ADVERTISEMENT

ಪ್ರವಾಸೋದ್ಯಮದ ನೆಪದಲ್ಲಿ ದೊಡ್ಡ ಅವ್ಯವಹಾರ: ವಕೀಲ ಆರೋಪ

ಎಸ್.ಎಸ್.ನಕುಲ್, ಆರ್‌.ವಿ.ದೇಶಪಾಂಡೆ ವಿರುದ್ಧ ವಕೀಲ ಬಿ.ಎಸ್.ಪೈ ಗಂಭೀರ ಆರೋಪ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2019, 14:47 IST
Last Updated 2 ನವೆಂಬರ್ 2019, 14:47 IST
ಕಾರವಾರದಲ್ಲಿ ಕಡಲತೀರ ಸಂರಕ್ಷಣೆ ಹೋರಾಟಗಾರರಿಂದ ಶನಿವಾರ ನಡೆದ ಸಭೆಯಲ್ಲಿ ವಕೀಲ ಬಿ.ಎಸ್.ಪೈ ಮಾತನಾಡಿದರು
ಕಾರವಾರದಲ್ಲಿ ಕಡಲತೀರ ಸಂರಕ್ಷಣೆ ಹೋರಾಟಗಾರರಿಂದ ಶನಿವಾರ ನಡೆದ ಸಭೆಯಲ್ಲಿ ವಕೀಲ ಬಿ.ಎಸ್.ಪೈ ಮಾತನಾಡಿದರು   

ಕಾರವಾರ: ‘‌ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಹೆಸರಿನಲ್ಲಿ ಕೋಟಿ ಕೋಟಿ ಹಣ ಲೂಟಿಯಾಗಿದೆ. ಹಿಂದಿನ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ವಿರುದ್ಧ ನಾನು ಲೋಕಾಯುಕ್ತಕ್ಕೆ ದೂರು ನೀಡಿದ್ದೇನೆ. ಯಾರು ಎಷ್ಟು ಹಣ ಮಾಡಿದ್ದಾರೆ ಎಂದು ಬಹಿರಂಗಗೊಳ್ಳಲಿದೆ’ ಎಂದುವಕೀಲ ಬಿ.ಎಸ್.ಪೈ ಹೇಳಿದರು.

ನಗರದಲ್ಲಿ ಶನಿವಾರ ಹಮ್ಮಿಕೊಳ್ಳಲಾದ ‘ಕಾರವಾರ ಕಡಲತೀರಹೋರಾಟಗಾರರ ಸಭೆ’ಯಲ್ಲಿ ಮಾತನಾಡಿದ ಅವರು,ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ವಿರುದ್ಧವೂಹರಿಹಾಯ್ದರು.

‘ಲಂಡನ್ ಬ್ರಿಜ್‌ನಿಂದ ದಿವೇಕರ್ ವಾಣಿಜ್ಯ ಮಹಾ ವಿದ್ಯಾಲಯದವರೆಗಿನಜಮೀನುಸರ್ವೆಯೂ ಆಗಿಲ್ಲ. ಆದರೆ, ಈ ಜಾಗದ ಮೇಲೆ ಎಲ್ಲ ಅಧಿಕಾರಿಗಳ ಕಣ್ಣು ಬಿದ್ದಿದೆ.ಇಲ್ಲಿ ದೊಡ್ಡ ಮಟ್ಟದ ಅವ್ಯವಹಾರವಾಗಿದೆ. ಕರಾವಳಿ ನಿಯಂತ್ರಣ ವಲಯದ ಕಾಯ್ದೆ ಪ್ರಕಾರ ಈ ಸ್ಥಳದಲ್ಲಿ ಕಟ್ಟಡ, ಹೋಟೆಲ್‌ಗಳನ್ನು ನಿರ್ಮಾಣ ಮಾಡುವಂತಿಲ್ಲ. ಆದರೆ ತೆರಿಗೆ ವಸೂಲಿ ಮಾಡದೇ ಅನುಮತಿಯೂ ಇಲ್ಲದೇ ಕಡಲತೀರದಲ್ಲಿ ಹೋಟೆಲ್‌ಗಳನ್ನು ನಿರ್ಮಿಸಲಾಗಿದೆ. ಕಾನೂನು ಬಾಹಿರವಾದ ಹೋಟೆಲ್‌ಗಳನ್ನು ಆರ್.ವಿ.ದೇಶಪಾಂಡೆ ಉದ್ಘಾಟನೆ ಮಾಡಿದ್ದಾರೆ’ ಎಂದು ಅವರು ಆರೋಪಿಸಿದರು.

