ADVERTISEMENT

ಯಡಿಯೂರಪ್ಪ ಜೆಡಿಎಸ್ ಸೇರಲು ಬಂದಿದ್ದಾಗ ನಾನೇ ತಡೆದಿದ್ದೆ: ಎಚ್.ಡಿ.ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2023, 8:56 IST
Last Updated 9 ಫೆಬ್ರುವರಿ 2023, 8:56 IST
ಎಚ್.ಡಿ.ಕುಮಾರಸ್ವಾಮಿ
ಎಚ್.ಡಿ.ಕುಮಾರಸ್ವಾಮಿ   

ಕುಮಟಾ: 'ಬಿಜೆಪಿಯಲ್ಲಿ ತಾನು ಮುಂದುವರೆಯಲು ಸಾಧ್ಯವೇ ಇಲ್ಲ. ಮಂತ್ರಿ ಸ್ಥಾನ ಕೊಡುವುದಾದರೆ ಜೆಡಿಎಸ್ ಸೇರುತ್ತೇನೆ ಎಂದು ಬಿ.ಎಸ್.ಯಡಿಯೂರಪ್ಪ ಆಪ್ತರೊಬ್ಬರ ಮೂಲಕ ಚೀಟಿ ಕಳುಹಿಸಿಕೊಟ್ಟಿದ್ದರು. ಆದರೆ, ಅವರ ರಾಜಕೀಯ ಇಮೇಜ್ ಉಳಿಸಲು ಅವರನ್ನು ಬಿಜೆಪಿಯಲ್ಲೇ ಮುಂದುವರೆಯಲು ಹೇಳಿದೆ. ಸರ್ಕಾರ ರಚನೆಗೂ ಅವಕಾಶ ಮಾಡಿಕೊಟ್ಟೆ' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

'ಬಿ.ಎಸ್.ಯಡಿಯೂರಪ್ಪ ಜತೆ ನಾನು ಕೈಜೋಡಿಸಿದ ಕಾರಣಕ್ಕೆ ಅವರು ಅಧಿಕಾರ ಪಡೆದರು. ಇಲ್ಲದಿದ್ದರೆ ರಾಜಕೀಯವಾಗಿ ನಿರ್ನಾಮ ಆಗುತ್ತಿದ್ದರು. ವಿಜಯೇಂದ್ರ ರಾಜಕೀಯವಾಗಿ ಬೆಳೆಯಲೂ ಅವಕಾಶ ಆಗುತ್ತಿರಲಿಲ್ಲ' ಎಂದು ವಿಜಯೇಂದ್ರ ಹೇಳಿಕೆ ಕುರಿತು ತಾಲ್ಲೂಕಿನ ತಲಗೇರಿಯಲ್ಲಿ ಗುರುವಾರ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.

'ಒಡೆದು ಆಳುವುದು ಬಿಜೆಪಿಯ ಗುಣ. ನಮ್ಮದು (ಜೆಡಿಎಸ್) ಒಗ್ಗೂಡಿಸುವ ಗುಣ' ಎಂದು ಬ್ರಿಟೀಷರಂತೆ ಕುಮಾರಸ್ವಾಮಿ ಒಡೆದು ಆಳುತ್ತಾರೆ ಎಂಬ ಸಚಿವ ಆರ್.ಅಶೋಕ ಹೇಳಿಕೆಗೆ ತಿರುಗೇಟು ನೀಡಿದರು.

ADVERTISEMENT

'ರಾಜ್ಯಕ್ಕೆ ಕೊಡುಗೆ ನೀಡಿದ ಶಿವಮೊಗ್ಗದ ಹಲವು ಗಣ್ಯರಿದ್ದಾರೆ. ಬಿಜೆಪಿ ನಾಯಕರಿಗೆ ಅವರು ಕಣ್ಣಿಗೆ ಬಿದ್ದಿಲ್ಲವೆ?' ಎಂದು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಯಡಿಯೂರಪ್ಪ ಹೆಸರಿಡುವ ಪ್ರಸ್ತಾಪದ ಕುರಿತು ಪ್ರತಿಕ್ರಿಯಿಸಿದರು.

'ಬ್ರಾಹ್ಮಣರ ಕುರಿತ ನನ್ನ ಹೇಳಿಕೆ ತಪ್ಪಾಗಿ ಅರ್ಥೈಸಲಾಗುತ್ತಿದೆ. ಒಬ್ಬೊಬ್ಬರೂ ತಮಗೆ ತೋಚಿದಂತೆ ಪ್ರತಿಕ್ರಿಯಿಸುತ್ತಿದ್ದಾರೆ. ಬಿಜೆಪಿಯಲ್ಲಿರುವ ಪೇಶ್ವೆಗಳು ಯಡಿಯೂರಪ್ಪ ಅವರನ್ನು ಹೇಗೆ ನಡೆಸಿಕೊಂಡಿದ್ದಾರೆ ಎಂಬುದನ್ನು ಜನರು ಗಮನಿಸಿದ್ದಾರೆ. ನನ್ನ ಹೇಳಿಕೆಗೆ ಈವರೆಗೂ ಪ್ರಲ್ಹಾದ ಜೋಶಿ ಸೇರಿದಂತೆ ಯಾವ ಬಿಜೆಪಿ ನಾಯಕರೂ ಸರಿಯಾಗಿ ಪ್ರತಿಕ್ರಿಯಿಸಿಲ್ಲ' ಎಂದು ತಿರುಗೇಟು ನೀಡಿದರು.

ಇವನ್ನೂ ಓದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.