ADVERTISEMENT

ಉತ್ತರ ಕನ್ನಡ: ದೇಗುಲಗಳಲ್ಲಿ ಮತ್ತೆ ಮೊಳಗಿದ ಘಂಟಾನಾದ

ಜಿಲ್ಲೆಯ ವಿವಿಧ ದೇವಸ್ಥಾನಗಳಿಗೆ ಸಾಮಾನ್ಯ ಸಂಖ್ಯೆಯಲ್ಲಿ ಭಕ್ತರ ಭೇಟಿ

​ಪ್ರಜಾವಾಣಿ ವಾರ್ತೆ
Published 5 ಜುಲೈ 2021, 15:55 IST
Last Updated 5 ಜುಲೈ 2021, 15:55 IST
ಗೋಕರ್ಣ ಮಹಾಬಲೇಶ್ವರ ದೇವಸ್ಥಾನದಲ್ಲಿ ನಂದಿ ಮಂಟಪದಿಂದಲೇ ದೇವರ ದರ್ಶನ ಪಡೆದ ಭಕ್ತರು.  
ಗೋಕರ್ಣ ಮಹಾಬಲೇಶ್ವರ ದೇವಸ್ಥಾನದಲ್ಲಿ ನಂದಿ ಮಂಟಪದಿಂದಲೇ ದೇವರ ದರ್ಶನ ಪಡೆದ ಭಕ್ತರು.     

ಕಾರವಾರ: ಕೋವಿಡ್ ಪ್ರಕರಣಗಳು ಇಳಿಕೆಯಾಗಿರುವ ಕಾರಣ ದೇಗುಲಗಳನ್ನು ತೆರೆಯಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಹೀಗಾಗಿ ಹಲವು ದಿನಗಳ ನಂತರ ದೇಗುಲಗಳಿಗೆ ಸೋಮವಾರ ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದರು. ಅನ್‌ಲಾಕ್‌ ಬಳಿಕ ಮೊದಲ ದಿನ ಜಿಲ್ಲೆಯ ದೇಗುಲಗಳಲ್ಲಿ ವ್ಯವಸ್ಥೆ ಹೇಗಿತ್ತು ಎಂಬ ಬಗ್ಗೆ ಈ ವರದಿಯಲ್ಲಿ ಮಾಹಿತಿಯಿದೆ.

ಗೋಕರ್ಣ: ಗೋಕರ್ಣ ಮಹಾಬಲೇಶ್ವರ ದೇವಸ್ಥಾನದಲ್ಲಿ ಸೋಮವಾರ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ದೊರೆತಿದೆ. 500ಕ್ಕೂ ಹೆಚ್ಚು ಭಕ್ತರು ದರ್ಶನ ಪಡೆದು ಕೃತಾರ್ಥರಾದರು. ಕೋವಿಡ್ ನಿಯಮ ಪಾಲಿಸಿ ಬಂದ ಭಕ್ತರಿಗೆ ಮಾತ್ರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು. ಭಕ್ತರಿಗೆ ಗರ್ಭಗುಡಿ ಪ್ರವೇಶ ಮತ್ತು ಸೇವೆಗೆ ಅವಕಾಶ ನೀಡಲಿಲ್ಲ.

ದೇವಸ್ಥಾನದ ಪಶ್ಚಿಮ ದ್ವಾರದಲ್ಲಿ ಭಕ್ತರಿಗೆ ಸ್ಯಾನಿಟೈಸ್‌ ಮಾಡಲಾಯಿತು. ಭಕ್ತರು ನಂದಿ ಮಂಟಪದವರೆಗೆ ಹೋಗಲು ಅವಕಾಶವಿದ್ದು, ಅಲ್ಲಿಂದಲೇ ಆತ್ಮಲಿಂಗದ ದರ್ಶನ ಪಡೆಯಬೇಕಾಗಿದೆ. ಉಳಿದ ದೇವಸ್ಥಾನಕ್ಕಿಂತ ಗೋಕರ್ಣ ದೇವಸ್ಥಾನದಲ್ಲಿ ಭಿನ್ನವಾಗಿದ್ದು, ಭಕ್ತರಿಗೆ ಆತ್ಮಲಿಂಗ ಮುಟ್ಟಿ ಪೂಜೆಗೆ ಅವಕಾಶ ನೀಡಲಾಗುತ್ತಿತ್ತು. ಕೊರೊನಾ ಕಾರಣದಿಂದ ಈ ಹಿಂದಿನಂತೆ ಭಕ್ತರು ಆತ್ಮಲಿಂಗ ಮುಟ್ಟಿ ಒಟ್ಟಿಗೆ ಪೂಜೆ ಮಾಡುವುದು ಈಗ ಅಸಾಧ್ಯವಾಗಿದೆ.