ADVERTISEMENT

‘ಅಧಿಕಾರಿಗಳನ್ನು ನಂಬಿಕೊಂಡರೆ ನ್ಯಾಯ ಸಿಗುವುದಿಲ್ಲ. ಇದರ ವಿರುದ್ಧ ನಾವೆಲ್ಲರೂ ಕಾನೂನಾತ್ಮಕವಾಗಿ ಹೋರಾಡೋಣ’ ಎಂದು ಸಲಹೆ ನೀಡಿದರು.

ನಗರಸಭೆ ಸದಸ್ಯ ಡಾ.ನಿತಿನ್ ಪಿಕಳೆ ಮಾತನಾಡಿ, ‘ಕಡಲು ಕೇವಲ ಒಂದೇ ಸಮುದಾಯಕ್ಕೆ ಸಂಬಂಧಪಟ್ಟಿದ್ದಲ್ಲ. ಇಡೀ ತಾಲ್ಲೂಕಿನ ಜನರು ಇದರ ರಕ್ಷಣೆಗೆ ಮುಂದಾಗಬೇಕು. ತಟರಕ್ಷಕ ದಳಕ್ಕೆ ಜಾಗ ನೀಡಿದರೆ ಇಲ್ಲಿನ ಪ್ರವಾಸೋದ್ಯಮ ನಶಿಸುತ್ತದೆ. ಇಲ್ಲಿನ ಹಲವು ಕಡಲತೀರಗಳು ಈ ಕಾರಣದಿಂದಲೇಇತಿಹಾಸವಾಗಿ ಹೋಗಿವೆ. ಸೀಬರ್ಡ್‌ನಂತಹ ಯೋಜನೆ ಬಂದಾಗ ನಾವೆಲ್ಲರೂ ಮೌನ ವಹಿಸಿ ಮಾಡಿದ ತಪ್ಪುಪುನರಾವರ್ತನೆ ಆಗುವುದು ಬೇಡ’ ಎಂದರು.

ಹೋರಾಟಗಾರರ ಸಂಘದ ಪ್ರಮುಖ ಪ್ರಸಾದ ರೇವಣಕರ್ ಮಾತನಾಡಿ, ‘ಮೀನುಗಾರರ ಗುಡಿಸಲುಗಳನ್ನು ನೆಲಸಮ ಮಾಡಿ, ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸಿದರು.ಆದರೆ, ಮೀನುಗಾರರುಸೌಲಭ್ಯ ವಂಚಿತರಾದರು. ಮೀನು ಒಣಗಿಸಲೂ ಸ್ಥಳಾವಕಾಶವಿಲ್ಲ. ತಾಲ್ಲೂಕಿನ ಜನತೆಗೆ ಕಡಲತೀರ ಅವಶ್ಯವಿದ್ದು, ಉಳಿವಿಗೆ ಒಕ್ಕೊರಲಿನಿಂದ ಹೋರಾಡೋಣ’ ಎಂದು ಹೇಳಿದರು.

ವಕೀಲ ಆರ್‌.ಎಸ್.ನಾಯ್ಕ ಜಿಲ್ಲಾಧಿಕಾರಿ ಕಚೇರಿಗೆ ಘೇರಾವ್ ಹಾಕುವ ಎಚ್ಚರಿಕೆ ನೀಡಿದರು. ಗಣಪತಿ ಮಾಂಗ್ರೆ, ಪ್ರೀತಮ್ ಮಾಸೂರಕರ್, ರಾಮಾ ನಾಯ್ಕ, ಪ್ರಭಾಕರ ಮಾಳ್ಸೇಕರ್, ಗಂಗಾಧರ ಹಿರೇಗುತ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.