಿ, ಸಂಶೋಧನೆ ಹಾಗೂ ಜಾನಪದ ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮಾಡಿ ಕರ್ನಾಟಕ ಸಂಸ್ಕೃತಿಯ ನಿರ್ಮಾಪಕರಲ್ಲಿ ಒಬ್ಬರಾಗಿದ್ದಾರೆ’ ಎಂದರು.

ADVERTISEMENT

ಟ್ರಸ್ಟ್ ಅಧ್ಯಕ್ಷೆ ವಿನಯಾ ಒಕ್ಕುಂದ ಮಾತನಾಡಿ, ‘ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಅವಗಣನೆಗೆ ಈಡಾದ ಬಹುದೊಡ್ಡ ಲೇಖಕರು, ಅವರ ಸಾಹಿತ್ಯ ಕೃತಿಗಳನ್ನು ಹಾಗೂ ಚಿಂತನೆಗಳನ್ನು ಯುವ ಜನಾಂಗಕ್ಕೆ ತಲುಪಿಸುವ ಕಾರ್ಯವನ್ನು ಟ್ರಸ್ಟ್ ಕೈಗೊಳ್ಳುತ್ತಿದೆ’ ಎಂದರು.

ಪ್ರಾಂಶುಪಾಲ ಎಂ.ಡಿ. ಒಕ್ಕುಂದ ಅಧ್ಯಕ್ಷತೆ ವಹಿಸಿ, ‘ಪಶ್ಚಿಮ ಮುಖಿ ಹಾಗೂ ಮತ್ತು ಸಂಸ್ಕೃತ ಮುಖಿ ವಿವೇಕದಿಂದ ಬೆಳೆದ ಕನ್ನಡ ಸಾಹಿತ್ಯ ವಿಮರ್ಶೆ ಅಪ್ಪಟ ದೇಶಿ ಅನುಭವ ಹಾಗೂ ಸಂವೇದನೆಯನ್ನು ಮೌಲ್ಯ ಮಾಪನ ಮಾಡುವಲ್ಲಿ ಕನ್ನಡ ಸಾಹಿತ್ಯ ಸೋತಿದೆ’ ಎಂದು ಅಭಿಪ್ರಾಯಪಟ್ಟರು.

ಧಾರವಾಡದ ಆನಂದಕಂದ ಕಲಾ ಬಳಗದ ರಾಜು ಕುಲಕರ್ಣಿ ತಂಡದವರು ಆನಂದಕಂದರ ಪ್ರಸಿದ್ಧ ಗೀತೆಗಳನ್ನು ಹಾಡಿದರು. ರಾಘವೇಂದ್ರ ಪಾಟೀಲ ಹಾಗೂ ಆನಂದಕಂದ ಕಲಾ ಬಳಗದ ಕಲಾವಿದರನ್ನು ಸನ್ಮಾನಿಸಲಾಯಿತು.

ವರ್ಷಾ ಕೋಲೆ ಆನಂದಕಂದರ ಭಾವಗೀತೆ ಹಾಡಿದಳು. ಪದ್ಮಾವತಿ ಅನಸ್ಕರ, ವಿದ್ಯಾರ್ಥಿನಿ ಶಾರದಾ ಭೋವಿ, ಪ್ರಾಧ್ಯಾಪಕ ಸುರೇಶ ವಾಲಿಕಾರ, ಉಮೇಶ ಗೌಡ ಪಾಟೀಲ, ನಿಶಾತ್ ಶರೀಫ, ಗೀತಾ ಕೋಟೆನ್ನವರ ಮತ್ತು ಚಂದ್ರಶೇಖರ ಲಮಾಣಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.