
ಕಾರವಾರ: ತಾಲ್ಲೂಕಿನ ಕಾಳಿ ನದಿ ವ್ಯಾಪ್ತಿಯಲ್ಲಿ ಹೊರ ಜಿಲ್ಲೆಗಳಿಂದ ಬಂದು ಒಳನಾಡು ಮೀನುಗಾರಿಕೆ ನಡೆಸುತ್ತಿರವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಪಾಗಿ ಮೀನುಗಾರರ ಸಹಕಾರ ಸಂಘದ ಸದಸ್ಯರು ಮಂಗಳವಾರ ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಅವರಿಗೆ ಮನವಿ ಸಲ್ಲಿಸಿದರು.
‘ಕದ್ರಾ, ಮಲ್ಲಾಪುರ, ಬೋಳೆ, ಇರಪಾಗೆ, ಬಾಳ್ನಿ, ಕೆರವಡಿ, ಖಾರ್ಗಾ ಹಾಗೂ ಉಳಗಾ ವ್ಯಾಪ್ತಿಯಲ್ಲಿರುವ ಪಾಗಿ ಸಮಾಜದ ಮೀನುಗಾರರು ಕಾಳಿನದಿಯಲ್ಲಿ ಮೀನುಗಾರಿಕೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಮಲ್ಲಾಪುರ ಮತ್ತು ಕೆರವಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಳಿ ನದಿ ಪ್ರದೇಶವು ಇಲ್ಲಿನವರಿಗೆ ಮೀನುಗಾರಿಕೆಗೆ ಆಶ್ರಯತಾಣವಾಗಿದೆ. ಇಲ್ಲಿ ಮೀನುಗಾರಿಕೆ ನಡೆಸಿಕೊಂಡು ಅದರಿಂದ ಬರುವ ಆದಾಯದಿಂದ ಸಮುದಾಯದವರು ಜೀವನ ಸಾಗಿಸುತ್ತಿದ್ದಾರೆ. ಆದರೆ, ಹೊರ ಜಿಲ್ಲೆಗಳಿಂದ ಬಂದ ಕೆಲವರು ಅವೈಜ್ಞಾನಿಕ ವಿಧಾನಗಳನ್ನು ಅನುಸರಿಸಿ ಮೀನುಗಾರಿಕೆ ನಡೆಸುತ್ತಿದ್ದಾರೆ’ ಎಂದು ದೂರಿದರು.
‘ಅವೈಜ್ಞಾನಿಕವಾದ ಪದ್ಧತಿಯಲ್ಲಿ ಮೀನುಗಾರಿಕೆ ನಡೆಸಿ ಸಂತಾನೋತ್ಪತ್ತಿಗೆ ಬಂದು ಮೀನುಗಳು ಮತ್ತು ಮೀನು ಮರಿಗಳನ್ನು ಹಿಡಿಯುವ ಮೂಲಕ ಈ ಭಾಗದಲ್ಲಿ ಮತ್ಸ್ಯಕ್ಷಾಮಕ್ಕೆ ಕಾರಣರಾಗುತ್ತಿದ್ದಾರೆ. ಅಲ್ಲದೇ, ನಸುಕಿನಲ್ಲಿ ಮೀನುಗಾರಿಕೆಗೆ ನಡೆಸಲು ಹೋಗುತ್ತಿರುವ ಸ್ಥಳೀಯ ಮೀನುಗಾರರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಇದು ಮೀನುಗಾರರ ಮಧ್ಯೆ ಸಂಘರ್ಷದ ವಾತಾವರಣ ನಿರ್ಮಾಣವಾಗುವಂತೆ ಮಾಡಿದೆ’ ಎಂದು ದೂರಿದರು.
ಯುವ ಮೀನುಗಾರರ ಸಂಘರ್ಷ ಸಮಿತಿ ಅಧ್ಯಕ್ಷ ವಿನಾಯಕ ಹರಿಕಂತ್ರ, ಸಹಕಾರ ಸಂಘದ ಸದಸ್ಯರಾದ ವಿಶ್ವಾಸ ತಳಪಣಕರ, ಶ್ಯಾಮ ಪಾಗಿ, ಸಂದೀಪ ಪಾಗಿ, ರಾಜು ಪಾಗಿ, ಕೃಷ್ಣಾನಂದ ಪಾಗಿ, ಅಬೂ ಪಾಗಿ, ಸುಭಾಷ್ ಪಾಗಿ, ಸತ್ಯವಾನ್ ಪಾಗಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.