ADVERTISEMENT

ನಾನೂ ಕಾಂಗ್ರೆಸಿಗನೇ: ಎಚ್.ಡಿ.ದೇವೇಗೌಡ

ಹೊನ್ನಾವರದಲ್ಲಿ ಜೆಡಿಎಸ್ ಪಕ್ಷದ ವರಿಷ್ಠರಿಂದ ಚುನಾವಣಾ ಪ್ರಚಾರ ಭಾಷಣ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2019, 11:40 IST
Last Updated 21 ಏಪ್ರಿಲ್ 2019, 11:40 IST
ಹೊನ್ನಾವರದಲ್ಲಿ ಭಾನುವಾರ ಹಮ್ಮಿಕೊಳ್ಳಲಾದ ಜೆಡಿಎಸ್ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದವರು
ಹೊನ್ನಾವರದಲ್ಲಿ ಭಾನುವಾರ ಹಮ್ಮಿಕೊಳ್ಳಲಾದ ಜೆಡಿಎಸ್ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದವರು   

ಹೊನ್ನಾವರ:‘ಸ್ವಾತಂತ್ರ್ಯಪೂರ್ವದಲ್ಲಿ ಮಹಾತ್ಮ ಗಾಂಧಿಯಿದ್ದ ಪಕ್ಷ ಕಾಂಗ್ರೆಸ್. ಅದೇ ಪಕ್ಷದಲ್ಲಿದ್ದ ನಾನೂ ಕಾಂಗ್ರೆಸಿಗನೇ’ ಎಂದು ಜೆಡಿಎಸ್ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.

ಲೋಕಸಭಾ ಚುನಾವಣೆಯಲ್ಲಿ ಮೈತ್ರಿಕೂಟದ ಅಭ್ಯರ್ಥಿ ಜೆಡಿಎಸ್‌ನ ಆನಂದ ಅಸ್ನೋಟಿಕರ್ ಪರ ಪಟ್ಟಣದಲ್ಲಿ ಭಾನುವಾರ ಹಮ್ಮಿಕೊಳ್ಳಲಾದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಸಂಸತ್ತಿನ ಕೊನೆಯ ಅಧಿವೇಶನದಲ್ಲಿ ನಾನು ಚುನಾವಣಾ ರಾಜಕೀಯ ನಿವೃತ್ತಿಯ ಬಗ್ಗೆ ಮಾತನಾಡಿದ್ದೆ. ಆಗನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಸೇರಿದಂತೆ ಹಲವರು ದೇಶದ ಹಿತಕ್ಕಾಗಿ ಹಾಗೆ ಮಾಡದಂತೆ ನನ್ನನ್ನು ತಡೆದರು’ ಎಂದು ತಿಳಿಸಿದರು.

ADVERTISEMENT

‘ನಾನು ಪ್ರಧಾನಿಯಾಗಿದ್ದಾಗ ವಿಧವೆಯರಿಗೆ ಮಾಸಾಶನ, ಅಲ್ಪಸಂಖ್ಯಾತರು, ಹಾಲಕ್ಕಿ ಒಕ್ಕಲಿಗರಿಗೆ ಮೀಸಲಾತಿ, ಮಹಿಳಾ ಮೀಸಲಾತಿ ಮಸೂದೆ ಮಂಡನೆ, ಹುಬ್ಬಳ್ಳಿ– ಅಂಕೋಲಾ ರೈಲು ಮಾರ್ಗ ಯೋಜನೆಗೆ ಚಾಲನೆ... ದುರ್ಬಲರನ್ನು ಮೇಲೆತ್ತಲು ಹಾಗೂ ಅಭಿವೃದ್ಧಿ ಸಾಧಿಸಲು ಇಂತಹ ಹಲವಾರು ಕಾರ್ಯಗಳನ್ನು ಮಾಡಿದ್ದೇನೆ. ಸಂವಿಧಾನ ತಿದ್ದುಪಡಿ ಮಾಡುವ ಹುನ್ನಾರವನ್ನು ಈಗಲೂ ವಿರೋಧಿಸುವ ತಾಕತ್ತು ಪ್ರದರ್ಶಿಸುತ್ತೇನೆ’ ಎಂದು ಹೇಳಿದರು.