ADVERTISEMENT

ದೇವಸ್ಥಾನದ ಮೇಲುಸ್ತುವಾರಿ ಸಮಿತಿಯ ಕಾರ್ಯದರ್ಶಿಯೂ ಆಗಿರುವ ಕುಮಟಾ ಉಪವಿಭಾಗಾಧಿಕಾರಿ ಎಂ.ಅಜಿತ್ ಸ್ಥಳಕ್ಕೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದರು.

ಕೆಲವು ಗಂಟೆ ಭಕ್ತರ ಪ್ರವೇಶಕ್ಕೆ ತಡೆ: ದೇವಸ್ಥಾನ ಬೆಳಿಗ್ಗೆ 6 ಗಂಟೆಗೇ ತೆರೆದರೂ ಸ್ಥಳೀಯರನ್ನು ಬಿಟ್ಟು ಉಳಿದ ಭಕ್ತರಿಗೆ 10 ಗಂಟೆಯವರೆಗೂ ದರ್ಶನಕ್ಕೆ ಅವಕಾಶ ನಿರಾಕರಿಸಲಾಗಿತ್ತು. ಇದರಿಂದ ಸ್ವಲ್ಪ ಕಾಲ ಗೊಂದಲದ ವಾತಾವರಣ ಉಂಟಾಗಿತ್ತು. ಉಪ ವಿಭಾಗಾಧಿಕಾರಿ ಎಂ.ಅಜಿತ್‌ ಗಮನಕ್ಕೆ ಬಂದ ನಂತರ ವ್ಯವಸ್ಥೆ ಸರಿಯಾಗಿ ಸಾಗಿತು.

ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಮೊದಲ ದಿನವಾದ ಕಾರಣ ವ್ಯವಸ್ಥೆಯಲ್ಲಿ ಸ್ವಲ್ಪ ಗೊಂದಲವಾಗಿದೆ. ದೇವಸ್ಥಾನದ ಸಿಬ್ಬಂದಿಗೆ ಬೆಳಿಗ್ಗೆಯಿಂದಲೇ ಎಲ್ಲರಿಗೂ ದರ್ಶನಕ್ಕೆ ಅವಕಾಶ ನೀಡುವಂತೆ ತಿಳಿಸಲಾಗಿತ್ತು. ಆದೇಶವನ್ನು ಸರಿಯಾಗಿ ಪಾಲಿಸದ ಕಾರಣ ಕೆಲವು ಭಕ್ತರು ದೇವರ ದರ್ಶನ ಭಾಗ್ಯದಿಂದ ವಂಚಿತರಾಗಿದ್ದಾರೆ.ಇನ್ನು ಮುಂದೆ ಹೀಗಾಗುವುದಿಲ್ಲ. ಇಲ್ಲಿಯ ಆಗು ಹೋಗುಗಳನ್ನು ನೋಡಿಕೊಳ್ಳಲು ಸೋಮಶೇಖರ ಎಂಬ ಸಿಬ್ಬಂದಿಯನ್ನು ನೇಮಿಸಲಾಗಿದೆ’ ಎಂದರು.

ಶಿರಸಿ: ದೇವಸ್ಥಾನಗಳು ಪುನರಾರಂಭಗೊಂಡರೂ ಸೋಮವಾರ ಸೀಮಿತ ಸಂಖ್ಯೆಯ ಭಕ್ತರು ದೇವರ ದರ್ಶನ ಪಡೆದರು. ನಿರೀಕ್ಷೆಯಷ್ಟು ಪ್ರಮಾಣದಲ್ಲಿ ಜನಜಂಗುಳಿ ಉಂಟಾಗಲಿಲ್ಲ.