‘ಗೋಧ್ರಾ ಹತ್ಯಾಕಾಂಡ ಮೋದಿಯ ಹೆಸರನ್ನು ಹೇಳುತ್ತದೆ. ವೈಯಕ್ತಿಕ ಭದ್ರತೆಯನ್ನೂಲೆಕ್ಕಿಸದೇಶಾಂತಿ ಸ್ಥಾಪನೆಗಾಗಿ ಅಂದು ನಾನು ಗೋಧ್ರಾಕ್ಕೆ ಹೋಗಿದ್ದೆ' ಎಂದು ನೆನಪಿಸಿಕೊಂಡರು.

ಸಚಿವಹೆಗಡೆ ವಿರುದ್ಧ ವಾಗ್ದಾಳಿ:‘ಕಾನೂನು ಬದಲಾವಣೆ ಮಾಡುವಮಾತನ್ನಾಡುವವರನ್ನು ಗೆಲ್ಲಿಸಬೇಕಾ? ಮೋದಿ ಇಂಥವರನ್ನು ತಮ್ಮ ಸಂಪುಟದಲ್ಲಿ ಇಟ್ಟುಕೊಂಡಿದ್ದಾರೆ‌.ಮೋದಿ ಚುನಾವಣಾ ಪ್ರಚಾರಕ್ಕೆ ಹೋದಾಗ ಹೆಲಿಕಾಪ್ಟರ್‌ನಲ್ಲಿ ಸಾಗಿಸಿದ ಬ್ಯಾಗ್ ತಪಾಸಣೆ ಮಾಡಿದ ಅಧಿಕಾರಿಯನ್ನು ಅಮಾನತುಮಾಡಲಾಯಿತು.ಇದು ಪ್ರಜಾಪ್ರಭುತ್ವ’ಎಂದು ಟೀಕಿಸಿದರು.

‘ಎಲ್ಲರೂ ಒಗ್ಗಟ್ಟಾಗಿ ಪ್ರಚಾರ’:ಪ್ರಚಾರ ಸಭೆಯಲ್ಲಿ ಭಾಗವಹಿಸುವುದಕ್ಕೂಮೊದಲು ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ದೇವೇಗೌಡ, ‘ಮೈತ್ರಿ ಅಭ್ಯರ್ಥಿಯ ಪರ ಪ್ರಚಾರ ಮಾಡಲು ಕಾಂಗ್ರೆಸ್ ನಾಯಕರು ಬಾರದಿರುವುದಕ್ಕೆ ಬೇರೆ ಕಾರಣಗಳಿಲ್ಲ. ಅವರೆಲ್ಲ ಪ್ರಚಾರದಲ್ಲಿ ನಿರತರಾಗಿದ್ದಾರೆ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯ ಹಿರಿಯ ಮುಖಂಡರೂ ಆಗಿರುವ ಸಚಿವಆರ್.ವಿ.ದೇಶಪಾಂಡೆ, ಈ ಭಾಗದಲ್ಲಿ ಪ್ರಭಾವ ಹೊಂದಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ಜಿಲ್ಲೆಗೆ ಎರಡು ಬಾರಿ ಭೇಟಿ ನೀಡಿ ಪ್ರಚಾರ ಮಾಡಿದ್ದಾರೆ’ ಎಂದು ಹೇಳಿದರು.

ಮುಖಂಡರಾದಆರ್.ಎನ್.ನಾಯ್ಕ, ಶಂಭು ಗೌಡ, ಜೆಡಿಎಸ್ ಮುಖಂಡರಾದ ಫಾರೂಕ್, ಮರಿತಿಬ್ಬೇಗೌಡ ಮಾತನಾಡಿದರು.
ಮುಖಂಡರಾದ ಮಂಕಾಳ ಎಸ್.ವೈದ್ಯ, ಶಾರದಾ ಶೆಟ್ಟಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಮೊಗೇರ, ಶಿವಾನಂದ ಹೆಗಡೆ, ದೀಪಕ್ ನಾಯ್ಕ, ಪ್ರಚಾರ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎನ್.ಸುಬ್ರಹ್ಮಣ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ತೆಂಗೇರಿ, ಗಣಪಯ್ಯ ಗೌಡ, ಜಿ.ಎನ್.ಗೌಡ, ಗಂಗಣ್ಣ, ರಾಜು ನಾಯ್ಕ ಇದ್ದರು. ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಆರ್.ನಾಯ್ಕ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.