ನಗರದ ಮಾರಿಕಾಂಬಾ ದೇವಸ್ಥಾನದಲ್ಲಿ ಭಕ್ತರ ಜಂಗುಳಿ ಹೆಚ್ಚಬಹುದು ಎಂಬ ಕಾರಣದಿಂದ ಬ್ಯಾರಿಕೇಡ್ ಅಳವಡಿಸಿ, ಅಂತರ ಕಾಯ್ದುಕೊಳ್ಳಲು ಗುರುತು ಹಾಕಲಾಗಿತ್ತು. ಬೆಳಿಗ್ಗೆಯಿಂದಲೂ ಹಂತ ಹಂತವಾಗಿ ಸೀಮಿತ ಸಂಖ್ಯೆಯ ಭಕ್ತರು ದೇವಿಯ ದರ್ಶನ ಪಡೆದರು. ಪ್ರವೇಶದ್ವಾರದಲ್ಲಿ ಥರ್ಮಲ್ ಸ್ಕ್ಯಾನರ್ ಮೂಲಕ ಪರೀಕ್ಷಿಸಿ, ಕೈಗೆ ಸ್ಯಾನಿಟೈಸರ್ ಸಿಂಪಡಿಸಿದ ಬಳಿಕವೇ ಒಳಗೆ ಬಿಡಲಾಗುತ್ತಿತ್ತು.

ಗರ್ಭಗುಡಿಯ ಹೊರ ಆವರಣದಲ್ಲಿ ನಿಂತು ನೂರಾರು ಭಕ್ತರು ದೇವಿಯ ದರ್ಶನ ಪಡೆದರು. ಎರಡು ತಿಂಗಳುಗಳಿಂದ ದೇವಿಯ ದರ್ಶನ ದೂರದಿಂದ ಪಡೆಯುತ್ತಿದ್ದ ಭಕ್ತರಲ್ಲಿ ಸಂತಸ ಮೂಡಿತ್ತು. ಮಹಾಗಣಪತಿ ದೇವಸ್ಥಾನದಲ್ಲಿ ಬೆಳಿಗ್ಗೆ ಕೆಲ ಹೊತ್ತು ಜಂಗುಳಿ ಇತ್ತು. ಬಳಿಕ ಅದು ಕಡಿಮೆಯಾಗಿತ್ತು. ಬಹುತೇಕ ದೇವಸ್ಥಾನಗಳಲ್ಲಿ ಕೋವಿಡ್ ನಿಯಮ ಪಾಲಿಸಿ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು.


ಶಿರಸಿಯ ಮಾರಿಕಾಂಬಾ ದೇವಾಲಯದಲ್ಲಿ ದೂರದಿಂದಲೇ ಭಕ್ತರು ದೇವಿಯ ದರ್ಶನ ಪಡೆದರು.

ಕುಮಟಾ: ಲಾಕ್‌ಡೌನ್ ಇನ್ನಷ್ಟು ಸಡಿಲಗೊಂಡಿರುವ ಹಿನ್ನೆಲೆಯಲ್ಲಿ ಪಟ್ಟಣದ ಕುಂಭೇಶ್ವರ, ಬಾಡದ ಕಾಂಚಿಕಾ ಪರಮೇಶ್ವರಿ ಹಾಗೂ ಶಿವನ ಪಂಚ ಕ್ಷೇತ್ರಗಳಲ್ಲಿ ಒಂದಾದ ಧಾರೇಶ್ವರದ ಧಾರಾನಾಥ ದೇವಾಲಯಗಳಲ್ಲಿ ಸೋಮವಾರ ಭಕ್ತರು ಪೂಜೆ ಸಲ್ಲಿಸಿದರು.

‘ಕುಮಟಾ ಪಟ್ಟಣಕ್ಕೆ ಈ ಹೆಸರು ಬರಲು ಕಾರಣವಾದ ಕುಂಭೇಶ್ವರ ದೇವಾಲಯಲ್ಲಿ ಹಿಂದಿನ ದಿನಗಳಿಗೆ ಹೋಲಿಸಿದರೆ ಸೋಮವಾರ ಶೇ 25ರಷ್ಟು ಭಕ್ತರು ಬಂದು ಪೂಜೆ ಸಲ್ಲಿಸಿದರು’ ಎಂದು ಪ್ರಧಾನ ಅರ್ಚಕ ವೆಂಕಟೇಶ ಭಟ್ ತಿಳಿಸಿದರು.

ಧಾರೇಶ್ವರದ ಧಾರಾನಾಥ ದೇವಾಲಯದ ಮೊಕ್ತೇಸರ ಲಕ್ಷ್ಮಣ ಪ್ರಭು ಮಾತನಾಡಿ, ಧಾರಾನಾಥ ದೇವಾಲಯ ಶಿವನ ಪಂಚ ಕ್ಷೇತ್ರಗಳಲ್ಲಿ ಒಂದು. ಗೋಕರ್ಣ, ಮುರ್ಡೇಶ್ವರದ ಶಿವ ದೇವಾಲಯಗಳಿಗೆ ಬರುವ ಭಕ್ತರೂ ಇಲ್ಲಿಯೂ ಬರುತ್ತಿದ್ದರು. ಸೋಮವಾರ ಲಾಕ್‌ಡೌನ್ ಇನ್ನಷ್ಟು ಸಡಿಲಗೊಂಡಿದ್ದರಿಂದ ಸುಮಾರು 50 ಭಕ್ತರು ಬಂದಿದ್ದರು ಎಂದರು.

ಬಾಡದ ಕಾಂಚಿಕಾ ಪರಮೇಶ್ವರಿ ದೇವಾಲಯದ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಇತ್ತು. ಈಗ ಲಾಕ್‌ಡೌನ್ ಸಂಪೂರ್ಣ ತೆರವುಗೊಂಡಿದ್ದರಿಂದ ಹಂತ ಹಂತವಾಗಿ ಭಕ್ತಾದಿಗಳಿಗೆ ಹೆಚ್ಚಿನ ವ್ಯವಸ್ಥೆ ನೀಡಬಹುದು ಎಂದು ದೇವಾಲಯದ ವ್ಯವಸ್ಥಾಪಕ ಪರಮೇಶ್ವರ ಭಂಡಾರಿ ಮಾಹಿತಿ ನೀಡಿದರು.

ಭಟ್ಕಳ: ಮುರ್ಡೇಶ್ವರ ದೇವಾಲಯ ತೆರೆದ ಸುದ್ದಿ ತಿಳಿದ 100ಕ್ಕೂ ಅಧಿಕ ಪ್ರವಾಸಿಗರು ಮುರ್ಡೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡರು. ಕಳೆದ ಎರಡೂವರೆ ತಿಂಗಳಿನಿಂದ ಬಾಗಿಲು ಮುಚ್ಚಿದ್ದ ದೇವಸ್ಥಾನದಲ್ಲಿ ಸೋಮವಾರ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಗಿತ್ತು.

ಕೋವಿಡ್ ಮಾರ್ಗಸೂಚಿ ಪ್ರಕಾರ ದೇವರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಿದ್ದು, ಪೂಜೆ, ತೀರ್ಥ ಪ್ರಸಾದಕ್ಕೆ ನಿರ್ಭಂದ ವಿಧಿಸಿಲಾಗಿತ್ತು. ದೇವಸ್ಥಾನದ ಆಡಳಿತ ಅಧಿಕಾರಿಯಾದ ಭಟ್ಕಳ ಉಪವಿಭಾಗಾಧಿಕಾರಿ ಮಮತಾ ದೇವಿ ನಿನ್ನೆ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ನಂತರ ಸಿಬ್ಬಂದಿ ಜೊತೆ ಮಾತನಾಡಿದ ಅವರು, ಕೋವಿಡ್ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸುವಂತೆ ಆದೇಶಿಸಿದರು. ಬೇರೆ ರಾಜ್ಯದಿಂದ ಬರುವ ಪ್ರವಾಸಿಗರ ಮಾಹಿತಿ, ವಾಹನ ಸಂಖ್ಯೆಗಳ ವಿವರಗಳನ್ನು ದಾಖಲಿಸಿಡುವಂತೆ ಸೂಚಿಸಿದರು.

ಭಕ್ತರು ಮುರ್ಡೇಶ್ವರ ದೇವರ ದರ್ಶನ ಪಡೆಯುವ ದೃಶ್ಯ

ಜೊಯಿಡಾ: ತಾಲ್ಲೂಕಿನ ಉಳವಿ ಚನ್ನಬಸವೇಶ್ವರ ದೇವಸ್ಥಾನದ ಬಾಗಿಲು ತೆರೆದಿದ್ದು, ಮೊದಲನೇ ದಿನವೇ ಅಪಾರ ಸಂಖ್ಯೆಯಲ್ಲಿ ಭಕ್ತರು ದೇವರ ದರ್ಶನ ಪಡೆದರು.

ಸುಮಾರು ಮೂರು ತಿಂಗಳಿನಿಂದ ಮುಚ್ಚಿದ್ದ ದೇವಸ್ಥಾನದಲ್ಲಿ ಸೋಮವಾರ ಯಾವುದೇ ಪೂಜಾ ಕಾರ್ಯಕ್ರಮಗಳು ನಡೆಯಲಿಲ್ಲ. ದೇವರಿಗೆ ಅಭಿಷೇಕ ಮಾಡಿ ಭಕ್ತರಿಗೆ ದೇವರ ದರ್ಶನದ ಅವಕಾಶ ನೀಡಲಾಯಿತು. ವೀರಶೈವ ಸಮುದಾಯದ ಪ್ರಮುಖ ತೀರ್ಥ ಕ್ಷೇತ್ರವಾದ ಈ ದೇವಾಲಯಕ್ಕೆ ದೇಶ, ರಾಜ್ಯದ ನಾನಾ ಭಾಗಗಳಿಂದ ಸರ್ವಧರ್ಮೀಯ ಭಕ್ತರು ಬರುತ್ತಾರೆ.

ಸೋಮವಾರ ಸ್ಥಳೀಯ ಭಕ್ತರು ಸೇರಿದಂತೆ ಧಾರವಾಡ, ಹುಬ್ಬಳ್ಳಿ, ಹಳಿಯಾಳ, ಬೆಳಗಾವಿ ಭಾಗದಿಂದ ಬಂದ ಭಕ್ತರು ಕೋವಿಡ್ ನಿಯಮದಂತೆ ಅಂತರ ಕಾಯ್ದುಕೊಂಡು ದೇವರ ದರ್ಶನ ಪಡೆದರು.

ಭಕ್ತರು ಬರುವ ನಿರೀಕ್ಷೆಯಲ್ಲಿ ಭಾನುವಾರ ರಾತ್ರಿಯೇ ಕ್ಷೇತ್ರದಲ್ಲಿ ಸ್ವಚ್ಛತಾ ಕಾರ್ಯ ಹಾಗೂ ಪೂರ್ವ ಸಿದ್ಧತೆ ನಡೆಸಲಾಗಿತ್ತು. ಸೋಮವಾರ ರಾಜ್ಯದ ವಿವಿಧ ಭಾಗಗಳಿಂದ ಬಂದ ಸುಮಾರು 300 ಭಕ್ತರು ದೇವರ ದರ್ಶನ ಪಡೆದರು. ದೂರದಿಂದ ಬಂದಂತಹ ಕೆಲವು ಭಕ್ತರಿಗೆ ಉಳವಿಯಲ್ಲಿ ಬೇರೆ ವ್ಯವಸ್ಥೆ ಇಲ್ಲದಿರುವುದರಿಂದ ವಸತಿ ಸೌಲಭ್ಯ ನೀಡಲಾಗುತ್ತಿದೆ. ಉಳಿದಂತೆ ಅನ್ನಪ್ರಸಾದ ಸೇರಿದಂತೆ ಇನ್ನಿತರ ಯಾವುದೇ ಸೌಲಭ್ಯಗಳನ್ನು ನೀಡದೇ ಕೇವಲ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ದೇವಸ್ಥಾನದ ಕಲ್ಮಠ ಶಾಸ್ತ್ರಿ ಹೇಳಿದ್ದಾರೆ.

ಉಳವಿ ಶ್ರೀ ಚನ್ನಬಸವೇಶ್ವರ ದೇವರ ದರ್ಶನಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.